ಓಆರ್ ಆರ್ ಮಾರ್ಗ, ಕೇಂದ್ರಕ್ಕೆ ಡಿಪಿಆರ್

ಬೆಂಗಳೂರು, ಜು. ೭- ಮೆಟ್ರೋ ೩ನೇ ಹಂತದಲ್ಲಿ ೧೪೩೨೦ ಕೋಟಿ ವೆಚ್ಚದಲ್ಲಿ ಕೆಂಪಾಪುರದಿಂದ ಜೆಪಿನಗರ ೪ನೇ ಹಂತ ಹಾಗೂ ಹೊಸಹಳ್ಳಿಯಿಂದ ಕಡಬಗೆರೆವರೆಗಿನ ಪಶ್ಚಿಮ ಓಆರ್‌ಆರ್ ಮಾರ್ಗವನ್ನು ಒಳಗೊಂಡ ೪೫ ಕಿಮೀ ಉದ್ದದ ವಿಸ್ತೃತ ಯೋಜನಾ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರು ತಿಳಿಸಿದರು.
ಇದಲ್ಲದೆ ೧೫ ಸಾವಿರ ಕೋಟಿ ಅಂದಾಜಿನ ಹೆಬ್ಬಾಳದಿಂದ ಸರ್ಜಾಪುರದವರೆಗೆ ೩೭ ಕಿಮೀ ಉದ್ದದ ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರ ಅನುಮೋದನೆಗಾಗಿ ಸಲ್ಲಿಸಲಾಗುವುದು ಎಂದರು.
ವಿಧಾನಸಭೆಯಲ್ಲಿ ಪ್ರಸಕ್ತ ಸಾಲಿನ ಆಯವ್ಯಯ ಮಂಡಿಸಿದ ಮುಖ್ಯಮಂತ್ರಿಗಳು ೨೦೨೪ರ ಅಂತ್ಯದ ವೇಳೆಗೆ ಬೈಯ್ಯಪ್ಪನಹಳ್ಳಿಯಿಂದ ಕೃಷ್ಣರಾಜಪುರದವರೆಗೆ ಕೆಂಗೇರಿಯಿಂದ ಚಲ್ಲಘಟ್ಟದವರೆಗೆ, ನಾಗಸಂದ್ರದಿಂದ ಮಾದವಾರದವರೆಗೆ ಆರ್ ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ೨೭ ಕಿಮೀ ಉದ್ದದ ಮೆಟ್ರೋ ನೂತನ ಮಾರ್ಗಗಳನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಮುಂದಿನ ೩ ವರ್ಷಗಳಲ್ಲಿ ೭೦ ಕಿಮೀ ಸಂಪರ್ಕ ಜಾಲವನ್ನು ೧೭೬ ಕಿಮೀ ಗೆ ವಿಸ್ತರಿಸಿ, ಮೆಟ್ರೋ ಕಾರ್ಯಾಚರಣೆಯ ಸಂಪರ್ಕ ಜಾಲವನ್ನು ಎರಡೂವರೆ ಪಟ್ಟು ಹೆಚ್ಚಿಸಲಾಗುವುದು. ಪ್ರಗತಿಯಲ್ಲಿರುವ ವಿಮಾನ ನಿಲ್ದಾಣದ ಲೈನ್ ಕಾiಗಾರಿಯನ್ನು ೨೦೨೬ಕ್ಕೆ ಪೂರ್ಣಗೊಳಿಸಿ ಕಾರ್ಯಾರಂಭ ಮಾಡಲಾಗುವುದು ಎಂದರು.
ಹಿಂದಿನ ಸರ್ಕಾರ ವಿಫಲ
ನಗರದ ಸುಗಮ ಸಂಚಾರಕ್ಕೆ ಪೂರಕವಾದ ಬೆಂಗಳೂರು, ಉಪನಗರ ರೈಲು ಯೋಜನೆಯನ್ನು ಜಾರಿಗೊಳಿಸುವಲ್ಲಿ ಕಳೆದ ಡಬಲ್ ಇಂಜಿನ್ ಸರ್ಕಾರ ವಿಫಲವಾಗಿದೆ. ಈ ಯೋಜನೆಯ ಮೊತ್ತ ೧೫೭೬೭ ಕೋಟಿಗಳಾಗಿದ್ದು ಕೇಂದ್ರದ ೩೨೪೨ ಕೋಟಿ ರೂ.ಗಳಾಗಿದ್ದು ರಾಜ್ಯದ ಪಾಲು ೫೦೮೭ ಹಾಗೂ ಸಾಲದ ಮೊತ್ತ ೭೪೩೮ ಕೋಟಿ ರೂ.ಗಳಾಗಿದೆ.
ಈ ಯೋಜನೆಗೆ ಕೇಂದ್ರ ಸರ್ಕಾರ ೫೦೦ ಕೋಟಿ ರೂ. ಬಿಡುಗಡೆ ಮಾಡಿದ್ದು, ರಾಜ್ಯ ಸರ್ಕಾರವು ೧ ಸಾವಿರ ಕೋಟಿ ರೂ.ಗಳನ್ನು ಒದಗಿಸಿದೆ ಎಂದು ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿಗಳು ತಿಳಿಸಿದರು.
