ಓವೈಸಿ ತೆಲಂಗಾಣ ವಿಧಾನಸಭೆ ಹಂಗಾಮಿ ಸ್ಪೀಕರ್

ಹೈದರಾಬಾದ್,ಡಿ.೯- ತೆಲಂಗಾಣ ವಿಧಾನಸಭೆಯ ಹಂಗಾಮಿ ವಿಧಾನಸಭೆ ಅಧ್ಯಕ್ಷರನ್ನಾಗಿ ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ -ಎಐಎಂಐಎಂ ಶಾಸಕ ಅಕ್ಬರುದ್ದೀನ್ ಓವೈಸಿ ಅವರನ್ನು ರಾಜ್ಯಪಾಲರಾದ ತಮಿಳಿ ಸಾಯಿ ಸೌಂದರರಾಜನ್ ನೇಮಕ ಮಾಡಿದ್ದಾರೆ.
ಹೊಸದಾಗಿ ಚುನಾಯಿತರಾದ ಶಾಸಕರಿಗೆ ಹಂಗಾಮಿ ಸ್ಪೀಕರ್ ಪ್ರಮಾಣವಚನ ಬೋಧಿಸಿದರು. ಮುಖ್ಯಮಂತ್ರಿ ರೇವಂತ್ ರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದಿದ್ದು ಸರ್ಕಾರದ ಮೊದಲ ಅಧಿವೇಶನ ಇಂದಿನಿಂದ ಆರಂಭವಾಗಿದೆ.
ಸಂವಿಧಾನದ ೧೭೮ ನೇ ವಿಧಿಯ ಅಡಿಯಲ್ಲಿ ವಿಧಾನಸಭೆ ಅಧ್ಯಕ್ಷರು ಚುನಾಯಿತರಾಗುವವರೆಗೆ ಅಕ್ಬರುದ್ದೀನ್ ಓವೈಸಿ ಸ್ಪೀಕರ್ ಅವರ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ.
ವಿಧಾನಸಭೆಯ ಅತ್ಯಂತ ಹಿರಿಯ ಸದಸ್ಯರಾಗಿರುವ ಎಐಎಂಐಎಂ ಶಾಸಕ ಒವೈಸಿ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸ ಲಾಗಿದೆ.
ಈಗಷ್ಟೇ ಮುಗಿದ ವಿಧಾನಸಭೆ ಚುನಾವಣೆಯಲ್ಲಿ ಅಕ್ಬರುದ್ದೀನ್ ಓವೈಸಿ ಅವರು ಹೈದರಾಬಾದ್‌ನ ಚಂದ್ರಾಯನಗುಟ್ಟಾ ಕ್ಷೇತ್ರದಿಂದ ಸತತ ಆರನೇ ಅವಧಿಗೆ ಆಯ್ಕೆಯಾಗಿದ್ದಾರೆ. ೨೦೧೮ ರಲ್ಲಿ ಮುಮ್ತಾಜ್ ಅಹ್ಮದ್ ಖಾನ್ ನಂತರ ಎಐಎಂಐಎಂನ ಶಾಸಕರೊಬ್ಬರು ಹಂಗಾಮಿ ಸ್ಪೀಕರ್ ಆಗಿ ಎರಡನೇ ಬಾರಿ ನೇಮಕಗೊಂಡಿದ್ದಾರೆ.

ಪ್ರಮಾಣ ವಚನ ಸ್ವೀಕರಿಸಲ್ಲ
ಮುಸ್ಲಿಂ ಶಾಸಕರಾಗಿರುವ ಅಕ್ಬರುದ್ದೀನ್ ಓವೈಸಿ ಅವರು ಹಂಗಾಮಿ ವಿಧಾನಸಭೆ ಅಧ್ಯಕ್ಷರಾಗಿರಿದ್ದು ಅವರ ಮುಂದೆ ಬಿಜೆಪಿ ಯಾವ ಶಾಸಕರೂ ಪ್ರಮಾಣ ವಚನ ಸ್ವೀಕರಿಸುವುದಿಲ್ಲ ಎಂದು ಎಂದು ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಹೇಳಿದ್ದಾರೆ.
ಓವೈಸಿ ಅವರ ಮುಂದೆ ಎಂದಿಗೂ ಪ್ರಮಾಣ ವಚನ ಸ್ವೀಕರಿಸುವುದಿಲ್ಲ .೨೦೧೮ರಂತೆಯೇ ಮೊದಲ ದಿನವೇ ಪ್ರಮಾಣ ವಚನ ಸ್ವೀಕರಿಸುವುದಿಲ್ಲ ಮತ್ತು ಪೂರ್ಣಾವಧಿ ಸ್ಪೀಕರ್ ನೇಮಕವಾಗುವ ತನಕ ಕಾಯುತ್ತೇವೆ ಎಂದಿದ್ದಾರೆ.
ಒವೈಸಿ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರನ್ನು ಓಲೈಸಲು ಬಿಆರೆಸ್‌ನ ಹಾದಿಯಲ್ಲಿ ಸಾಗುತ್ತಿದೆ ಎಂದು ಆರೋಪಿಸಿದ್ದಾರೆ. ೧೧೯ ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ ಎಂಟು ಸದಸ್ಯರನ್ನು ಹೊಂದಿದೆ.
“ಇದು ಅತ್ಯಂತ ದುರದೃಷ್ಟಕರ, ಕಾಂಗ್ರೆಸ್ ಸರ್ಕಾರ ರಚನೆಯಾದ ಬಳಿಕ ನಿಜವಾದ ಮುಖ ಬಯಲಿಗೆ ಬಂದಿದೆ. ಪ್ರತಿ ಬಾರಿಯೂ ಬಿಜೆಪಿ ಎಐಎಂಐಎಂ ಮತ್ತು ಬಿಆರ್‌ಎಸ್ ಎಂದು ರೇವಂತ್ ರೆಡ್ಡಿ ಹೇಳಿಕೆ ನೀಡುತ್ತಿದ್ದರು. ಈಗ ಆ ಪಕ್ಷದ ನಾಯಕನ್ನೇ ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಲಾಗಿದೆ ಎಂದಿದ್ದಾರೆ.