ಓಕಳಿಯಲ್ಲಿ ಮಿಂದ್ದೆದ್ದ ದೇವದುರ್ಗದ ಜನತೆ

ದೇವದುರ್ಗ,ಮಾ.೨೪- ಹಿಂದುಗಳ ಹೊಸ ವರ್ಷವಾದ ಯುಗಾದಿ ಹಬ್ಬವನ್ನು ತಾಲೂಕಿನಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಬುಧವಾರ ಯುಗಾದಿ ಪಾಡ್ಯ ಆಚರಿಸಿದರೆ, ಗುರುವಾರ ಕರಿ ಆಚರಿಸಲಾಯಿತು.
ಯುಗಾದಿ ನಿಮಿತ್ತ ಬುಧವಾರ ಬೆಳಗ್ಗೆಯಿಂದ ದೇವಸ್ಥಾನಕ್ಕೆ ತೆರಳಿದ ಭಕ್ತರು ದರ್ಶನ ಪಡೆದರು. ಪಟ್ಟಣದ ಶ್ರೀಶಂಭುಲಿಂಗೇಶ್ವರ ದೇವಸ್ಥಾನ, ಶ್ರೀಅಂಬಾಭವಾನಿ ದೇವಸ್ಥಾನ, ಗಬ್ಬೂರಿನ ಶ್ರೀಬೂದಿಬಸವೇಶ್ವರ ದೇವಸ್ಥಾನ, ಜಾಲಹಳ್ಳಿಯ ಶ್ರೀಲಕ್ಷ್ಮಿನರಸಿಂಹ ದೇವಸ್ಥಾನ, ಶ್ರೀಜಯಶಾಂತ ಲಿಂಗೇಶ್ವರ ದೇವಸ್ಥಾನ, ಗಲಗನ ಶ್ರೀಚನ್ನಬಸವೇಶ್ವರ ದೇವಸ್ಥಾನ, ಮುಂಡರಗಿಯ ಶ್ರೀಶಿವರಾಯ ದೇವಸ್ಥಾನ. ಐತಿಹಾಸಿಕ ಗೂಲಗ್ ಅಲ್ಲಮಪ್ರಭು ದೇವಸ್ಥಾನ, ವೀರಗೋಟ ಅಡವಿಲಿಂಗೇಶ್ವರ, ಕೊಪ್ಪರದ ಶ್ರೀಲಕ್ಷ್ಮಿ ನರಸಿಂಹ ದೇವಸ್ಥಾನ ಸೇರಿ ವಿವಿಧ ದೇವಸ್ಥಾನಗಳಿಗೆ ಭಕ್ತರು, ಮಹಿಳೆಯರು, ಮಕ್ಕಳು ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮನೆಯಲ್ಲಿ ಹೋಳಿಗಿ, ಬೇವು ತಯಾರಿಸಿ ದೇವರಿಗೆ ಅರ್ಪಿಸಿ ಸವಿದರು.
ಖರೀದಿ ಜೋರು ಯುಗಾದಿ ಹಬ್ಬದ ನಿಮಿತ್ತ ಪಟ್ಟಣದ ಮಾರುಕಟ್ಟೆ ಜನರಿಂದ ತುಂಬಿ ತುಳುಕುತ್ತಿದ್ದವು. ಬಸ್ ನಿಲ್ದಾಣ, ಡಾ.ಅಂಬೇಡ್ಕರ್ ರಸ್ತೆ ತುಂಬೆಲ್ಲ ವಿವಿಧ ವಸ್ತುಗಳ ಖರೀದಿ ಭರಾಟೆ ಜೋರಾಗಿತ್ತು. ಬೇವು ತಯಾರಿಸಲು ವಿವಿಧ ತರಹದ ಹಣ್ಣುಗಳು, ಬೇವು, ಬೆಲ್ಲ, ಎಚ್ಛಾ, ಮಣ್ಣಿನ ಮಡಿಕೆ, ಪಣತೆ ಸೇರಿ ವಿವಿಧ ವಸ್ತುಗಳನ್ನು ಖರೀದಿಸಲು ಜನರು ಮುಗಿ ಬಿದ್ದಿದ್ದರು. ಪ್ರತಿವರ್ಷದಂತೆ ಈವರ್ಷವೂ ಜನರಿಗೆ ಬೆಲೆ ಏರಿಕೆ ಬಿಸಿತಟ್ಟಿತು. ಬಾಳೆಹಣ್ಣು ೫೦ರೂ.ಗೆ ಡಜನ್, ಕಲ್ಲಂಗಡಿ ಗಾತ್ರದ ಮೇಲೆ ೫೦ರೂ.ನಿಂದ ೨೦೦ರೂ., ಸೇಬು ೩೦, ದ್ರಾಕ್ಷಿಕೆಜಿ ೧೫೦ರೂ. ಸೇರಿ ವಿವಿಧ ವಸ್ತುಗಳ ಬೆಲೆ ಏರಿಕೆ ಕಂಡಿದ್ದು ಗ್ರಾಹಕರಿಗೆ ಬೆಲೆಏರಿಕೆ ಬಿಸಿ ತಟ್ಟಿತು.
ಯುಗಾದಿ ಪಾಡ್ಯ ಗುರುವಾರ ಬೆಳಗ್ಗೆಯಿಂದ ಯುವಕರು ಓಕಳಿ ಆಟವಾಡಿ ಗಮನಸೆಳೆದರು. ಬಹುತೇಕ ಪಟ್ಟಣ ಹಾಗೂ ಹಳ್ಳಿಗಳಲ್ಲಿ ಪಾಡ್ಯದಿನ ಓಕಳಿ ಆಡಲಾಗುತ್ತಿದೆ. ಪಟ್ಟಣದ ಜೆಪಿ ವೃತ್ತ, ಮಿನಿವಿಧಾನಸೌಧ, ಅಂಬೇಡ್ಕರ್ ವೃತ್ತ, ಮಹಾತ್ಮಗಾಂಧಿ ವೃತ್ತ, ಬಸವೇಶ್ವರ ಕಾಲನಿ ಸೇರಿ ವಿವಿಧೆಡೆ ಯುವಕರು, ಮಕ್ಕಳು ಬಣ್ಣದಾಟ ಆಡಿದರು. ಗ್ರಾಮೀಣ ಭಾಗದಲ್ಲೂ ಯುವಕರು, ಮಕ್ಕಳು ಹೋಳಿ ಆಚರಿಸಿದರು. ಬಳಿಕ ಸಮೀಪದ ಕೃಷ್ಣಾನದಿ, ನಾರಾಯಣಪುರ ಬಲದಂಡೆ ನಾಲೆ, ಸಮೀಪದ ಬಾವಿಗಳಲ್ಲಿ ಜಳಕ ಮಾಡಿದರು.
ತಾಲೂಕಿನ ಹೂವಿನಹೆಡಗಿ, ಗೂಗಲ್, ಕೊಪ್ಪರ, ಜೋಳದಹೆಡಗಿ, ವೀರಗೋಟ, ತಿಂಥಣಿ ಬ್ರಿಡ್ಜ್ ಸೇರಿ ವಿವಿಧೆಡೆ ಕೃಷ್ಣಾನದಿಯಲ್ಲಿ ಸ್ನಾನಮಾಡಿ ನದಿದಂಡೆ ಮೇಲೆ ಊಟ ಸವಿದರು.