ಓದುವ ಕೊರತೆಯಿಂದ ಪೊಳ್ಳು ಸಾಹಿತ್ಯ: ‘ಸಿರಾ” ವಿಷಾದ

ಕಲಬುರಗಿ,ಮಾ.15-ಕಲಿಕೆಯ ಹಂತದಲ್ಲೇ ಜೀವನದ ಅನುಭವದ ಕೊರತೆಯಿಂದ ಸುಂದರ ಜೀವನ ಕಟ್ಟಿಕೊಳ್ಳಲು ಹೇಗೆ ಸಾಧ್ಯವಾಗುವುದಿಲ್ಲವೋ ಹಾಗೇ ಓದುವ ಕೊರತೆಯಿಂದ ಪೊಳ್ಳು ಸಾಹಿತ್ಯ ರಚನೆಯಾಗುತ್ತದೆ. ಇಂದಿನ ಯುವ ಬರಹಗಾರರು ಉತ್ತಮ ಬರಹಗಾರರ ಮತ್ತು ಲೇಖಕರ, ಸಾಹಿತಿಗಳ, ಸಾಹಿತ್ಯವನ್ನು ಓದಿಕೊಂಡು ಅರ್ಥಯಿಸಿ, ಜೀವನಾನುಭವಿಸಿಕೊಂಡು ಉತ್ತಮ ಬರವಣಿಗೆಯೊಂದಿಗೆ ಸಾಹಿತ್ಯ ರಚನೆಗೆ ಮುಂದಾಗಬೇಕಾಗಿದೆ ಎಂದು ಸಾಹಿತಿ, ರಂಗ ನಿರ್ದೇಶಕ ಸಿದ್ದರಾಮ ರಾಜಮಾನೆ ಹೇಳಿದರು.
ಜಿಲ್ಲೆಯ ಅಫಜಲಪೂರ ಪಟ್ಟಣದ ಕನಕಶ್ರೀ ಸೈನಕ ತರಬೇತಿ ಕೆಂದದಲ್ಲಿ ‘ಗೆಳೆಯರ ಬಳಗ’ದ ವತಿಯಿಂದ ಹಮ್ಮಿಕೊಂಡಿದ್ದ ‘ಇಬ್ಬನಿ’ ಕೃತಿ ಪರಿಚಯ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾವೆಷ್ಟು ಬರವಣಿಗೆ ಮಾಡಿದ್ದೇವೆ ಅನ್ನೋದು ಮುಖ್ಯವಲ್ಲ, ಸಮಾಜಮುಖಿಯಾಗಿ, ಧ್ವನಿಯಾಗಿ ಸಾಹಿತ್ಯ ರಚಿಸಿದ್ದೇವೆ ಇಲ್ಲವೇ ಎನ್ನುವುದು ಮುಖ್ಯ. ತಾಲೂಕಿನಲ್ಲಿ ಸಾಹಿತಿಗಳ ಕೊರತೆ ಇಲ್ಲ, ಆದರೆ ಸಲಹೆ, ಮಾರ್ಗದರ್ಶನ ಕೊರತೆಯಿದೆ. ತೊಂಭತ್ತರ ದಶಕದಲ್ಲಿರುವಂತೆ ಮತ್ತೇ ಸಾಹಿತ್ಯ ಚಟುವಟಿಕೆಗಳು ಹೊರಹೊಮ್ಮಬೇಕಾಗಿದೆ. ಈ ದಿಶೆಯಲ್ಲಿ ಸಾಗಬೇಕಾಗಿದೆ ಎಂದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಕುಪೇಂದ್ರ ಟೊಣ್ಣೇ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಸಾಪ ಸಂ.ಕಾರ್ಯದರ್ಶಿ ಈರಣ್ಣಾ ಮಗಿ ಅವರು ‘ಇಬ್ಬನಿ’ ಕೃತಿ ಪರಿಚಯವನ್ನು ಮಾಡುತ್ತಾ ಚುಟುಕು, ಹನಿಗವನ ಮಾದರಿಯ ಕಾವ್ಯ ರಚನೆಯಲ್ಲಿ ಗಮನ ಸೆಳೆಯುವ ಜಿಲ್ಲೆಯ ಪ್ರಮುಖ ಕವಿ ಸಿದ್ದರಾಮ ರಾಜಮಾನೆ ಯವರು ನಮ್ಮ ತಾಲೂಕಿನ ಹೆಮ್ಮೆ ಎಂದರು. ಮುಖ್ಯ ಅತಿಥಿಗಳಾಗಿ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಗುರುಸಿದ್ದ ಮ್ಯಾಳೇಸಿ, ನೌಕರರ ಸಂಘದ ಕಾರ್ಯದರ್ಶಿ ಜಗದೇವಪ್ಪಾ ಸಾತಲಗಾಂವ, ಮುಖ್ಯಗುರು ಶಿವಪುತ್ರ ಚಿನಮಳ್ಳಿ ಭಾಗವಹಿಸಿದ್ದರು. ರಾಜು ಚರಣಸಿಂಗ್ ಕಾರ್ಯಕ್ರಮ ನಿರೂಪಿಸಿದರು. ಸಿದ್ದರಾಮ ವಿಭೂತಿಹಾಳ ವಂದಿಸಿದರು.