ಓಂ ಗಂಗಾಗೆ ಚೊಚ್ಚಲ ಜನ್ಮ ದಿನ

ಆನೇಕಲ್, ಅ.೨೭-ರಾಜಧಾನಿ ಬೆಂಗಳೂರಿನ ಬಳಿ ಇರುವ ಬನ್ನೇರುಘಟ್ಟ ಜೈವಿಕ ಉದ್ಯಾನವನವು ಒಂದಲ್ಲ ಒಂದು ವಿಶೇಷತೆಗಳಿಂದ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಆನೆಗಳ ಸಂಖ್ಯೆ ಹೆಚ್ಚಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಮರಿ ಆನೆಯ ಹುಟ್ಟುಹಬ್ಬದ ವಿಶೇಷ ಆಚರಣೆ ನಡೆದಿದ್ದು ಎಲ್ಲೆಡೆ ಹುಟ್ಟು ಹಬ್ಬದ ಸಂಭ್ರಮಾಚರಣೆ ಮನೆ ಮಾಡಿತ್ತು.
ಬನ್ನೇರುಘಟ್ಟ ಜೈವಿಕ ಉದ್ಯಾನವನದ ತಾಯಿ ಆನೆ ವನಶ್ರೀಯ ಮರಿ ಓಂ ಗಂಗಾ ಇಂದು ೧ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದೆ. ಅದೇ ರೀತಿ ಮರಿ ಆನೆಗೆ ಇಷ್ಟವಾದ ತರಕಾರಿ, ಹಣ್ಣುಗಳನ್ನು ಪಾರ್ಕ್ ಆವರಣದಲ್ಲಿ ಕೇಕ್ ತರಹದ ವ್ಯವಸ್ಥೆ ಮಾಡಿ ವಿಶೇಷ ಜಾತಣ ನೀಡುವ ಮೂಲಕ ಸಿಬ್ಬಂದಿ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿದರು.
ಇಲ್ಲಿನ ಸಿಬ್ಬಂದಿ ಆನೆಯ ಮರಿ ಹುಟ್ಟುಹಬ್ಬಕ್ಕೆ ಅಕ್ಕಿ ಪೊಂಗಲ್, ಬೆಲ್ಲ, ತೆಂಗಿನಕಾಯಿ, ಕ್ಯಾರೆಟ್, ಬಾಳೆಹಣ್ಣು, ಕಬ್ಬು ಮತ್ತು ಕಲ್ಲಂಗಡಿಗಳಿಂದ ಮಾಡಿದ ವಿಶೇಷ ಕೇಕ್ ಅನ್ನು ಸಿದ್ಧಪಡಿಸಿದರು. ಕೇಕ್‌ನ ಮುಂಭಾಗದಲ್ಲಿ ಕ್ಯಾರೆಟ್, ಕಬ್ಬು ಮತ್ತು ಕಲ್ಲಂಗಡಿಗಳಲ್ಲಿ ಓಂ ಗಂಗಾ ಎಂದು ಬರೆಯಲಾಗಿತ್ತು. ಸಿಬ್ಬಂದಿ ಆನೆ ಮರಿಗೆ ವಿಶೇಷ ಕೇಕ್ ನೀಡುವ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿದರು.
ಓಂ ಗಂಗಾ ಅವರ ಹುಟ್ಟುಹಬ್ಬದ ಅಂಗವಾಗಿ ಆನೆಗಳ ಆರೈಕೆ ಕೇಂದ್ರದಲ್ಲಿರುವ ಎಲ್ಲಾ ಆನೆಗಳಿಗೆ ಈ ವಿಶೇಷ ಕೇಕ್ ನೀಡಲಾಯಿತು. ಬೆಂಗಳೂರಿನ ಜಿ-ಗ್ರೂಪ್ ಈ ಮರಿ ಆನೆಯನ್ನು ದತ್ತು ತೆಗೆದುಕೊಂಡು ಅದಕ್ಕೆ ’ಓಂ ಗಂಗಾ’ ಎಂದು ನಾಮಕರಣ ಮಾಡಿದೆ.ಕಣ್ಮನ ಸೆಳೆಯುವ ಕೇಕ್: ಸುತ್ತಲೂ ಬಾಳೆಹಣ್ಣು, ಮಧ್ಯದಲ್ಲಿ ಕೇಕ್ ಆಕಾರದಲ್ಲಿ ಪೊಂಗಲ್, ಕೇಕ್ ಮೇಲೆ ಕ್ಯಾರೆಟ್ ಮತ್ತು ಕಲ್ಲಂಗಡಿ ಅಲಂಕರಿಸಲಾಗಿತ್ತು ಗಮನ ಸೆಳೆಯಿತು.