ಓದುವುದರಿಂದ ಜ್ಞಾನ ವೃದ್ಧಿ: ನರಸಣ್ಣ


ಬಳ್ಳಾರಿ,ಜೂ.28:ಓದುವುದರಿಂದ ಜ್ಞಾನವು ಹೆಚ್ಚುತ್ತದೆ, ಜೊತೆಗೆ ಸಮಗ್ರ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಶಿಕ್ಷಣದಿಂದ ಎಲ್ಲವನ್ನು ಸಾಧಿಸಬಹುದು ಎಂದು ನಗರದ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನರಸಣ್ಣ ಅವರು ಹೇಳಿದರು.
ಭಾರತ ಸರ್ಕಾರದ ಸಾಂಸ್ಕೃತಿಕ ಮಂತ್ರಾಲಯ ಆಶಯದಂತೆ, ಸಾರ್ವಜನಿಕ ಗ್ರಂಥಾಲಯ ಇಲಾಖೆ ಬೆಂಗಳೂರು ಇವರ ನಿರ್ದೇಶನದಂತೆ, ಕೇರಳದ ಗ್ರಂಥಾಲಯ ಮತ್ತು ಸಾಕ್ಷರತಾ ಆಂದೋಲನದ ಪಿತಾಮಹರಾದ ಪಿ.ಎನ್. ಫಣಿಕ್ಕರ್‍ರವರ ಪುಣ್ಯ ಸ್ಮರಣೆ ಅಂಗವಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಬಳ್ಳಾರಿ ನಗರ ಕೇಂದ್ರ ಗ್ರಂಥಾಲಯದಲ್ಲಿ ಮಂಗಳವಾರದಂದು ಹಮ್ಮಿಕೊಂಡಿದ್ದ ಓದುವ ದಿನ/ಓದುವ ತಿಂಗಳು ಕಾರ್ಯಕ್ರಮ ನಿಮಿತ್ತ ಗ್ರಂಥಾಲಯದಲ್ಲಿ ಪುಸ್ತಕ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಕಾರ್ಯಕ್ರಮವನ್ನು ಪ್ರತಿ ವರ್ಷ ಜೂನ್ 19 ರಿಂದ ಜುಲೈ 18 ರವರೆಗೆ ದೇಶಾದ್ಯಾಂತ ಆಚರಿಸಲಾಗುತ್ತದೆ. ಈ ಕಾರ್ಯಕ್ರಮದ ಅಂಗವಾಗಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಅದರಲ್ಲಿ ಪುಸ್ತಕ ಪ್ರದರ್ಶನ, ಪ್ರಬಂಧ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ, ಕಥೆ ಹೇಳುವುದು, ಚರ್ಚಾ ಸ್ಪರ್ಧೆ ಹೀಗೆ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಎಲ್ಲಾ ಓದುಗರು ಗ್ರಂಥಾಲಯದ ಪುಸ್ತಕಗಳನ್ನು ಓದಬೇಕು ಮತ್ತು ತಮ್ಮ ತಮ್ಮ ಮನೆಗಳಲ್ಲಿ ಹಾಗೂ ಸುತ್ತಮುತ್ತಲಿನ ಸ್ನೇಹಿತರಿಗೆ, ಸಂಬಂಧಿಕರಿಗೆ, ಮಕ್ಕಳಿಗೆ ಹಾಗೂ ಇತರರಿಗೆ ಪುಸ್ತಕಗಳನ್ನು ನೀಡಿ ಅವರಲ್ಲೂ ಓದುವ ಆಸಕ್ತಿ ಮೂಡಿಸಿ ಓದುವುದನ್ನು ಪ್ರೇರೇಪಿಸಬೇಕು. ಎಲ್ಲ್ಲರಿಗೂ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ರಾಜ್ಯದಲ್ಲಿ ಸಾರ್ವಜನಿಕ ಡಿಜಿಟಲ್ ಗ್ರಂಥಾಲಯ ಕೇವಲ 03 ವರ್ಷಗಳ ಅವಧಿಯಲ್ಲಿ 3.50 ಕೋಟಿ ಸದಸ್ಯರನ್ನು ನೋಂದಾಯಿಸುವ ಮೂಲಕ ಇಡೀ ವಿಶ್ವದಲ್ಲಿ ಡಿಜಿಟಲ್ ಗ್ರಂಥಾಲಯ ಸದಸ್ಯತ್ವ ನೋಂದಣಿಯಲ್ಲಿ ಮುಂಚೂಣಿಯಲ್ಲಿದೆ ಎಂದರು.
ಬಳ್ಳಾರಿ ನಗರದಲ್ಲಿ 1.21 ಲಕ್ಷ ಸದಸ್ಯರನ್ನು ನೋಂದಾಯಿಸಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬಳ್ಳಾರಿ ನಗರ ಕೇಂದ್ರ ಗ್ರಂಥಾಲಯದ ಡಿಜಿಟಲ್ ಗ್ರಂಥಾಲಯ ಸದಸ್ಯತ್ವ ಪಡೆದುಕೊಂಡು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಓದುಗರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.