ಓಮಕಾಳಿನ ಉಪಯೋಗಗಳು

ಈಗೀಗ ಹೆಚ್ಚಿನವರಿಗೆ ಅಜೀರ್ಣ, ಹೊಟ್ಟೆನೋವು, ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಇವೆಲ್ಲವುಗಳಿಗೆ ಓಮಕಾಳಿನ ಕಷಾಯ ಮಾಡಿ ಕುಡಿದರೆ ಬಲುಬೇಗ ಪರಿಹಾರ ಕಂಡುಬರುತ್ತದೆ. ಜೊತೆಗೆ ಹಲವು ಉಪಯೋಗಗಳಿವೆ.
ಓಮಕಾಳಿನ ಪುಡಿಯನ್ನು ಕೊಬ್ಬರಿ ಎಣ್ಣೆಯೊಂದಿಗೆ ಬೆರಸಿ ಬಿಸಿಮಾಡಿ ಆರಿದ ನಂತರ ಪ್ರತಿ ಸಲಕ್ಕೆ ನಾಲ್ಕು ಹನಿಗಳಷ್ಟು ಹಾಕಿದರೆ ಕಿವಿನೋವು, ಕಿವಿ ಸೋರುವುದು ನಿವಾರಣೆಯಾಗುತ್ತದೆ. ಬಾಣಂತಿಯರು, ಹಾಲುಣಿಸುವ ತಾಯಂದಿರ ಅಜೀರ್ಣ ದೋಷ ಪರಿಹಾರಕ್ಕೆ ಒಂದು ಲೋಟ ಓಮಕಾಳಿನ ಪುಡಿಗೆ ಒಂದು ಚಮಚ ಸಕ್ಕರೆ ಬೆರಸಿ ಒಂದು ಲೋಟ ನೀರಿನಲ್ಲಿ ಕುದಿಸಿ ಆಗಾಗ್ಗೆ ಕುಡಿಯುತ್ತಿರಬೇಕು. ಇದರಿಂದ ಜೀರ್ಣಕೋಶದ ತೊಂದರೆಗಳು ನಿವಾರಣೆಯಾಗುತ್ತದೆ.ಮತ್ತು ಜೀರ್ಣಶಕ್ತಿ ಹೆಚ್ಚಿ ಆಹಾರದ ರುಚಿಯುಂಟಾಗುತ್ತದೆ. ಮಕ್ಕಳು ಹಾಸಿಗೆಯಲ್ಲಿ ರಾತ್ರಿ ಮೂತ್ರಮಾಡಿಕೊಳ್ಳುತ್ತಿದ್ದರೆ ಮಕ್ಕಳು ಮಲಗುವ ಮುಂಚೆ ಒಂದು ಚಿಟಿಕೆ ಓಮದ ಕಾಳಿನ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ನೆಕ್ಕಿಸಬೇಕು ಅಥವಾ ನೀರಿನಲ್ಲಿ ಬೆರೆಸಿ ಕುಡಿಸಬೇಕು. ಓಮಕಾಳನ್ನು ಸ್ವಲ್ಪ ಬಾಯಿಯಲ್ಲಿ ಹಾಕಿಕೊಂಡು ಚೆನ್ನಾಗಿ ಜಗಿದು ನುಂಗಿದರೆ ಬಾಯಿಯ ದುರ್ವಾಸನೆ, ದಂತಕ್ಷಯ ಕಡಿಮೆಯಾಗುತ್ತದೆ. ಓಮಕಾಳನ್ನು ಸ್ವಲ್ಪ ಕಲ್ಲುಸಕ್ಕರೆಯೊಂದಿಗೆ ಬಾಯಿಯಲ್ಲಿ ಹಾಕಿಕೊಡು ಜಗಿಯುತ್ತ ರಸ ನುಂಗಿದರೆ ಬಿಕ್ಕಳಿಕೆ ಕಡಿಮೆಯಾಗುತ್ತದೆ.