ಚರಂಡಿ ನೀರು ಸಂಸ್ಕರಣೆ
ಪಾರಂಪರಿಕ ಮತ್ತು ದ್ರವ ತ್ಯಾಜ್ಯದ ಸಮರ್ಪಕ ನಿರ್ವಹಣೆ ಹಾಗೂ ಒಳಚರಂಡಿ ನೀರು ಸಂಸ್ಕರಿಸುವ ಆಧುನಿಕ ಪದ್ಧತಿಗಳನ್ನು ಅಳವಡಿಸುವ ಮೂಲಕ ನದಿಗಳು ಮತ್ತು ಕೆರೆಗಳಿಗೆ ಹರಿಯುವ ಮಾಲಿನ್ಯ ನಿಯಂತ್ರಿಸಲು ೧೨೫೦ ಕೋಟಿ ವೆಚ್ಚದಲ್ಲಿ ಬೆಂಗಳೂರು ಹಾಗೂ ಇತರೆ ಪಟ್ಟಣಗಳಲ್ಲಿ ೨೧೫೦ ಕೋಟಿ ಸೇರಿಸಿ ಒಟ್ಟಾರೆ ೩೪೦೦ ಕೋಟಿ ಅನುದಾನದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕೇಂದ್ರ ಪುರಸ್ಕೃತ ಅಮೃತ್ ೨.೦ ಯೋಜನೆಯಡಿ ರಾಜ್ಯದ ೧ ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ೨೮೭ ಪಟ್ಟಣಗಳಲ್ಲಿ ನೀರು ಸರಬರಾಜು ಮತ್ತು ಜಲಮೂಲಗಳ ಸಂರಕ್ಷಣೆ ಕಾಮಗಾರಿಗಳಲ್ಲೂ ೯೩೨೦ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ.
ಇದರಲ್ಲಿ ಕೇಂದ್ರದ ೪೬೦೫ ರಾಜ್ಯದ ಹಾಗೂ ನಗರ ಸಂಸ್ಥೆಗಳ ಪಾಲು ೪೬೧೨ ಕೋಟಿ ರೂ.ಗಳಾಗಿರುತ್ತದೆ. ಪ್ರಸಕ್ತ ಸಾಲಿನಲ್ಲಿ ಈ ಯೋಜನೆಗೆ ೮೦೦ ಕೋಟಿರೂ.ಗಳನ್ನು ಒದಗಿಸಲಾಗಿದೆ ಎಂದರು.
ಇಂದಿರಾ ಕ್ಯಾಂಟಿನ್ ದುರಸ್ತಿ
ನಗರ ಪ್ರದೇಶಗಳಲ್ಲಿ ಬಡವರು ಶ್ರಮಿಕರಿಗೆ ಅತ್ಯಂತ ಕಡಿಮೆ ದರದಲ್ಲಿ ಊಟ, ಉಪಾಹರ ಒದಗಿಸುವ ಇಂದಿರಾ ಕ್ಯಾಂಟಿನ್ ಗಳನ್ನು ಕಳೆದ ಸರ್ಕಾರ ಸ್ಥಗಿತಗೊಳಿಸಿತ್ತು. ನಮ್ಮ ಸರ್ಕಾರವು ಹೊಸ ಮೆನುವಿನೊಂದಿಗೆ ಇಂದಿರಾ ಕ್ಯಾಂಟಿನ್ ಯೋಜನೆಯನ್ನು ಬಿಬಿಎಂಪಿ ರಾಜ್ಯ ಇತರ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪುನರಾರಂಭ ಮಾಡಲಾಗುವುದು ಎಂದರು.
೨ನೇ ಹಂತದಲ್ಲಿ ಎಲ್ಲ ಹೊಸ ಪಟ್ಟಣಗಳಲ್ಲಿ ಬಿಬಿಎಂಪಿ ಹೊಸ ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟಿನ್‌ಗಳ ನಿರ್ಮಾಣ ದುರಸ್ತಿ ನವೀಕರಣ ನಿರ್ವಹಣೆಗೆ ೧೦೦ ಕೋಟಿ ನೀಡಲಾಗುವುದು ಎಂದರು.
ತ್ಯಾಜ್ಯ ಸಂಗ್ರಹಣೆಗೆ ಮತ್ತು ಸಂಸ್ಕರಣೆಯನ್ನು ಹೆಚ್ಚು ವೈಜ್ಞಾನಿಕವಾಗಿ ಮಾಡಲು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆಯ ಪರಿಣಾಮಕಾರಿ ಕಾರ್ಯಾಚರಣೆಗೆ ೧೦೦ ಕೋಟಿ ಒದಗಿಸಲಾಗುವುದು ಎಂದು ತಿಳಿಸಿದರು.