ಓದುವ ಹವ್ಯಾಸ ರೂಢಿಸಿಕೊಳ್ಳಿ: ಡಾ. ಸತೀಶಕುಮಾರ

ಕಲಬುರಗಿ:ಡಿ.28: ಮಾನಸಿಕ ಸದೃಢತೆ ಹಾಗೂ ನೆಮ್ಮದಿಗೆ ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ. ಸತೀಶಕುಮಾರ ಹೊಸಮನಿ ಅಭಿಪ್ರಾಯಪಟ್ಟರು.

ನಗರದ ಅನ್ನಪೂರ್ಣ ಕ್ರಾಸ್ ಹತ್ತಿರವಿರುವ ಕಲಾಮಂಡಳ ಸಭಾಂಗಣದಲ್ಲಿ ಭಾನುವಾರ ಸಂಜೆ ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಶರಣಮಾರ್ಗ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ಡಾ. ಶಿವರಂಜನ್ ಸತ್ಯಂಪೇಟೆ ಸಂಪಾದಿತ ‘ಕೊರೊನಾ ಕಲಿಸಿದ ಪಾಠ’ ಎಂಬ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಕೊರೊನಾ ಭೀತಿಯ ಸಂದರ್ಭದಲ್ಲಿ ಮಾನವನಲ್ಲಿ ಮಾನಸಿಕ ಬದಲಾವಣೆ ಮಾಡಿದಲ್ಲದೆ, ಸಾಹಿತಿಗಳಾಗೋಕೆ ಅದು ಪ್ರೇರಣೆ ನೀಡಿದೆ, ಈ ವೈರಾಣುವಿನಿಂದ ಸಮಾಜದಲ್ಲಿ ಹಲವು ಪರಿವರ್ತನೆಯಾಗಿದ್ದರಿಂದ ಭಾರಿ ಪ್ರಮಾಣದಲ್ಲಿ ಡಿಜಿಟಲ್ ಓದುಗರನ್ನು ಹುಟ್ಟಿಸಿದೆ, ಹೀಗಾಗಿಯೇ ಡಿಜಿಟಲ್ ಗ್ರಂಥಾಲಯದ ಸದಸ್ಯತ್ವಕ್ಕೆಯಲ್ಲಿ 8 ಲಕ್ಷಕ್ಕೂ ಮೀರಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಓದಿನ ಹವ್ಯಾಸ ಬೆಳಸಿಕೊಳ್ಳಬೇಕೆಂದರು.

ಕಲ್ಯಾಣ ಕರ್ನಾಟಕದಲ್ಲಿ ಸಾಹಿತಿಗಳ ಕೊರತೆಯಿಲ್ಲ, ತಿಂಗಳಿಗೊಮ್ಮೆ ಹಲವಾರು ಪುಸ್ತಕಗಳು ಹೊರಬರುತ್ತವೆ, ಈ ಭಾಗದ ಲೇಖಕರ ಕೃತಿಗಳನ್ನು ಓದಿ, ಅವರನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ತಿಳಿಸಿದರು.

ಕೊರೊನಾ ವೈರಾಣುವಿನಿಂದಾಗಿ ಪರಿಸರವು ಕಲ್ಮಶದಿಂದ ಹೊರಬಂದಿದೆ, ಅಷ್ಟೇ ಅಲ್ಲದೆ, ವಿಭಕ್ತ ಕುಟುಂಬಗಳು ಸಹ ಅವಿಭಕ್ತ ಕುಟುಂಬಗಳಾಗಿ ಪರಿವರ್ತನೆಯಾಗಿರುವ ಘಟನೆಗಳು ಹಲವೆಡೆ ಸಾಕ್ಷಿಯಾಗಿವೆ, ಹೀಗಾಗಿ ನಿಸರ್ಗದೊಂದಿಗೆ ಹೊಂದಿಕೊಂಡು ಜೀವನ ಸಾಗಿಸುವುದನ್ನು ಅನುಭವಿಸಿರುವುದು ಮುಂದಿನ ಪೀಳಿಗೆಗೆ ಸಂದೇಶವಾಗಿದೆ ಎಂದರು.

ಕೃತಿ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ನಿವೃತ್ತ ಮುಖ್ಯೋಪಾಧ್ಯಾಯನಿ ಮಹಾದೇವಿ ಪಾಟೀಲ್ ಅವರು, ಕೊರೊನಾ ಕಾಲದಲ್ಲಿ ಲೇಖಕರಿಗೆ, ಮಾನವ ಸಮುದಾಯಕ್ಕೆ ಆಗಿರುವ ಹೊಸ ಅನುಭವಗಳು ಹಾಗೂ ವೈರಸ್ ಕಲಿಸಿದ ಸಾಕಷ್ಟು ಪಾಠಗಳು ಈ ಪುಸ್ತಕದಲ್ಲಿ ಅಚ್ಚುಗೊಂಡಿರುವ ಲೇಖನಗಳು ಓದುಗರಿಗೆ ಹೊಸ ಅಭಿರುಚಿ ತೋರಿಸುತ್ತವೆ ಎಂದು ಆಶಯ ವ್ಯಕ್ತಪಡಿಸಿದರು.

