ಓದುವ ಅಭಿರುಚಿ ಬೆಳೆಸಿಕೊಳ್ಳಿ

ಗಂಗಾವತಿ ಏ 24 : ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದ ಗ್ರಂಥಾಲಯದಲ್ಲಿ ‘ನಿತ್ಯ ಲೈಬ್ರರಿಗೆ ಬಂದು ಹೆಚ್ಚಿನ ಪುಸ್ತಕಗಳನ್ನು ಓದಿದ ಇಬ್ಬರು ವಿದ್ಯಾರ್ಥಿಗಳನ್ನು ಗೌರಿಸುವ ಮೂಲಕ ‘ ವಿಶ್ವ ಪುಸ್ತಕ ದಿನವನ್ನು ಶುಕ್ರವಾರ ಆಚರಿಸಲಾಯಿತು.
ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಡಿ.ಮೋಹನ್ ಮಾತನಾಡಿ, ಪುಸ್ತಕಗಳು ಯಾವತ್ತೂ ನಮ್ಮ ಜೀವಸಖರಂತೆ ಎಂಬ ಮಾತು ಸತ್ಯ. ಬಂಧುಗಳು, ಗುರುಗಳು, ಸಹಪಾಠಿಗಳು, ಸಹೋದ್ಯೋಗಿಗಳು ಬರಬಹುದು, ಹೋಗಬಹುದು ಆದರೆ ಪುಸ್ತಕಗಳಿವೆಯಲ್ಲಾ ಯಾವತ್ತಿಗೂ ಜೊತೆಗಿರುವ ಸ್ನೇಹಿತರು. ಹಲವು ವರ್ಷಗಳಿಂದ ಮಾನವನ ವಿಕಾಸ ಪ್ರಕ್ರಿಯೆಯಲ್ಲಿ ಮತ್ತು ಜ್ಞಾನಪರಂಪರೆಯನ್ನು ಮುಂದುವರಿಸಿಕೊಂಡು ಬರುವಲ್ಲಿ ಪುಸ್ತಕಗಳ ಪಾತ್ರ ಹಿರಿದು. ಈ ಅಂಶವನ್ನು ಮನಗಂಡ ಯುನಿಸ್ಕೋ 1995ರಲ್ಲಿ ಏಪ್ರಿಲ್ 23ನ್ನು ವಿಶ್ವ ಪುಸ್ತಕ ದಿನವನ್ನಾಗಿ ಘೋಷಿಸಿತು ಎಂದರು.
ಎಲ್ಲ ವಿದ್ಯಾರ್ಥಿಗಳು ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು. ಮಹನೀಯರ ಆತ್ಮಚರಿತ್ರೆ, ಕಥೆ, ಕವನ, ಆರೋಗ್ಯ, ಕ್ರೀಡೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಬೇಕಾದ ಪುಸ್ತಕಗಳು ಗ್ರಂಥಾಲಯದಲ್ಲಿದ್ದು, ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಜ್ಞಾನ ಪಡೆದು ಶಾಲೆ, ಗ್ರಾಮ, ಪಾಲಕರಿಗೆ ಕೀರ್ತಿ ತರಬೇಕು ಎಂದು ಕಿವಿಮಾತು ಹೇಳಿದರು.
ಶಾಲೆ ರಜೆ ಹಿನ್ನೆಲೆಯಲ್ಲಿ ದಿನನಿತ್ಯ ಗ್ರಂಥಾಲಯಕ್ಕೆ ತಪ್ಪದೇ ಹಾಜರಾಗಿ ಹೆಚ್ಚಿನ ಪುಸ್ತಕಗಳನ್ನು ಓದಿದ 4ನೇ ತರಗತಿಯ ಚೈತ್ರಾ ಲೋಕೇಶ ಮತ್ತು 10ನೇ ತರಗತಿಯ ಗಾಯತ್ರಿ ನಾಗಪ್ಪ ಅವರಿಗೆ ಪ್ರಶಸ್ತಿ ಪತ್ರ ಹಾಗೂ ನುಡಿಗಂಟು ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು.
ಈ ವೇಳೆ ಗ್ರಾಪಂ ಪಿಡಿಒ ರವೀಂದ್ರ ಕುಲಕರ್ಣಿ, ಸಿಆರ್ ಪಿ ಮುರ್ತುಜಾ ಖಾದ್ರಿ, ಮುಖ್ಯಶಿಕ್ಷಕಿ ಶಕುಂತಲಾ, ಗ್ರಂಥಪಾಲಕ ಗುರುರಾಜ ಜೋಶಿ, ಗ್ರಾಪಂ ಸಿಬ್ಬಂದಿ ನಾಗೇಶ ನಾಯಕ ಸೇರಿ ಇತರರಿದ್ದರು.