ಓಟಿಂಗ್ ಮುಗೀತು; ಈಗ ಕೌಂಟಿಂಗ್ ಕುತೂಹಲ

ಮಹೇಶ್ ಕುಲಕರ್ಣಿ

ಕಲಬುರಗಿ: ಮೇ 11: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲೆಯಾದ್ಯಂತ ಬಹುತೇಕ ಶಾಂತಿಯುತ ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಎಲ್ಲ ಒಂಬತ್ತು ವಿಧಾನಸಭಾ ಕ್ಷೇತ್ರಗಳ ವಿದ್ಯುನ್ಮಾನ ಮತ ಯಂತ್ರಗಳು ಗುಲ್ಬರ್ಗ ವಿಶ್ವವಿದ್ಯಾಲಯದ ಕ್ಯಾಂಪಸ್ ಸ್ಟ್ರಾಂಗ್ ರೂಂ. ಸೇರಿವೆ. ಈ ಕೋಣೆಗೆ ಭಾರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಕೆಲವು ಸಣ್ಣ ಪುಟ್ಟ ನೂಕಾಟ ತಳ್ಳಾಟ ಹೊರತುಪಡಿಸಿ ಉಳಿದಂತೆ ಜಿಲ್ಲೆಯ ಎಲ್ಲ ಒಂಬತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಬುಧವಾರ ಮತದಾನ ಶಿಸ್ತುಬದ್ಧವಾಗಿ ನಡೆಯಿತಲ್ಲದೆ, ಶೇ.66.43 ರಷ್ಟು ಮತದಾನಕ್ಕೆ ಸಾಕ್ಷಿಯಾಯಿತು.

ಈ ಮಧ್ಯೆ, ಮೇ 13ರಂದು ನಡೆಯಲಿರುವ ಮತ ಎಣಿಕೆಗೆ ಜಿಲ್ಲಾಡಳಿತ ವ್ಯಾಪಕ ಸಿದ್ಧತೆ ಮಾಡಿಕೊಂಡಿದ್ದು, ಗುಲ್ಬರ್ಗ ವಿಶ್ವವಿದ್ಯಾಲಯದ ವಿಷಯಾವಾರು ವಿಭಾಗಗಳಲ್ಲಿ ಮತ ಎಣಿಕೆಗಾಗಿ ಅಗತ್ಯ ವ್ಯವಸ್ಥೆ ಪೂರ್ಣಗೊಳಿಸಲಾಗಿದೆ. ಪ್ರತಿ ಎಣಿಕೆ ಕೇಂದ್ರದಲ್ಲಿ ಸುಸಜ್ಜಿತ ಹಾಗೂ ಸಮರ್ಪಕ ಮತ ಎಣಿಕೆಗೆ ಪೂರಕವಾಗಿ ತಲಾ 14 ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಇನ್ನು ಕೇಂದ್ರದಲ್ಲಿ ಅಗತ್ಯ ತುರ್ತು ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ಪ್ರತಿ ಎಣಿಕೆ ಕೇಂದ್ರಕ್ಕೆ ಓರ್ವ ವೀಕ್ಷಕ ಅಧಿಕಾರಿ (ಅಬ್ಸರ್ವರ್) ಹಾಗೂ ಒಬ್ಬ ಚುನಾವಣಾ ಅಧಿಕಾರಿಯನ್ನು ನೇಮಕ ಮಾಡಿ ಜಿಲ್ಲಾ ಚುನಾವಣಾ ಅಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಆದೇಶ ಹೊರಡಿಸಿದ್ದಾರೆ.

ಇನ್ನುಳಿದಂತೆ, ಚಿತ್ತಾಪುರ ತಾಲೂಕಿನ ಚಾಮನೂರು ಗ್ರಾಮದ ಮತಗಟ್ಟೆ ಚುನಾವಣಾ ಕರ್ತವ್ಯದ ಮೇಲಿದ್ದ ಸಿಬ್ಬಂದಿಯೊಬ್ಬರು ದೃಷ್ಟಿ ವಿಕಲಚೇತನ ಮಹಿಳೆಗೆ ಮತದಾನದ ವೇಳೆ ಸಹಾಯ ಮಾಡುವ ನೆಪದಲ್ಲಿ ಬಿಜೆಪಿ ಅಭ್ಯರ್ಥಿಯ ಪರವಾಗಿ ವಿದ್ಯುನ್ಮಾನ ಮತಯಂತ್ರದ ಗುಂಡಿ ಒತ್ತಿದ ಘಟನೆ ಹೊರತುಪಡಿಸಿದರೆ ಜಿಲ್ಲೆಯಾದ್ಯಂತ ಬಹುತೇಕ ಎಲ್ಲ ಕಡೆಗಳಲ್ಲಿ ಮತದಾನ ಪ್ರಕ್ರಿಯೆ ಬಹುತೇಕ ಶಾಂತಿಯುತವಾಗಿತ್ತು.


ಕ್ಷೇತ್ರವಾರು ಮತ ಎಣಿಕೆಗೆ ವ್ಯವಸ್ಥೆ

ಗುಲ್ಬರ್ಗ ವಿಶ್ವವಿದ್ಯಾಲಯದ ಬೇರೆ ಬೇರೆ ವಿಭಾಗಗಳಲ್ಲಿ ಮತ ಎಣಿಕೆಗೆ ವ್ಯವಸ್ಥೆ ಮಾಡಲಾಗಿದ್ದು, ಈಗಾಗಲೇ ಕ್ಷೇತ್ರವಾರು ಕೋಣೆಗಳನ್ನು ನಿಗದಿಪಡಿಸಲಾಗಿದೆ.

ಅಫಜಲಪುರ-ಗಣಿತ ವಿಭಾಗ, ಜೇವರ್ಗಿ-ಪರೀಕ್ಷಾ ಕೇಂದ್ರ (ಸೆಲ್ಯುಲರ್ ಹಾಲ್), ಚಿತ್ತಾಪುರ- ಪರೀಕ್ಷಾ ಕೇಂದ್ರ, ಸೇಡಂ- ಕನ್ನಡ ಅಧ್ಯಯನ ಕೇಂದ್ರ ಹರಿಹರ ಹಾಲ್ ನೆಲ ಮಹಡಿ, ಚಿಂಚೋಳಿ-ಕನ್ನಡ ಅಧ್ಯಯನ ಕೇಂದ್ರದ ಅನುಭವ ಮಂಟಪ, ಗುಲ್ಬರ್ಗ ಗ್ರಾಮೀಣ- ಪರೀಕ್ಷಾ ಕೇಂದ್ರ, ಗುಲ್ಬರ್ಗ ಉತ್ತರ- ಒಳಾಂಗಣ ಕ್ರೀಡಾಂಗಣದ ಎಡ ಭಾಗದ ಕೋಣೆ, ಗುಲ್ಬರ್ಗ ದಕ್ಷಿಣ- ಸಸ್ಯಶಾಸ್ತ್ರ ವಿಭಾಗ ಮತ್ತು ಆಳಂದ- ಒಳಾಂಗಣ ಕ್ರೀಡಾಂಗಣದ ಬಲ ಭಾಗದ ಕೋಣೆ.