ಓದುವುದರಿಂದ ಜ್ಞಾನದ ವೃದ್ದಿ: ಕೋಟೇಶ್ವರ ರಾವ್


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.08:  ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಮತ್ತು  ಸರಳಾದೇವಿ ಸತೀಶ್ ಚಂದ್ರ್ ಅಗರ್ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಜಂಟಿಯಾಗಿ ನಿನ್ನೆ  ನಾಟ್ಯಕಲಾ ಪ್ರಪೂರ್ಣ ಬಳ್ಳಾರಿ ಟಿ ರಾಘವಾಚಾರ್ಯ ಸ್ಮಾರಕ ದತ್ತಿ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ನಿನ್ನೆ   ಹಮ್ಮಿಕೊಂಡಿತ್ತು.
ಕಾರ್ಯಕ್ರಮದ ಉದ್ಘಾಟನೆ ಮಾಡಿದ  ರಾಘವಾ ಮೆಮೋರಿಯಲ್ ಅಸೋಸಿಯೇಷನ್ ಅಧ್ಯಕ್ಷ  ಕೆ .ಕೋಟೇಶ್ವರ ರಾವ್, ಮಕ್ಕಳು ಪುಸ್ತಕ ಸಂಸ್ಕೃತಿಯನ್ನು ಬೆಳೆಸಿಕೊಳ್ಳಿ ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ಮಹನೀಯರ ಜೀವನ ಚರಿತ್ರೆಯನ್ನು ಅಧ್ಯಯನ ಮಾಡುವುದರಿಂದ ಅವರ ಗುಣ ಸ್ವಭಾವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಸಹಾಯಕವಾಗುತ್ತದೆಂದರು.
ದತ್ತಿ ಉಪನ್ಯಾಸ ನೀಡಿದ ನಿವೃತ್ತ ಉಪನ್ಯಾಸಕ  ಎನ್ ಬಸವರಾಜ್,  ರಾಘವಾಚಾರ್ಯರ ಜೀವನ ಮತ್ತು ಸಾಧನೆಗಳ ಕುರಿತು ತಿಳಿಸುತ್ತ. ರಾಘವಾಚಾರ್ಯರ ಜಾಣತನದ ವೈಶಾಲಿತೆ ಮತ್ತು ಅವರಿಗಿದ್ದ ಸಾಮಾಜಿಕ ಕಳಕಳಿ ಹಾಗೂ ನಾಟಕದ ಬಗ್ಗೆ ಅವರಿಗಿದ್ದ ಅಪಾರ ಅಭಿಮಾನವನ್ನು  ತಿಳಿಸಿದರು.
ರಾಘವ ಮೆಮೋರಿಯಲ್ ಅಸೋಸಿಯೇಷನ್ ಗೌರವ ಅಧ್ಯಕ್ಷ  ಕೆ. ಚನ್ನಪ್ಪ,  ಡಾ. ಹೊನ್ನೂರ್ ಅಲಿ ಮುಖ್ಯಸ್ಥರು ರಾಜ್ಯಶಾಸ್ತ್ರ ವಿಭಾಗ, ಡಾ ದಸ್ತಗಿರಿ ಸಾಬ್ ದಿನ್ನಿ ಮುಖ್ಯಸ್ಥರು ಕನ್ನಡ ವಿಭಾಗ ಹಾಗೂ ಡಾ. ಶಶಿಕಾಂತ್ ಬಿಲ್ಲವ್ ಸಾಂಸ್ಕೃತಿಕ ಸಂಚಾಲಕರು ಹಾಗೂ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ನಜೀರ್ ಪಾಷಾ, ಪಿ. ವಿ. ಮಲ್ಲಿಕಾರ್ಜುನ ,ಶ್ರೀಧರ ಗಡ್ಡೆ ವರಬಸಪ್ಪ,  ರಮಣಪ್ಪ ಭಜಂತ್ರಿ,  ರಂಗ ನಿರ್ದೇಶಕ ನೀತಿ ರಘುರಾಮ್, ನಿವೃತ್ತ ಉಪನ್ಯಾಸಕರಾದ ರಾಮಾಂಜನೇಯಲು ಉಪಸ್ಥಿತರಿದ್ದರು.
ಅಧ್ಯಕ್ಷತೆ  ವಹಿಸಿದ್ದ ಕಾಲೇಜಿನ‌ ಪ್ರಾಂಶುಪಾಲ  ಡಾ.  ಎಚ್.ಮಂಜುನಾಥ್ ರೆಡ್ಡಿ,  ನಮ್ಮ ಕಾಲೇಜಿನಲ್ಲಿ ರಾಘವಾಚಾರ್ಯರ ಜೀವನ ಮತ್ತು ಸಾಧನೆಯ ಬಗ್ಗೆ ನಮ್ಮ ಮಕ್ಕಳಿಗೆ ಉಪನ್ಯಾಸ ನೀಡಿ,  ಇಂದಿನ ಮಕ್ಕಳಿಗೆ ಇಂತಹ ಮಹನೀಯರ ಉಪನ್ಯಾಸ ಅತ್ಯಗತ್ಯವಾಗಿ ಬೇಕಾಗಿದೆಂದರು.
 ತಾಲೂಕು ಘಟಕದ ಅಧ್ಯಕ್ಷ  ನಾಗರೆಡ್ಡಿ ಕೆ. ವಿ. ಪ್ರಾಸ್ತಾವಿಕ ನುಡಿಯಲ್ಲಿ ಸಾಹಿತ್ಯ ಪರಿಷತ್ತು ದತ್ತಿ ಉಪನ್ಯಾಸಗಳನ್ನು ಮಾಡುವುದರ ಜೊತೆಗೆ ಇಡೀ ರಾಜ್ಯಾದ್ಯಂತ ಕನ್ನಡದ ಕಂಪನ್ನು ಪಸರಿಸುವ ಕೆಲಸವನ್ನು ಮಾಡುತ್ತಿದೆ, ದತ್ತಿ ಕಾರ್ಯಕ್ರಮದ ಮೂಲಕ ಹಲವಾರು ಮಹನೀಯರನ್ನು ಸ್ಮರಿಸುವ,ಅವರು ಬಾಳಿ ಬದುಕಿದ ಮೌಲ್ಯಯುತ ವಿಷಯಗಳನ್ನು ಶಾಲಾ-ಕಾಲೇಜಿನ ಮಕ್ಕಳಿಗೆ ತಿಳಿಸುವ ಕೆಲಸವನ್ನು ನಮ್ಮ ಪರಿಷತ್ತು ನಿರಂತರವಾಗಿ ಮಾಡುತ್ತಾ ಬಂದಿದೆಂದರು.
ಕಾರ್ಯಕ್ರಮದ ನಿರೂಪಣೆಯನ್ನು  ವಿದ್ಯಾರ್ಥಿ ಗಣೇಶ್  ನಿರ್ವಹಿಸಿದರು, ಗಣೇಶ್ ಮತ್ತು ಜಿಲನ್ ಭಾಷ ಪ್ರಾಥನೆ ಮಾಡಿದರೆ,ಪಿವಿ ಮಲ್ಲಿಕಾರ್ಜುನ್ ವಂದಿಸಿದರು.