ಒಳ ಮೀಸಲಾತಿ ನಿರ್ಣಯ : ಲಂಬಾಣಿಗರ ಆಕ್ರೋಶ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಏ.01: ಪರಿಶಿಷ್ಟ ಜಾತಿಯ ಒಳ ಮೀಸಲಾತಿ ವರ್ಗೀಕರಣ ವಿರೋಧಿಸಿ ಪಟ್ಟಣದಲ್ಲಿ ಲಂಬಾಣಿ ಸಮುದಾಯವರು ಪ್ರತಿಭಟಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮೀಸಲಾತಿ ಸಂರಕ್ಷಣಾ ಒಕ್ಕೂಟದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಲಂಬಾಣಿ, ಭೋವಿ, ಕೊರಚ,ಕೊರಮ ಸಮುದಾಯದವರು ಪಾಲ್ಗೊಂಡು ರಾಜ್ಯ ಸರ್ಕಾರ ಹಾಗೂ ಸದಾಶಿವ ಆಯೋಗದ ವಿರುದ್ಧ ಧಿಕ್ಕಾರ ಕೂಗಿದರು.
ಪಟ್ಟಣದ ಶಾಸ್ತ್ರಿ ವೃತ್ತದಲ್ಲಿ ಕೆಲಕಾಲ ರಸ್ತೆ ತಡೆದು ಪ್ರತಿಭಟಿಸಿ ನಂತರ ತಹಶೀಲ್ದಾರ್ ಕಚೇರಿ ವರೆಗೆ ಮೆರವಣಿಗೆ ನಡೆಸಿ, ತಹಶೀಲ್ದಾರ್ ಕೆ.ಶರಣಮ್ಮ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ದೂಪದಹಳ್ಳಿ ಮರಿಯ್ಮಮದೇವಿ ಮಠದ ಶಿವಪ್ರಕಾಶ್ ಮಹಾರಾಜ್ ಮಾತನಾಡಿ, ಸರ್ಕಾರದ ದುಡುