ಓದಿನಿಂದ ಜೀವನ, ಕರಾಟೆಯಿಂದ ರಕ್ಷಣೆ

ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಸೆ.13: ಓದು ಜೀವನ ರೂಪಿಸಿದರೆ ಕರಾಟೆ ಜೀವ ರಕ್ಷಣೆ ಮಾಡುತ್ತದೆ ಎಂದು ಎಫ್.ಎಸ್.ಕೆ.ಎ ವಿಜಯನಗರ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷ ಮರಿಯಮ್ಮನಹಳ್ಳಿಯ ಕರಾಟೆ ಶಿಕ್ಷಕ ಗೌಳೇರ ನಾಗರಾಜ್ ಹೇಳಿದರು.
ಅವರು ಪಟ್ಟಣದ ಸರಕಾರಿ ಹೈಸ್ಕೂಲ್ ಆವರಣದಲ್ಲಿ ಫುನಾಕೋಷಿ ಶೋಟೊಕನ್ ಕರಾಟೆ ಇಂಟರ್ ನ್ಯಾಷನಲ್ (ರಿ) ಇವರಿಂದ ಭಾನುವಾರ ಶಿಕ್ಷಕರ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಸಂಸ್ಥೆಯ ನೂತನ ಜಿಲ್ಲಾಧ್ಯಕ್ಷರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕರಾಟೆ ಸಮರ ಕಲೆಯಾಗಿದ್ದು, ಇದು ಆತ್ಮಸ್ಥೈರ್ಯವನ್ನು ತುಂಬಿ ಮಾನಸಿಕ ಮತ್ತು ದೈಹಿಕ ಸಧೃಡತೆಯನ್ನು ಹೆಚ್ಚಿಸುತ್ತದೆ. ಪ್ರಸ್ತುತ ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯದಿಂದ ಆತ್ಮರಕ್ಷಣೆ ಮಾಡಲು ಅವಶ್ಯವಾಗಿ ಬೇಕಾಗಿರುವ ಕಲೆ ಇದಾಗಿದೆ. ಯಾವುದೇ ವಿದ್ಯೆಯನ್ನು ಶ್ರದ್ಧೆಯಿಂದ ಕಲಿತಾಗ ಮಾತ್ರ ಉತ್ತಮ ಭವಿಷ್ಯ ನಮ್ಮದಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮರಿಯಮ್ಮನಹಳ್ಳಿಯ ಕರಾಟೆ ಶಿಕ್ಷಕರಾದ ಕೆ.ಮಂಜುನಾಥ, ಎಲ್. ಮಂಜುನಾಥ, ಸಂಸ್ಥೆಯ ಉಪಾಧ್ಯಕ್ಷ ಹೊಸಪೇಟೆಯ ಸಲ್ಮಾನ್, ಪ್ರಧಾನ ಕಾರ್ಯದರ್ಶಿ ಗುಜ್ಜಲ್ ನಾಗರಾಜ್, ಕಾರ್ಯದರ್ಶಿ ಗುಜ್ಜಲ್ ಈರೇಶ ಉಪಸ್ಥಿತರಿದ್ದರು. ಕರಾಟೆ ಸಂಸ್ಥೆಯ ವಿಜಯನಗರ ಜಿಲ್ಲೆಗೆ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಮರಿಯಮ್ಮನಹಳ್ಳಿಯ ಕರಾಟೆ ಶಿಕ್ಷಕ ಗೌಳೇರ ನಾಗರಾಜ್‍ರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಕರಾಟೆ ಶಿಕ್ಷಕ ಆದಿಮನಿ ಮೆಹಬೂಬ್ ಬಾಷ ನಿರೂಪಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಬೆಲ್ಟ್ ವಿದ್ಯಾರ್ಥಿಗಳಾದ ಖಾಸೀಂ ಪೀರ, ದಾದಾ ಖಲಂದರ್, ಕೆ.ಸಿ.ಕೊಟ್ರೇಶ, ವಿ.ನಿತಿನ್ ಕುಮಾರ, ಮಹಮ್ಮದ್ ಕೈಫ್ ಹಾಗೂ ಇತರರು ಇದ್ದರು.