ಓಕಳಿಯಾಟವಾಡಿ ಸಂಭ್ರಮಿಸಿದ ಯುವಕರು ಯುಗಾದಿ ಹಬ್ಬದ ಕರಿ ದಿನದ ಪ್ರಯುಕ್ತ ಪರಸ್ಪರ ಬಣ್ಣ

ಅರಕೇರಾ:,ಮಾ.೨೪- ಪಟ್ಟಣದಲ್ಲಿ ಯುಗಾದಿ ಹಬ್ಬದ ಕರಿ ದಿನವಾದ ಗುರುವಾರ ಜನ ಓಕುಳಿಯಾಟವಾಡಿ ಸಂಭ್ರಮಿಸಿದರು. ಕೋವಿಡ್ ಮಹಾಮಾರಿಯಿಂದ ಹೊರಬಂದ ಈ ವರ್ಷ ಆಚರಿಸಿಕೊಂಡು ಬಂದ ಆಚರಣೆಗೆ ಚ್ಯುತಿಯಾಗದಂತೆ ಬಣ್ಣದಾಟವಾಡಿ ಯುವಕರು ಸಂಭ್ರಮಿಸಿದರು.
ತಾಲೂಕಿನ ಕೊತ್ತದೊಡ್ಡಿ, ಹೇಮನೂರು, ಭೂಮನಗುಂಡ, ಕ್ಯಾದಿಗ್ಗೇರಾ, ಮಲ್ಲೆದೇವರಗುಡ್ಡ, ಆಲ್ಕೋಡ, ಜಾಗೀರ ಜಾಡಲದಿನ್ನಿ, ಬಿ.ಗಣೇಕಲ್, ನಾಗಡದಿನ್ನಿ, ಮುಷ್ಟೂರು ಸೇರಿ ನಾನಾ ಹಳ್ಳಿ, ದೊಡ್ಡಿ, ತಾಂಡಾಗಳಲ್ಲಿ ಪರಸ್ಪರ ಬಣ್ಣ ಎರೆಚಾಟ ನಡೆಯಿತು.
ಬೆಳಗ್ಗೆಯಿಂದ ಯುವಕರು, ಮಕ್ಕಳು ತಂಡೋಪತಂಡವಾಗಿ ಪರಸ್ಪರ ನಾನಾ ತರಹದ ಬಣ್ಣಗಳನ್ನು ಎರಚಿದರು. ಬೈಕ್‌ಗಳಲ್ಲಿ ತಿರುಗುತ್ತಾ ತಮ್ಮ ಪರಿಚಯಸ್ಥರಿಗೆ ಬಣ್ಣ ಹಾಕಿದರು. ಗುಲಾಲ್ ಜತೆ ಕೆಲವರು ಸಿಲ್ವರ್ ಪೇಂಟ್ ಬಳಕೆಮಾಡಿದ್ದಲ್ಲದೆ, ಹಲವು ಯುವಕರು ಮೊಟ್ಟೆಗಳನ್ನು ಕೂಡ ಒಡೆದರು. ಮಧ್ಯಾಹ್ನದವರೆಗೆ ಬಣ್ಣದಾಟ ಆಡಿದರು.
ಕೆಲವರು ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ತಡೆಗಟ್ಟಿ ಬಣ್ಣ ಎರಚುತ್ತಿದ್ದರು. ಕೆಲವರು ಹಣ ನೀಡಿ ಬಣ್ಣದಿಂದ ತಪ್ಪಿಸಿಕೊಂಡು ಹೋಗುತ್ತಿರುವುದು ಕಂಡು ಬಂತು. ಪಟ್ಟಣದಲ್ಲಿ ವಾರದ ಸಂತೆ ಇದ್ದುದರಿಂದ ಎಲ್ಲ ಅಂಗಡಿ- ಮುಂಗಟ್ಟುಗಳು, ಹೋಟೆಲ್‌ಗಳು ಸ್ವಯಂಪ್ರೇರಿತವಾಗಿ ಬಂದ್ ಮಾಡಲು ಹಿಂದೇಟು ಹಾಕಿದರು. ಕೆಲ ಹಳ್ಳಿಗರು ತಮಟೆ ಬಾರಿಸುತ್ತ, ಕುಣಿದು ಕುಪ್ಪಳಿಸಿದರುಮಕ್ಕಳು ಪರಸ್ಪರ ಬಣ್ಣ ಹಚ್ಚಿಕೊಂಡು ಹಬ್ಬವನ್ನು ಆಚರಿಸಿದರು.
ಈ ವೇಳೆ ರಾಘವೇಂದ್ರ ನಾಯಕ ಪೋ.ಪಾ, ಗೋವಿಂದರಾಜ ದೊರೆ, ರಾಘವೇಂದ್ರ ನಾಯಕ ದೊರೆ, ಹರ್ಷವರ್ಧನ ನಾಯಕ ಕ್ವಾಟೆ ದೊರೆ, ಶಿವಕುಮಾರ ಮುಕ್ಕನ್ನಾಳ, ಹಂಪನಗೌಡ ದಳವಾಯಿ, ಶಿವಕುಮಾರ, ಇಸ್ಮಾಯಿಲ್, ಮಂಜುನಾಥ ನಾಯಕ, ಮಹಿಬೂಬ, ಬಸವರಾಜ ಜಲ್ಲೆ, ಯಲ್ಲಪ್ಪ, ಶಿವಕುಮಾರ ನಾಯಕ, ನಾಗರಾಜ, ಶರಣಬಸವ ಇತರರಿದ್ದರು.