
(ಸಂಜೆವಾಣಿ ವಾರ್ತೆ)
ಬಳ್ಳಾರಿ,ಆ.20: ಓದುಗರಿಗೆ ಗೊಂದಲ ಉಂಟುಮಾಡುವುದು ಪತ್ರಕರ್ತನ ಕೆಲಸವಲ್ಲ. ಸುದ್ದಿಗಳಲ್ಲಿ ಸ್ಪಷ್ಟತೆ ಇರಬೇಕು ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಕೆ.ರವಿ ಹೇಳಿದರು.
ಅವರು ನಿನ್ನೆ ನಗರದ ಸರಳಾದೇವಿ ಕಾಲೇಜಿನಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಬರವಣಿಗೆ ಮತ್ತು ಛಾಯಾಗ್ರಹಣ ವಿಚಾರ ಸಂಕಿರಣ ಉದ್ಘಾಟನೆ ಮಾಡಿ ಮಾತನಾಡಿದರು.
ಕಳೆದ 40 ವರ್ಷಗಳ ಹಿಂದೆ ಇಂದಿನ ತಂತ್ರಜ್ಞಾನ ಇರಲಿಲ್ಲ. ಪೋಸ್ಟ್ ಮೂಲಕ ಸುದ್ದಿಗಳನ್ನು ಕಳುಹಿಸಲಾಗುತ್ತಿತ್ತು. ಟೆಲಿಗ್ರಾಂ ಮೂಲಕ ಸುದ್ದಿಗಳನ್ನು ಕಳುಹಿಸಬೇಕಾದರೆ ಸಾಕಷ್ಟು ಸವಾಲುಗಳಿದ್ದವು. ಇಂದು ತಂತ್ರಜ್ಞಾನ ಅಭಿವೃದ್ಧಿಯಾಗಿದೆ. ಅದನ್ನು ಸಮಗ್ರವಾಗಿ ಬಳಸಿಕೊಳ್ಳಬೇಕೇ ಹೊರತು. ಅದನ್ನಾಶ್ರಯಿಸಿ ಸುದ್ದಿ ಮಾಡುವಂತಾಗಬಾರದು ಎಂದರು.
ನಾವೇ ಮೊದಲು ಸುದ್ದಿ ಕೊಡಬೇಕು ಎಂಬ ಧಾವಂತದಲ್ಲಿ ಸತ್ಯಾ ಸತ್ಯತೆಗಳನ್ನು ತಿಳಿಯದೇ ಸುದ್ದಿಗಳನ್ನು ಬಿತ್ತಿರಿಸಿ ಮುಜುಗರಕ್ಕೀಡಾಗುವ ಸನ್ನಿವೇಶಗಳೂ ಸಾಕಷ್ಟಿವೆ. ಸುದ್ದಿ ಖಚಿತತೆಗೆ ಪ್ರಾಮುಖ್ಯತೆ ಕೊಡಬೇಕು. ಚಿತ್ರವೊಂದು ಇಡೀ ಸುದ್ದಿಯನ್ನೇ ತಿಳಿಸುತ್ತದೆ. ಸುದ್ದಿ ನೀಡಲು ಬರವಣಿಗೆ ಹೇಗೆ ಮುಖ್ಯವೋ ಛಾಯಾಚಿತ್ರವೂ ಕೂಡ ಅಷ್ಟೇ ಮುಖ್ಯ ಎಂದರು.
ಬರವಣಿಗೆ ಮತ್ತು ಛಾಯಾಗ್ರಹಣ ವಿಚಾರ ಕುರಿತು ವಿಶೇಷ ಉಪನ್ಯಾಸ ನೀಡಿದ ಹವ್ಯಾಸಿ ಛಾಯಾಗ್ರಾಹಕ ಸತೀಶ್ ಮುರಾಳ ಅವರು, ಇಂದು ಮೊಬೈಲ್ ಇದ್ದ ಪ್ರತಿಯೊಬ್ಬರೂ ಫೋಟೋ ಗ್ರಾಫರ್ ಆಗಬಹುದು. ಆದರೆ ಸನ್ನಿವೇಶಕ್ಕೆ ತಕ್ಕಂತೆ ಫೋಟೋ ಕ್ಲಿಕ್ಕಿಸುವವನೇ ನಿಜವಾದ ಛಾಯಾಗ್ರಾಹಕ. ಐಎಸ್‌ಒ, ವೇಗ, ಅಪಾರ್‍ಚರ್ ಈ ಮೂರು ತಿಳಿದವನು ಉತ್ತಮ ಫೋಟೋಗ್ರಾಫರ್ ಆಗಬಲ್ಲ. ಫೋಟೋ ತೆಗೆಯುವ ಕೌಶಲ್ಯವನ್ನು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ಅವಶ್ಯವೆಂದರು.
ಒಂದು ಸುದ್ದಿಯನ್ನು ವಿವಿಧ ಪತ್ರಿಕೆಗಳಲ್ಲಿ ಹೇಗೆ ಭಿತ್ತರಿಸಿದ್ದಾರೆ ಎಂಬುದನ್ನು ಅರ್ಥೈಸಿಕೊಳ್ಳುವ ಮೂಲಕ ನಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಬಹುದೆಂದರು.
ತುಮಕೂರಿನ ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ. ನಾಗೇಂದ್ರ, ಸರಳಾದೇವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾಐ.ಹೊನ್ನೂರಾಲಿ , ಪ್ರಾಂಶುಪಾಲರ ಡಾ.ಎಚ್.ಕೆ.ಮಂಜುನಾಥ್ ರೆಡ್ಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಪ್ರಾಯೋಗಿಕ ಪತ್ರಿಕೆ ಸರಳ ಸಂಪದವನ್ನು ಬಿಡುಗಡೆ ಮಾಡಲಾಯಿತು. ಜೊತೆಗೆ ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಫೋಟೋಗ್ರಫಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದವರಿಗೆ ಪ್ರಮಾಣ ಪತ್ರವನ್ನು ವಿತರಣೆ ಮಾಡಲಾಯಿತು.
ಈ ನಮ್ಮ ಕನ್ನಡನಾಡು ಪತ್ರಿಕೆಯ ಉಪಸಂಪಾದಕ ರಾಕೇಶ್.ವಿ. ಹಾಗೂ ಹೋರಾಟಗಾರ ಸುರೇಶ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಕೊಪ್ಪಳ ವಿವಿಯ ಕುಲಸಚಿವ ಕೆ.ವಿ.ಪ್ರಸಾದ್, ಕಾನಿಪ ಸಂಘದ ಜಿಲ್ಲಾಧ್ಯಕ್ಷ ಯಾಳ್ಪಿವಲಿಭಾಷಾ, ಡಾ.ವೈ.ಜನಾರ್ದನ್, ಉಪನ್ಯಾಸಕರಾದ ಗಿರೀಶ್‌ಕುಮಾರ್ ಗೌಡ, ಟಿ.ಜಯರಾಂ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಅನುಷಾ ಪ್ರಾರ್ಥನೆ, ಸಂಜನಾ ಹಾಗೂ ರಾಜೇಶ್ವರಿ ಅವರು ಗಣ್ಯರ ಪರಿಚಯ ಮಾಡಿಕೊಟ್ಟರು.