ಒಳ ಮೀಸಲಾತಿ ವರ್ಗೀಕರಣದಲ್ಲಿ ಜಿಲ್ಲಾವಾರು ಜಾತಿಗಳ ಗೊಂದಲ ಸರಿಪಡಿಸಲು ಮನವಿ

ದಾವಣಗೆರೆ.ಏ.೨೦: ಸರ್ಕಾರ ಇತ್ತೀಚೆಗೆ ನಡೆಸಿದ ಒಳ ಮೀಸಲಾತಿ ವರ್ಗೀಕರಣ ಮಾಡಿರುವುದು ಸ್ವಾಗತಾರ್ಹವೇ ಆದರೂ, ಜಿಲ್ಲಾವಾರು ಜಾತಿಗಳ ವರ್ಗೀಕರಣ ಗೊಂದಲದ ಗೂಡಾಗಿದೆ ಎಂದು ಮಾ ಜನ್ ಜಾಗೃತ್ ಸಮಿತಿ  ರಾಜ್ಯಾಧ್ಯಕ್ಷ ಕೆ. ಶಿವಕುಮಾರ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೧೦೧ ಜಾತಿಗಳನ್ನು ೪ ವರ್ಗಗಳನ್ನಾಗಿ ವಿಭಾಗಿಸಿ, ಸಚಿವ ಸಂಪುಟದಲ್ಲಿ ಮಂಡಿಸಿ, ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವ  ಕ್ರಮವು ಕೆಲವು ನ್ಯೂನತೆಗಳಿಂದ ಕೂಡಿರುತ್ತದೆ ಎಂದರು.ಆದೇಶದ ಪ್ರಕಾರ ಗ್ರೂಪ್ ೧ರಲ್ಲಿ ಆದಿ ದ್ರಾವಿಡ ಸಂಬಂಧಿಸದ ಜಾತಿಗಳಾದ ಸಮಗಾರ, ಮೋಚಿ, ಕಮಾಟಿ, ಅಸಾದರು, ಬಾಂಚಿ, ಅರಳಯ್ಯ, ಚಮ್ಮಾರ, ತೆಲುಗು ಮೋಚಿ, ಕಮಾಟಿ, ರಾಣೇಗರ್, ರೋಹಿದಾಸ್, ರೋಹಿತ್. ಗ್ರೂಪ್ ೧ ರ ಪ್ರಕಾರ ಮತ್ತು ೩  ಮಾದಿಗ ೪ ಸಮಗಾರ ಎಂದು  ನಮೂದಿಸಲಾಗಿದೆ. ಮೇಲ್ಕಂಡ ಗುಂಪಿಗೆ ಶೇ.೬ ಮೀಸಲಾತಿ ನೀಡಲಾಗಿದೆ. ಹಾಗೆಯೇ ಗ್ರೂಪ್೨ ರಲ್ಲಿ  ಆದಿಕರ್ನಾಟಕ ಎಂದು ಅದರಲ್ಲಿ ಚಲವಾದಿ, ಚಲುವಾದಿ, ಚನ್ನಯ್ಯ, ದಾಸರು, ಮಹರ್, ವಲಯ ಮುಂತಾದ ಹೆಸರುಗಳನ್ನು ನಮೂದಿಸಲಾಗಿದೆ. ಈ ವರ್ಗಗಳಿಗೆ ಶೇ.೫.೫ ಕಲ್ಪಿಸಿಕೊಡಲಾಗಿದೆ.ಈ ವರ್ಗಗಳನ್ನು ರಾಜ್ಯದಲ್ಲಿ ಜಿಲ್ಲಾವಾರು ಕೇಂದ್ರಗಳಲ್ಲಿ  ಬೇರೆ ಬೇರೆ ಹೆಸರುಗಳಿಂದ ಗುರುತಿಸುವುದು ವಾಡಿಕೆ.ನಮ್ಮ ದಾವಣಗೆರೆ, ಶಿವಮೊಗ್ಗ ಚಿತ್ರದುರ್ಗ ಕಡೆಗಳಲ್ಲಿ ಆದಿ ಕರ್ನಾಟಕ  ಎಂದು ಗುರುತಿಸಲಾಗುತ್ತದೆ. ಹರಿಜನ ಎಂದು ಸಹ ಗುರುತಿಸಲ್ಪಡುವ ವರ್ಗವಾಗಿದೆ. ಇವರಿಗೆ ಆದಿ ಕರ್ನಾಟಕ ಎಂಬ ಹೆಸರಿನಡಿ  ಸರ್ಕಾರದ ಯೋಜನೆಗಳನ್ನು ನೀಡಲಾಗುತ್ತಿದೆ.ಆದಿ ಕರ್ನಾಟಕ ಮತ್ತು ಮಾದಿಗ , ತ್ರಿಮತಸ್ಥ, ಮೋಚಿ, ದೊಹರ, ದಕ್ಕಲಿಗ ಪಂಗಡಗಳಾಗಿದ್ದು, ಇತಿಹಾಸ ಪೂರ್ವದಿಂದಲೂ ಸಾಂಸ್ಕೃತಿಕ ಭಿನ್ನತೆಯನ್ನು ಹೊಂದಿದೆ. ಆದಿ ಕರ್ನಾಟಕ ಇತಿಹಾಸ ಪೂರ್ವದಿಂದಲೂ ಬಂದಿರುವ ಪದವಾಗಿದೆ. ಹಾಗಾಗಿ ಕಾರ್ಯಾಂಗದ ಅಧಿಕಾರಿಗಳು  ಮತ್ತೊಮ್ಮೆ ಪರಿಶೀಲಿಸಿ, ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ, ಹೆಚ್.ಎನ್. ಚಂದ್ರಪ್ಪ, ಎನ್. ಮಂಜುನಾಥ್, ಎ.ಕೆ. ಸುರೇಶ್, ಎ.ಕೆ. ಸುಭಾಷ್ ಇನ್ನಿತರರಿದ್ದರು.