ಪ್ರಕೃತಿಯೊಂದಿಗೆ ಹೊಂದಿಕೊಳ್ಳುವಂತಹ ಸನ್ನಿವೇಶದ ಲೇಖನಗಳು ಹಳೆಯ ಸಂಪ್ರದಾಯವನ್ನು ಪ್ರಶ್ನಿಸುವ ಇಂದಿನ ಜನರು ಪುನಹ ಹಿಂದಿನ ಆಚರಣೆಗಳಿಗೆ ಹೊಂದಿಕೊಂಡಿರುವ ಘಟನೆಗಳು ಸಹ ಈ ‘ಕೊರೊನಾ ಕಲಿಸಿದ ಪಾಠ’ ಎಂಬ ಕೃತಿಯಲ್ಲಿ ಅಡಕಗೊಂಡಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಮಾಜ ಸೇವಕ ಉಮೇಶ್ ಶೆಟ್ಟಿ ಮಾತನಾಡಿದರು. ವಿ.ಜಿ ಮಹಿಳಾ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ. ಮಹೇಶ ಗಂವ್ಹಾರ ಅತಿಥಿಗಳಾಗಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಪ್ರಕಾಶಕ ಬಸವರಾಜ್ ಕೊನೆಕ್ ಅಧ್ಯಕ್ಷತೆ ವಹಿಸಿದ್ದರು.

ಕೃತಿಯ ಸಂಪಾದಕ – ಪತ್ರಕರ್ತ ಡಾ. ಶಿವರಂಜನ್ ಸತ್ಯಂಪೇಟೆ ಅವರು, ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ನೇಹಿತರ ಒತ್ತಾಸೆಯ ಮೇರೆಗೆ ಈ ಕೃತಿ ಹೊರಬರಲು ಸಾಧ್ಯವಾಯಿತು. ಅದಲ್ಲದೇ, ಕೊರೊನಾ ಸಮಯದಲ್ಲಿ ಸುಮ್ಮನೆ ಕುಳಿತುಕೊಳ್ಳುವುದಕ್ಕಿಂತ ಏನಾದರೂ ಮಾಡಬೇಕೆನ್ನುವ ಉದ್ದೇಶದಿಂದ ಸಾಹಿತಿಗಳನ್ನು ಸಂಪರ್ಕಿಸಿದಾಗ ಅವರು ಕೊರೊನಾ ಕುರಿತದ ಅನುಭಾವ ಮತ್ತು ಮಾಹಿತಿಗಳನ್ನು ಲೇಖನಗಳಲ್ಲಿ ಹಂಚಿಕೊಂಡರು ಇದರಿಂದಲೇ ನನಗೆ ಈ ಕೃತಿ ಹೊರ ತರಲು ಸುಲಭವಾಯಿತು ಎಂದರು.

ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಕಾರ್ಯದರ್ಶಿ ಸುರೇಶ್ ಬಡಿಗೇರ ಸ್ವಾಗತಿಸಿದರು. ಸಾಹಿತಿ ಸಿ. ಎಸ್ ಮಾಲಿ ಪಾಟೀಲ್ ಪ್ರಾರ್ಥಿಸಿದರೆ, ಗಂಗಾಧರ ಬಡಿಗೇರ ನಿರೂಪಿಸಿ, ವಂದಿಸಿದರು.

ಸಮಾರಂಭದಲ್ಲಿ ಶಿವರಂಜನ್ ಸತ್ಯಂಪೇಟೆ ಹಾಗೂ ಸಾಕ್ಷಿ ಶಿವರಂಜನ್ ದಂಪತಿಗಳಿಗೆ ಸಾಹಿತಿಗಳು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಸಾಹಿತಿಗಳಾದ ಡಾ. ಕಾಶೀನಾಥ್ ಅಂಬಲಗೆ, ಡಾ. ಚಿ. ಸಿ ನಿಂಗಣ್ಣ, ಡಾ. ಶರಣಬಸಪ್ಪ ವಡ್ಡನಕೇರಿ, ಕಿರಣ ಪಾಟೀಲ್, ಆನಂದ ಸಿದ್ದಾಮಣಿ, ಶರಣಬಸಪ್ಪ ಗೋಗಿ, ವಿನೋದ್ ಜನೆವರಿ, ವಿ.ಬಿ ಗುಪ್ತಾ, ದಸ್ತಗೀರ್ ಯಳಸಂಗಿ ಸೇರಿದಂತೆ ಹಲವಾರು ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.