ಒಸಾಕ ಫೈನಲ್‌ಗೆ ಲಗ್ಗೆ


ಮೆಲ್ಬರ್ನ್.ಫೆ೧೮_ ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ ೨೦೨೧ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ೨೩ ಬಾರಿಯ ಚಾಂಪಿಯನ್ ಅಮೆರಿಕದ ಸೆರೆನಾ ವಿಲಿಯಮ್ಸ್ ಮಣಿಸಿರುವ ಜಪಾನ್‌ನ ಯುವ ತಾರೆ ನವೊಮಿ ಒಸಾಕ ಫೈನಲ್‌ಗೆ ಅಡಿಯಿಟ್ಟಿದ್ದಾರೆ.
ಗುರುವಾರ ನಡೆದ ಮಹಿಳಾ ಸಿಂಗಲ್ಸ್ವಿಭಾಗದ ಸೆಮಿಫೈನಲ್ ಮುಖಾಮುಖಿಯಲ್ಲಿ ಮೂರು ಬಾರಿಯ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ಒಸಾಕ ಅವರು ೬-೩, ೬-೪ರ ನೇರ ಸೆಟ್ ಅಂತರದಲ್ಲಿ ಸೆರೆನಾರನ್ನು ಸೋಲಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿದ್ದಾರೆ.
೨೩ರ ಹರೆಯದ ಒಸಾಕ, ೨೦೧೯ನೇ ಸಾಲಿನಲ್ಲಿ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಮ್ ಕಿರೀಟ ಗೆದ್ದಿದ್ದರು. ಇದರೊಂದಿಗೆ ಎರಡನೇ ಬಾರಿಗೆ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಅತ್ತ ೩೯ರ ಹರೆಯದ ಅಮೆರಿಕದ ಹಿರಿಯ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರ ೨೪ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಕನಸು ಭಗ್ನಗೊಂಡಿದೆ. ಇದಕ್ಕಾಗಿ ಮತ್ತಷ್ಟು ಸಮಯ ಕಾಯಬೇಕಿದೆ. ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಆಸ್ಟ್ರೇಲಿಯಾದ ಮಾಜಿ ಆಟಗಾರ್ತಿ ಮಾರ್ಗರೇಟ್ ಕೋರ್ಟ್ ದಾಖಲೆಯ ೨೪ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಈ ದಾಖಲೆಯನ್ನು ಸರಿಗಟ್ಟುವ ಅವಕಾಶದಿಂದ ಸೆರೆನಾ ವಂಚಿತರಾದರು. ಒಟ್ಟು ಏಳು ಬಾರಿ ಆಸ್ಟ್ರೇಲಿಯನ್ ಓಪನ್ ಗೆದ್ದಿರುವ ಸೆರೆನಾ, ಕೊನೆಯದಾಗಿ ೨೦೧೭ರಲ್ಲಿ ಮೆಲ್ಬರ್ನ್ ಪಾರ್ಕ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿದ್ದರು.