ಒಳ ಮೀಸಲಾತಿ ವಿರೋಧಿಸಿ ಮಸ್ಕಿಯಲ್ಲಿ ಏ.೭ರಂದುಹಮ್ಮಿಕೊಂಡಿದ್ದ ಪ್ರತಿಭಟನೆ ಮುಂದಕ್ಕೆ…

ಮುದಗಲ್ಲ: ರಾಜ್ಯ ಸರಕಾರ ಒಳ ಮೀಸಲಾತಿ ಶಿಪಾರಸ್ಸು ಮಾಡಿದ್ದನ್ನು ಖಂಡಿಸಿ ಇದೆ ಏ.೭ರಂದು ಶುಕ್ರವಾರ ಮಸ್ಕಿ ಪಟ್ಟಣದಲ್ಲಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದಿಂದ ಹಮ್ಮಿಕೊಂಡಿದ್ದ
ಪ್ರತಿಭಟನಾ ಮೆರವಣಿಗೆಯನ್ನು ಮುಂದೂಡಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ದೇವಪ್ಪ ರಾಠೋಡ ತಿಳಿಸಿದರು.

ಪಟ್ಟಣದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸರಕಾರ ಇಂದು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ.

ಪರಿಶಿಷ್ಟ ಜಾತಿಯ ೧೦೧ ಜಾತಿಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಿ ಒಳ ಮೀಸಲಾತಿ ಜಾರಿ ಮಾಡುವ ತಿರ್ಮಾನಕ್ಕೆ ಬಂದಿರುತ್ತದೆ.

ಒಳ ಮೀಸಲಾತಿ ಜಾರಿಯಿಂದ ಬಂಜಾರ. ಭೋವಿ, ಕೊರಮ ಕೊರಚ, ಸುಡಗಾಡು ಸಿದ್ದರು, ಭಜೆಂತ್ರಿ ಹಾಗೂ ಅಲೆಮಾರಿ ಸಮುದಾಯಗಳಿಗೆ ಅನ್ಯಾಯವಾಗಲಿದೆ.

ಪರಿಶಿಷ್ಟ ಜಾತಿಗಳ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಮತ್ತಿತರ ಅಂಶಗಳನ್ನು ಸರಕಾರ ವಸ್ತುನಿಷ್ಠವಾಗಿ ಅಧ್ಯಯನ ಮಾಡದೇ, ಹಿಂಬಾಗಿಲಿನಿಂದ ನ್ಯಾ.ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಲು
ಹೊರಟಿದೆ.

ಪರಿಶಿಷ್ಟ ಜಾತಿಯಲ್ಲಿರುವ ೯೯ ಸಮುದಾಯಗಳ ಬೆನ್ನಿಗೆ ಚೂರಿ ಹಾಕಿ ನಮ್ಮಲ್ಲಿಯೇ ಒಡಕು ತರುವ ಕೆಲಸವನ್ನು ಸರಕಾರ ಮಾಡಿದೆ. ಹೀಗಾಗಿ ಒಳ ಮೀಸಲಾತಿ ಯಿಂದ ಅನ್ಯಾಯ ಗೊಳಗಾದ ಸಮುದಾಯ ಎಲ್ಲಾ ಮುಖಂಡರು ಸೇರಿಕೊಂಡು ಸರಕಾರಕ್ಕೆ ಬಿಸಿಮುಟ್ಟಿಸಲು ಏ.೭ರಂದು ಶುಕ್ರವಾರ ಮಸ್ಕಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ
ನಡೆಸಲು ತಿರ್ಮಾನಿಸಲಾಗಿತ್ತು.

ಆದರೆ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ಮಾ.೨೯ ರಿಂದ ಮೇ.೧೫ರವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿ ರುವುದರಿಂದ ಪೊಲೀಸ ಇಲಾಖೆ ಮೆರವಣಿಗೆಗೆ ಪರವಾನಿಗೆ ನೀಡದ ಕಾರಣ ಸದರಿ ಪ್ರತಿಭಟನೆಯನ್ನು ಮುಂದಕ್ಕೆ ಹಾಕಲಾಗಿದೆ.

ಚುನಾವಣೆ ನೀತಿ
ಸಂಹಿತೆ ಮುಗಿದ ನಂತರ ಅನ್ಯಾಯಾಕ್ಕೋಳಗಾದ ಬಂಜಾರ ,ಭೋವಿ, ಕೊರಮ,ಕೊರಚ, ಸುಡಗಾಡು ಸಿದ್ದರು, ದಾಸರ,ಭಜೆಂತ್ರಿ ಸೇರಿದಂತೆ ಇತರ ಸಮುದಾಯಗಳ ಮುಖಂಡರ
ಪುನಃ ಸಭೆ ಕರೆದು ಪ್ರತಿಭಟನೆಯ ದಿನಾಂಕ ತಿಳಿಸಲಾಗುವುದು ಎಂದು ದೇವಪ್ಪ ರಾಠೋಡ ಮಾಹಿತಿ ನೀಡಿದರು.