ಓಬವ್ವಳ ಬಗ್ಗೆ ಇತಿಹಾಸ ದಾಖಲಿಸುವಲ್ಲಿ ನಿರ್ಲಕ್ಷ್ಯ:ರಂಗನಾಥ ಭೀಮಸಮುದ್ರ 


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ನ. 13 :- ರಾಜಾಡಳಿತ ವ್ಯವಸ್ಥೆಯಲ್ಲಿ ಪಂಡಿತರು ಮತ್ತು ವಿದ್ವಾಂಸರು ಆಶ್ರಯ ನೀಡಿದ ರಾಜನ ಕುರಿತು ವೈಭವೀಕರಿಸಿ ಇತಿಹಾಸ ದಾಖಲಿಸುವುದು ಸಹಜ. ಆದರೆ, ಶ್ರಮಿಕರು, ಸೇವಕರ ಕುರಿತು ಇತಿಹಾಸ ದಾಖಲಿಸಲು ನಿರ್ಲಕ್ಷ್ಯ ಮಾಡಿದ್ದಾರೆ ಎನ್ನಬಹುದು ಎಂದು ಪತ್ರಕರ್ತ ರಂಗನಾಥ ಭೀಮಸಮುದ್ರ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ತಾಲೂಕಿನ ಗುಡೇಕೋಟೆ ಗ್ರಾಮದ ಸರ್ಕಾರಿ ಪಿಯು ಕಾಲೇಜ್ ನಲ್ಲಿ ಶುಕ್ರವಾರ ಆಯೋಜಿಸಿದ್ದ ಒನಕೆ ಓಬವ್ವ ಮತ್ತು ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಒನಕೆ ಓಬವ್ವರ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತ .
 ನಿರ್ಲಕ್ಷ್ಯ ತೋರಿರುವುದಕ್ಕೆ ತಾಜಾ ಉದಾಹರಣೆಯಾಗಿ, ಚಿತ್ರದುರ್ಗದ ಕೋಟೆಯ ಮೇಲೆ ದಂಡೆತ್ತಿ ಬಂದಿದ್ದ ಹೈದರಾಲಿ ಸೈನಿಕರ ವಿರುದ್ಧ ಒನಕೆ ಓಬವ್ವ ಹೋರಾಡಿದ ಐತಿಹಾಸಿಕ ಘಟನೆ ಇದ್ದರೂ ಸೂಕ್ತವಾಗಿ ಅದನ್ನು ದಾಖಲಿಸುವ ಕೆಲಸ ಅಸ್ಥಾನಿಕ ವಿದ್ವಾಂಸರು ಮಾಡುವಲ್ಲಿ ನಿರ್ಲಕ್ಷ್ಯ ಮಾಡಿದ್ದಾರೆ ಎನ್ನುವುದಾಗಿದೆ. ಅದಕ್ಕೆ, ಆ ವೀರವನಿತೆ ಒನಕೆ ಓಬವ್ವ ಅವರು ಛಲವಾದಿ ಎಂಬ ತಳ ಸಮುದಾಯಕ್ಕೆ ಸೇರಿದ ಮಹಿಳೆಯೆಂಬ ಕಾರಣವಿರಬಹುದು ಎಂದು ತಿಳಿಸಿದರು.
ಅರಸೊತ್ತಿಗೆಯ ಮನೆತನದವಳಲ್ಲದ ಒನಕೆ ಓಬವ್ವ, ಗುಡೇಕೋಟೆ ಸಂಸ್ಥಾನದ ಕಹಳೆ ಸೇವಕನ ಮಗಳು. ಆದರೆ, ಆ ನಾರಿ ದಿಟ್ಟತನದಿಂದ ಹೋರಾಡಿದ್ದು ಮಾತ್ರ ಅನ್ನ, ಆಶ್ರಯ ನೀಡಿದ್ದ ಚಿತ್ರದುರ್ಗ ಪಾಳೇಗಾರ ಸಂಸ್ಥಾನ ರಕ್ಣಣೆಗಾಗಿ. ಇಂತಹ ವೀರವನಿತೆಗೆ ಜನ್ಮನೀಡಿದ ಪುಣ್ಯಭೂಮಿ ಗುಡೇಕೋಟೆ ಎನ್ನುವುದು ಹೆಗ್ಗಳಿಕೆಯಾಗಿದೆ ಎಂದು ಪತ್ರಕರ್ತ ಭೀಮಸಮುದ್ರ ರಂಗನಾಥ  ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪನ್ಯಾಸಕ ನಾಗರಾಜ ಕೊಟ್ರಪ್ಪನವರ್ ಭಕ್ತ ಕನಕದಾಸರ ಕುರಿತು ಮಾತನಾಡಿ, ದಾಸಶ್ರೇಷ್ಠ ಕನಕದಾಸರು ಸಮಾಜದ ತಾರತಮ್ಯ, ಅಸಮಾನತೆ, ಮೂಢನಂಬಿಕೆಯಂಥ ಅನೇಕ ಸಂಗತಿಗಳ ವಿರುದ್ಧ ಕೀರ್ತನೆಗಳನ್ನು ಹಾಡುವ ಮೂಲಕ ಎಚ್ಚರಿಸುವ ಕೆಲಸ ಮಾಡಿದ ದಾಸರು ಎಂದು ತಿಳಿಸಿದರು.
ಕೂಡ್ಲಿಗಿಯ ಸುನೀಲ್ ಗೌಡರ ಮಾತೋಶ್ರೀ ಗೌಡ್ರ ಗಂಗಮ್ಮ ಅವರ ಜ್ಞಾಪಕಾರ್ಥವಾಗಿ ಲೇಖಕ ಭೀಮಣ್ಣ ಗಜಾಪುರ ಬರೆದ “ಗುಡೇಕೋಟೆ ಗಟ್ಟಿಗಿತ್ತಿ ಒನಕೆ ಓಬವ್ವ” ಪುಸ್ತಕವನ್ನು ಕಾಲೇಜ್ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಚಿದಾನಂದಪ್ಪ, ಸಿದ್ದಲಿಂಗಪ್ಪ, ಬಸವರಾಜ, ನಳಿನಾ, ರಾಜೇಶ್ ಸೇರಿ ಅನೇಕರು ಇದ್ದರು.
ಕಾರ್ಯಕ್ರಮಕ್ಕೂ ಮುನ್ನ ವೀರವನಿತೆ ಒನಕೆ ಓಬವ್ವ ಮತ್ತು ಕನಕದಾಸರ ಭಾವಚಿತ್ರಗಳ  ಮೆರವಣಿಗೆ ನಡೆಸಿ ಅವುಗಳಿಗೆ ಪುಷ್ಪ ನಮನ ಅರ್ಪಿಸಿ ಕಾರ್ಯಕ್ರಮ ನಡೆಸಲಾಯಿತು.