ಒಳ ಮೀಸಲಾತಿ ವರ್ಗೀಕರಣ ಕೆಲ ಸಮುದಾಯಗಳಿಗೆ ಅನ್ಯಾಯ, ಪ್ರತಿಭಟನೆಯ ಎಚ್ಚರಿಕೆ

ದಾವಣಗೆರೆ.ಮಾ.೨೯: ರಾಜ್ಯ ಸರ್ಕಾರ ತರಾತುರಿಯಲ್ಲಿ‌ ಒಳ ಮೀಸಲಾತಿ ಘೋಷಣೆ ಮಾಡಿದ್ದು, ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಗಳಿಗೆ ಅನ್ಯಾಯ ಮಾಡಿದ್ದು ಸರ್ಕಾರದ ಕ್ರಮ ಸರಿಯಲ್ಲ ಎಂದು ದಾವಣಗೆರೆ ಜಿಲ್ಲಾ ಭೋವಿ ಸಮಾಜ ವಿರೋಧ ವ್ಯಕ್ಯ ಪಡಿಸಿದೆ.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ದಾವಣಗೆರೆ ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ಹೆಚ್.ಜಯಣ್ಣ, ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಜನರ ಮಧ್ಯೆ ವಿಷ ಬಿತ್ತುವ ಕೆಲಸ ಮಾಡಿದ್ದು, ಅವೈಜ್ಞಾನಿಕವಾಗಿ ಒಳ ಮೀಸಲಾತಿಯನ್ನು ಘೋಷಿಸಿದೆ. ಬಿ.ಜೆ.ಪಿ. ಸರ್ಕಾರವು ತಪ್ಪನ್ನು ತಿದ್ದಿಕೊಳ್ಳಲಿ, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಂಕಷ್ಟದ ಪರಿಸ್ಥಿತಿ ಎದುರಿಸ ಬೇಕಾಗಲಿದೆ ಎಂದು ಎಚ್ಚರಿಕೆ ನೀಡಿದರು.ಕರ್ನಾಟಕ ಸರ್ಕಾರವು ಇನ್ನು ಸಹ ಸದಾಶಿವ ಆಯೋಗದ ವರದಿಯನ್ನು ಒಪ್ಪಿರುವುದಿಲ್ಲ‌ ಅಲ್ಲದೇ ಈ ವರದಿಯನ್ನು ಮುಕ್ತಾಯಗೊಳಿಸಿದೆ. ಆದರೂ ಸಹ ಯಾವ ಆಧಾರದ ಮೇಲೆ ಒಳ ಮೀಸಲಾತಿಯನ್ನು ನೀಡಿದೆ ಎಂಬುವುದನ್ನು ಸರ್ಕಾರ ತಿಳಿಸಿಲ್ಲ ಎಂದು ದೂರಿದರು.ಪರಿಶಿಷ್ಟ ಜಾತಿಯಲ್ಲಿ ಬಂಜಾರ ಭೋವಿ, ಕೊರಮ ಕೊರಚ ಜಾತಿಗಳು, ಶೇಕಡ 25ರಷ್ಟು ಜನಸಂಖ್ಯೆ ಇದ್ದೇವೆ. ಇದನ್ನು ಪರಿಷ್ಕೃತ ಪರಿಶಿಷ್ಟ ಜಾತಿ 17ರಷ್ಟು ಮೀಸಲು ಪ್ರಮಾಣದಲ್ಲಿ ಭಾಗಿಸಿದಾಗ  ಸಮುದಾಯಗಳು ಶೇ.4.5ರಷ್ಟು  ಜನಸಂಖ್ಯೆ ಆಗುತ್ತಿವೆ, ಅಂದರೆ ನಮ್ಮ ಜನಸಂಖ್ಯೆಗೆ ಅನುಗುಣವಾಗಿ ನಮಗೆ ವರ್ಗೀಕರಣೆಯಲ್ಲಿ ಮೀಸಲಾತಿ ನೀಡಲಾಗಿದೆ. ಈ ಶೇಕಡವಾರು ಗಮನಿಸಿದಾಗ ಪರಿಶಿಷ್ಟ ಜಾತಿಯ ಬಜೆಟ್ ಗಾತ್ರ 21,345 ಕೋಟಿಯಷ್ಟು ಇದೆ. ಇದರಲ್ಲಿ ಶೇ 25ರಷ್ಡು ಭಾಗಿಸಿದಾಗ 5,333.75 ಕೋಟಿ ರೂಪಾಯಿಗಳು ಬಂಜಾರ, ಭೋವಿ ಕೊರಮ, ಕೊರಚ ಜಾತಿಗಳಿಗೆ ಬರಬೇಕು ಎಂದು ಹೇಳಿದರು.ಮೀಸಲಾತಿ ಪಡೆದ ದಿನದಿಂದ ಈವರೆಗೆ ಶೇಕಡ 11ರಷ್ಟು ಅಭಿವೃದ್ಧಿ ಆಗಬೇಕಿದ್ದ ಬಂಜಾರ, ಭೋವಿ, ಕೊರಮ, ಕೊರಚ ಸಮುದಾಯಗಳು ಇಲ್ಲಿಯವರೆಗೆ ಕೇವಲ ಶೇ. 3ರಷ್ಟು ಅಭಿವೃದ್ಧಿಯಾಗಿದೆ. ಈ ಅಂಕಿ ಅಂಶವನ್ನು ಗಮನಿಸಿದಾಗ ನಮಗೆ ಸಿಗಬೇಕಾದ ಸೌಲಭ್ಯ ಬೇರೆಯವರು ಕಬಳಿಸಿದ್ದಾರೆ ಅಲ್ಲದೇ ನಾವು ವಂಚಿತರಾಗಿದ್ದೇವೆ ಎಂದು ಕಿಡಿಕಾರಿದರು.ರಾಜ್ಯ ಬಿ.ಜೆ.ಪಿ. ಸರ್ಕಾರ ತಪ್ಪು ಮಾಡಿದ್ದರೂ ಸಹ ಅದನ್ನು ಸಮರ್ಥಿಸಿಕೊಳ್ಳದೇ ಈ ಕೂಡಲೇ ಒಳಮೀಸಲಾತಿ ಆದೇಶವನ್ನು ವಾಪಾಸು ಪಡೆಯಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಚ್ಚರಿಕೆ ನೀಡಿದರು.ಸುದ್ದಿಗೋಷ್ಟಿಯಲ್ಲಿ ಕಾರ್ಯಾಧ್ಯಕ್ಷ ವಿ.ಗೋಪಾಲ್, ಕಾರ್ಯದರ್ಶಿ ಜಿ.ಸಿ.ಮಂಜಪ್ಪ, ಖಜಾಂಚಿ ವಿ.ಇ. ವಿಜಯ ಕುಮಾರ್, ಸಿ.ಎನ್.ವೀರಭದ್ರಪ್ಪ, ಮಲೇಬೆನ್ನೂರು ಮಂಜುನಾಥ್, ಎ.ಬಿ.ನಾಗರಾಜ್ ಇತರರು ಇದ್ದರು.