ಓಪೆಕ್ ಆಸ್ಪತ್ರೆ : ಬಡ ರೋಗಿಗಳ ಚಿಕಿತ್ಸೆ – ನಿರ್ಲಕ್ಷ್ಯ ಆರೋಪ

ರಾಯಚೂರು.ನ.೦೭- ಓಪೆಕ್ ಆಸ್ಪತ್ರೆಯಲ್ಲಿ ನರರೋಗ ಸೇರಿದಂತೆ ಯಾವುದೇ ಚಿಕಿತ್ಸೆ ನಿರ್ವಹಿಸಲು ಉಪಕರಣಗಳು ಇಲ್ಲದೆ, ಬಡ ರೋಗಿಗಳನ್ನು ಬೆಂಗಳೂರು ಮತ್ತಿತರ ಪ್ರದೇಶಗಳಿಗೆ ಕಳುಹಿಸುವ ಮೂಲಕ ಭಾರೀ ಆರ್ಥಿಕ ನಷ್ಟಕ್ಕೆ ಗುರಿಯಾಗುವಂತೆ ಮಾಡಲಾಗುತ್ತದೆಂದು ಅಬ್ದುಲ್ ಶಾಲಂ ತಿಳಿಸಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಓಪೆಕ್ ಆಸ್ಪತ್ರೆಯಲ್ಲಿ ನರರೋಗ ಚಿಕಿತ್ಸೆಗೆ ಸಂಬಂಧಿಸಿ ರೋಗಿಗಳಿಗೆ ಯಾವುದೇ ಉಪಚಾರ ಮಾಡುತ್ತಿಲ್ಲ. ಇದರಿಂದ ಅನೇಕರಿಗೆ ತೀವ್ರ ಸಮಸ್ಯೆಯಾಗಿದೆ. ಬಡ ರೋಗಿಗಳು ಅತ್ಯಂತ ಆರ್ಥಿಕ ಸಂಕಷ್ಟದಲ್ಲಿ ಬೆಂಗಳೂರು ಮತ್ತಿತರ ಮಹಾನಗರಗಳಿಗೆ ತೆರಳುವಂತಹ ಪರಿಸ್ಥಿತಿ ಇದೆ. ಪ್ರತಿಯೊಬ್ಬ ರೋಗಿಯನ್ನು ಖಾಸಗಿ ಆಸ್ಪತ್ರೆ ಚಿಕಿತ್ಸೆಗೆ ಶಿಫಾರಸ್ಸು ಮಾಡಲಾಗುತ್ತದೆ. ಓಪೆಕ್ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ವರ್ಗದ ಸೌಲಭ್ಯಗಳಿದ್ದರೂ, ಇಲ್ಲಿ ಚಿಕಿತ್ಸೆ ಮಾತ್ರ ಕೈಗೊಳ್ಳಲಾಗುತ್ತಿಲ್ಲ.
ಉಪಕರಣಗಳ ಕೊರತೆ ಇದಕ್ಕೆ ಪ್ರಮುಖ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಅಧಿಕಾರಿವರೆಗೂ ಈ ಬಗ್ಗೆ ದೂರು ನೀಡಲಾಗಿದೆ. ಆದರೆ, ಯಾವುದೇ ಉಪಯೋಗವಾಗಿಲ್ಲ. ತನಿಖೆ ಕೈಗೊಳ್ಳಲು ಆದೇಶಿಸಿದ್ದರೂ, ತನಿಖೆ ನಡೆಯುತ್ತಿಲ್ಲ. ಸಾರ್ವಜನಿಕರ ಈ ಸಮಸ್ಯೆಯನ್ನು ಮೇಲಾಧಿಕಾರಿಗಳು ಗಮನಿಸಿ, ತಕ್ಷಣವೇ ಕ್ರಮ ಕೈಗೊಳ್ಳದಿದ್ದರೆ, ರೋಗಿಗಳಿಗೆ ಭಾರೀ ನಷ್ಟವಾಗುತ್ತದೆಂದು ಅವರು ಹೇಳಿದರು.