ಓದುಗರ ಆನಂದವೇ ಕವಿಗೆ ನೀಡುವ ಪ್ರಶಸ್ತಿ

ವಿಜಯಪುರ, ಜ.7-ಯಾವ ಪುಸ್ತಕವನ್ನು ಓದಿದಾಗ ಮಕ್ಕಳಲ್ಲಿ ಕುತೂಹಲವುಂಟಾಗುವುದೋ ಅದೇ ಮಕ್ಕಳ ಸಾಹಿತ್ಯ. ಅದನ್ನು ಬರೆಯುವವರು ಮಕ್ಕಳ ಸಾಹಿತಿಗಳು. ಭಾವನೆಗಳಿಗೆ ಶಬ್ದರೂಪ ಕೊಡುವದು ಅಪರೂಪದ ಕಲೆಯಾಗಿದೆ. ಅದನ್ನು ಕವಿಗಳು ಮಾಡುತ್ತಾರೆ. ಮನಸ್ಸನ್ನು ವಿಕಸಿಸುವಂತೆ ಮಾಡುವ ಸಾಹಿತ್ಯ ಗ್ರಂಥಗಳು ಆನಂದವನ್ನು ನೀಡುತ್ತವೆ. ಉಪಜೀವನಕ್ಕಾಗಿ ವಿಜ್ಞಾನ ಸಾಹಿತ್ಯ ಓದಬೇಕು. ಪ್ರೌಢ ಸಾಹಿತ್ಯದಿಂದ ರಾಗ ದ್ವೇಷಗಳು ಚಿಗುರಿದರೆ, ಮಕ್ಕಳ ಸಾಹಿತ್ಯದಿಂದ ಮನಸ್ಸು ಅರಳುತ್ತದೆ. ಮಕ್ಕಳ ಪುಸ್ತಕವನ್ನು ಓದಿದಾಗ ಸಹೃದಯರಿಗೆ ಆನಂದವುಂಟಾದರೆ ಅದುವೇ ಪ್ರಶಸ್ತಿ ಎಂದು ತಿಳಿಯಬೇಕು. ಇದಕ್ಕಿಂತ ದೊಡ್ಡ ಪ್ರಶಸ್ತಿ ಮತ್ತೊಂದಿಲ್ಲವೆಂದು ಪೂ.ಶ್ರೀ.ಸಿದ್ಧೇಶ್ವರ ಮಹಾಸ್ವಾಮಿಗಳು ಹೇಳಿದರು.
ಅವರು ಎಸ್.ಬಿ.ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದ ಜಂಬುನಾಥ ಕಂಚ್ಯಾಣಿಯವರ ‘ಅವನೆಲ್ಲಿರುವನು ಹೇಳಮ್ಮ’ ಎಂಬ ಮಕ್ಕಳ ಕವಿತಾ ಸಂಕಲನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಅಲ್ಲದೇ ಅವರು ಮುಂದುವರೆದು ಇಂಥ ಅಪರೂಪದ ಪುಸ್ತಕಗಳು ಓದುಗರನ್ನು ಭಗವಂತನ ಸಾನ್ನಿಧ್ಯಕ್ಕೆ ಕರೆದೊಯ್ಯುತ್ತವೆ ಎಂದು ಹೇಳಿದರು.
