ಓಮಿಕ್ರಾನ್ ಆತಂಕ ಬೇಡ

ನ್ಯೂಯಾರ್ಕ್, ನ.೩೦- ಕೊರೊನಾದ ಹೊಸ ರೂಪಾಂತರಿ ತಳಿ ಓಮಿಕ್ರಾನ್ ಬಗ್ಗೆ ಜನರು ಹೆಚ್ಚಿನ ಜಾಗರೂಕತೆ ವಹಿಸಿಕೊಳ್ಳಬೇಕೇ ವಿನಹ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ತಿಳಿಸಿದ್ದಾರೆ.
ಇಷ್ಟು ದಿನಗಳ ಕಾಲ ಆಫ್ರಿಕಾ ಸೇರಿದಂತೆ ಹಲವೆಡೆ ಕಾಣಿಸಿಕೊಂಡಿದ್ದ ಓಮಿಕ್ರಾನ್ ರೂಪಾಂತರಿ ಇದೀಗ ಉತ್ತರ ಅಮೆರಿಕಾ (ಕೆನಡಾ)ದಲ್ಲೂ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಇಡೀ ಅಮೆರಿಕಾದ್ಯಂತ ಸದ್ಯ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಬೈಡೆನ್ ಪ್ರತಿಕ್ರಿಯೆ ನೀಡಿದ್ದಾರೆ. ನಾಗರಿಕರು ಕೊರೊನಾದ ಎರಡೂ ಡೋಸ್‌ಗಳನ್ನು ಸರಿಯಾಗಿ ತೆಗೆದುಕೊಳ್ಳಬೇಕು. ಜೊತೆಗೆ ಮಾಸ್ಕ್ ಧಾರಣೆ ಕೂಡ ಮಾಡಬೇಕು. ಇದರ ಬಗ್ಗೆ ಹೆಚ್ಚಿನ ಮುನ್ನೆಚ್ಚರಿಕೆ ಹಾಗೂ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕೇ ವಿನಹ ಆತಂಕ ಪಡಬೇಕಿಲ್ಲ. ಅಲ್ಲದೆ ದೇಶದಲ್ಲಿ ಲಾಕ್‌ಡೌನ್ ಮಾಡುವ ಯಾವುದೇ ಅಗತ್ಯತೆ ಇಲ್ಲ ಎಂದು ಬೈಡೆನ್ ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಓಮಿಕ್ರಾನ್ ಸೋಂಕು ಕಾಣಿಸಿಕೊಂಡ ಬಳಿಕ ಇತರೆ ಕೆಲವು ದೇಶಗಳಲ್ಲೂ ಇದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಬ್ರಿಟನ್, ಯುರೋಪಿಯನ್ ಯೂನಿಯನ್, ಅಮೆರಿಕಾ ಸೇರಿದಂತೆ ಆಫ್ರಿಕಾದ ಎಂಟು ದೇಶಗಳ ಮೇಲೆ ಪ್ರಯಾಣ ನಿರ್ಬಂಧವನ್ನು ಹೇರಲಾಗಿತ್ತು.