ಓಝೋನ ಸಂರಕ್ಷಣೆಯಿಂದ ಜೀವ ಸಂಕುಲದ ಉಳಿವು

ಕಲಬುರಗಿ. ಸೆ.16 : ಸೂರ್ಯನಿಂದ ಹೊರಬರುವ ನೇರಳಾತೀತ ಕಿರಣಗಳಿಂದ ಭೂಮಿಯನ್ನು ರಕ್ಷಿಸುವ ಮೂಲಕ ಓಝೋನ ಪದರು ಸರ್ವ ಜೀವಿಗಳ ರಕ್ಷಾ ಕವಚವಾಗಿದೆ. ಇಂದು ಕೆಲವು ಕಾರಣಗಳಿಂದ ಇದು ಅಪಾಯವನ್ನು ಎದುರಿಸುತಿದ್ದು, ಅದರ ರಕ್ಷಣೆ ಮಾಡುವ ಮೂಲಕ ಜೀವ ಸಂಕುಲದ ಉಳಿವು ಸಾಧ್ಯವಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಅಭಿಮತ ವ್ಯಕ್ತಪಡಿಸಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪಿಯು ಕಾಲೇಜಿನಲ್ಲಿ ಎನ್.ಎಸ್.ಎಸ್ ಘಟಕದ ಸಹಯೋಗದೊಂದಿಗೆ ಭೌತಶಾಸ್ತ್ರ ವಿಭಾಗದ ವತಿಯಿಂದ ಶುಕ್ರವಾರ ಏರ್ಪಡಿಸಲಾಗಿದ್ದ ‘ವಿಶ್ವ ಓಝೋನ ದಿನಾಚರಣೆ’ಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಓಝೋನ್ ಪದರು ನಾಶವಾಗಿ ನೇರಳಾತೀತ ಕಿರಣಗಳು ಮಾನವನಿಗೆ ತಾಕಿದರೆ ಚರ್ಮರೋಗ, ಕಣ್ಣಿನ ದೋಷ, ಗಂಟಲಿನಲ್ಲಿ ಕೆರೆತ, ಕ್ಯಾನ್ಸರ್, ರೋಗ ನಿರೋಧಕ ಶಕ್ತಿಯ ಕುಗ್ಗುವಿಕೆಯಂತಹ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ಪರಿಸರವನ್ನು ಸ್ವಚ್ಚವಾಗಿಟ್ಟುಕೊಂಡು, ದಟ್ಟವಾದ ಹೊಗೆ ಹೊರಹಾಕುವ ವಾಹನಗಳ ಬಳಕೆಯನ್ನು ತಗ್ಗಿಸಬೇಕು. ಹಸಿರು ಮನೆ ಪರಿಣಾಮವನ್ನು ಕಡಿಮೆ ಮಾಡುವುದು, ಎಲ್ಲೆಡೆ ವ್ಯಾಪಕವಾಗಿ ಗಿಡ-ಮರಗಳನ್ನು ಬೆಳೆಸಿ ಪರಿಸರದ ಸಮತೋಲನವನ್ನು ಕಾಪಾಡಬೇಕೆಂದು ಹೇಳಿದರು.
ಜೀವಶಾಸ್ತ್ರ ಉಪನ್ಯಾಸಕಿ ಶರಣಮ್ಮ ಭಾವಿಕಟ್ಟಿ ಮಾತನಾಡುತ್ತಾ, ಒಝೋನ್ ಪದರಿನ ಮಹತ್ವವನ್ನು ಎಲ್ಲರಿಗೂ ತಿಳಿಸುವ ಮೂಲಕ ಜಾಗೃತಿ ಮೂಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಬಳಗದ ಕಾರ್ಯ ಅಮೋಘವಾಗಿದೆ. ಇದು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ, ಯಾವಾಗಲೂ ನಮ್ಮಲ್ಲಿ ಓಝೋನ್ ರಕ್ಷಣೆಯ ಅರಿವು ಇರಬೇಕು. ಓಝೋನನ್ನು ರಕ್ಷಿಸಿ ಮುಂದಿನ ಪೀಳಿಗೆಯನ್ನು ಜೀವಿಸಲು ಅವಕಾಶ ಮಾಡಿಕೊಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಚಂದ್ರಪ್ರಭ ಕಮಲಾಪೂಕರ್, ರವೀಂದ್ರಕುಮಾರ ಬಟಗೇರಿ, ನಯಿಮಾ ನಾಹಿದ್, ಶಂಕ್ರೆಪ್ಪ ಹೊಸದೊಡ್ಡಿ, ಪ್ರಕಾಶ ಪಾಟೀಲ, ರೇಣುಕಾ ಚಿಕ್ಕಮೆಟಿ, ದೇವೇಂದ್ರಪ್ಪ ಬಡಿಗೇರ್, ಸಿದ್ದಾರೂಢ ಬಿರಾದಾರ, ರಂಜಿತಾ ಠಾಕೂರ್, ಪ್ರ.ದ.ಸ ನೇಸರ ಎಂ.ಬೀಳಗಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.