ಓದುವ ಹವ್ಯಾಸ ಬೆಳೆಸಿಕೊಳ್ಳಲು ಸಲಹೆ

ಹುಳಿಯಾರು, ಜು. ೧೬- ಹುಚ್ಚುಚ್ಚು ಚಿಂತನೆಗಳೇ ಹೊಸ ಹೊಸ ಆವಿಷ್ಕಾರದ ರಹದಾರಿಯಾಗಿದ್ದು ಯಾರು ಏನಂದುಕೊಂಡರೂ ತಲೆಕೆಡಿಸಿಕೊಳ್ಳದೆ ನಿತ್ಯ ವಿಭಿನ್ನವಾಗಿ ಚಿಂತನೆ ಮಾಡಬೇಕು ಎಂದು ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್‌ನ ಮಾಜಿ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಎಸ್.ಶ್ರೀಕಂಠೇಶ್ವರಸ್ವಾಮಿ ತಿಳಿಸಿದರು.
ಹುಳಿಯಾರಿನ ವಿದ್ಯಾವಾರಿದಿ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಸೈನ್ಸ್ ಕ್ಲಬ್ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಪಂಚದಾದ್ಯಂತ ಪ್ರತಿಭಾವಂತರ ಕೊರತೆಯಿದ್ದು ವಿಶ್ವದ ಅನೇಕ ದೇಶಗಳು ಭಾರತದ ಪ್ರತಿಭೆಗಳನ್ನು ಆಶ್ರಯಿಸಿವೆ. ಅಲ್ಲದೆ ಸದಾ ಪ್ರತಿಭಾವಂತರ ಹುಡುಕಾಟದಲ್ಲಿ ದೇಶಗಳಿರುತ್ತವೆ. ಹಾಗಾಗಿ ತಮ್ಮ ಜ್ಞಾನ ವೃದ್ಧಿಸಿಕೊಂಡು ಪ್ರತಿಭಾವಂತರಾಗಿ ಜಗತ್ತಿಗೆ ಗುರುತಿಸಿಕೊಳ್ಳವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪಠ್ಯಪುಸ್ತಕಗಳಿಗೆ ಸೀಮಿತರಾಗದೆ ದಿನಪತ್ರಿಕೆಗಳನ್ನು ಓದುವ ಹಾಗೂ ನಿತ್ಯ ಅರ್ಧ ತಾಸು ಗ್ರಂಥಾಲಯದಲ್ಲಿ ಕಳೆಯುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಸ್ವತಂತ್ರವಾಗಿ ಚಿಂತಿಸುವ, ಬರೆಯುವ ಕೌಶಲ್ಯ ವೃದ್ಧಿಗಾಗಿ ನಿತ್ಯ ತಮಗನ್ನಿಸಿದ ೫ ವಾಕ್ಯಗಳನ್ನು ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಬರೆಯುವ ಹವ್ಯಾಸ ರೂಢಿಸಿಕೊಳ್ಳಿ. ಸಿ.ವಿ.ರಾಮನ್, ಜಗದೀಶ್ ಚಂದ್ರ ಬೋಸ್, ರಾಮಾನುಜನ್, ಯು.ಆರ್.ರಾವ್, ರಾಜಾರಾಮಣ್ಣ ಸೇರಿದಂತೆ ಅನೇಕ ಸಾಧಕರ ಪುಸ್ತಕಗಳನ್ನು ಓದಿ ಎಂದ ಅವರು, ವಿದ್ಯಾರ್ಥಿಗಳಿಗೆ ಚಿತ್ರ ಸಹಿತ ವಿಜ್ಞಾನಿಗಳು, ವಿಜ್ಞಾನ ಕೇಂದ್ರಗಳ ಬಗ್ಗೆ ಪರಿಚಯ ಮಾಡಿಕೊಟ್ಟರು.
ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್.ಕಿರಣ್‌ಕುಮಾರ್ ಮಾತನಾಡಿ, ವಿದ್ಯಾವಾರಿಧಿ ಶಾಲೆಯಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಯ ದೃಷ್ಠಿಯಿಂದ ಗುಣಮಟ್ಟದ ಶಿಕ್ಷಣದ ಜತೆ ಪಠ್ಯೇತರ ಚಟುವಟಿಕೆಗಳಿಗೆ ಒತ್ತು ನೀಡುತ್ತಿದ್ದೇವೆ. ಶಾಲೆಯಲ್ಲಿ ಸಲಹಾ ಪೆಟ್ಟಿಗೆ ಇಟ್ಟಿದ್ದು ಇದರಲ್ಲಿ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಬೆರೆದು ಹಾಕಿದರೆ ಶಾಲೆಯನ್ನು ವಿದ್ಯಾರ್ಥಿ ಸ್ನೇಹಿಯಾಗಿ ಕಟ್ಟಲು ನೆರವಾಗುತ್ತದೆ ಎಂದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಆದರೆ ಗುರುತಿಸುವಲ್ಲಿ ವಿಫಲರಾಗುತ್ತಿದ್ದೇವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲು ಶಾಲೆ ಅನೇಕ ವೇದಿಕೆ ನಿರ್ಮಾಣ ಮಾಡುತ್ತಿದ್ದು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆಯ ಕಾರ್ಯದರ್ಶಿ ಕವಿತಾಕಿರಣ್, ಮುಖ್ಯ ಶಿಕ್ಷಕ ದಿಲೀಪ್, ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಡಾ.ಎ.ಎಲ್.ಮುರುಳೀಧರ, ವಿದ್ಯಾವಾರಿಧಿ ಶಾಲೆಯ ಅಡಳಿತಾಧಿಕಾರಿ ಅಮಿತ್ ಮತ್ತಿತರರು ಉಪಸ್ಥಿತರಿದ್ದರು.