ಡಾ.ಮಲ್ಲಿಕಾರ್ಜುನ ಮೇತ್ರಿಯವರು ಕವಿ ಪರಕಾಯ ಪ್ರವೇಶ ಮಾಡಿದಾಗ ಮಾತ್ರ ಸತ್ವಭರಿತ ಕಾವ್ಯ ರಚನೆಗೊಳ್ಳುತ್ತದೆ. ಅವರ ಮೇಲೆ ಮಧುರಚೆನ್ನರ ಪ್ರಭಾವವುಂಟಾಗಿದೆ ಎಂದು ಅನಿಸುತ್ತದೆ. ಮಕ್ಕಳ ಸಾಹಿತ್ಯದಲ್ಲಿ ಕಂಡುಬರುವ ಕೆಲವೇ ಗ್ರಂಥಗಳಲ್ಲಿ ‘ಅವನೆಲ್ಲಿರುವನು ಹೇಳಮ್ಮ’ ಒಂದಾಗಿದೆ. ವಿಜಯಪುರ ಜಿಲ್ಲೆಯು ರಾಷ್ಟ್ರಕ್ಕೆ ನೀಡಿದ ಕೊಡುಗೆ0iÉುಂದರೆ ಮಕ್ಕಳ ಸಾಹಿತ್ಯವಾಗಿದೆ. ಅದನ್ನು ಕೊಟ್ಟವರು ಶಾಲಾ ಮಾಸ್ತರರೆಂದು ಹೇಳಿದರು.
ಅಧ್ಯಕ್ಷ ಸ್ಥಾನವಹಿಸಿದ್ದ ಡಾ.ಎಂ.ಎಸ್. ಮದಭಾವಿಯವರು ಒತ್ತಾಯದಿಂದ ಪುಸ್ತಕಗಳನ್ನು ಎಳೆದು ತಂದರೆ ಕಾವ್ಯ ಸತ್ವಹೀನವಾಗುತ್ತದೆ. ಕಂಚ್ಯಾಣಿಯವರು ಸಹಜ ಪ್ರಾಸಗಳಿಂದ ಕೂಡಿದ ಪದ್ಯಗಳನ್ನು ರಚಿಸಿ ಮಕ್ಕಳನ್ನು ಮನಸ್ಸನ್ನು ಗೆಲ್ಲುವುದರಲ್ಲಿ ಸಂದೇಹವಿಲ್ಲವೆಂದು ಹೇಳಿದರು.
ಡಾ.ವಿ.ಡಿ.ಐಹೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯರಾದ ಡಾ.ಎ.ಎಸ್.ಪೂಜಾರ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಶ್ರೀಮತಿ ಕೆ.ಸುನಂದಾ ಸ್ವಾಗತಿಸಿದರೆ, ಶ್ರೀಮತಿ ಕಮಲಾಕ್ಷಿ ಗೆಜ್ಜಿ ವಂದಿಸಿದರು. ಕುಮಾರಿ ಜ್ಯೋತಿ ಗೆಜ್ಜಿ ಪ್ರಾರ್ಥಿಸಿದರು. ಸಿದ್ದಲಿಂಗ ಹದಿಮೂರ ಕಾರ್ಯಕ್ರಮ ನಿರೂಪಿಸಿದರು.
ಬಿ.ಎಂ.ಪಾಟೀಲ, ಬಿ.ಎಚ್. ಬಾದರಬಂಡಿ, ಮ.ಗು.ಯಾದವಾಡ, ಅರವಿಂದ ಕಂಚ್ಯಾಣಿ, ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ, ಎ.ಬಿ.ಬೂದಿಹಾಳ, ಸುರೇಶ ಅಂಬಲಿ, ಡಾ.ಉಷಾ ಹಿರೇಮಠ, ಎಸ್.ಡಿ. ಕೃಷ್ಣಮೂರ್ತಿ, ಪೆÇ್ರ.ಸಬರದ, ಅಜ್ಜು ಕಂಚ್ಯಾಣಿ, ಜಗದೀಶ ಸಾಲಹಳ್ಳಿ, ನಟರಾಜ, ದಾನಮ್ಮ, ವೀಣಾ, ಗುರುರಾಜ ಬಾಬಾನಗರ, ರುದ್ರಾಂಬಿಕಾ, ಇಂದುಮತಿ ಸಾಲಿಮಠ, ಮುಂತಾದ ಸಾಹಿತಿಗಳು ಉಪಸ್ಥಿತರಿದ್ದರು.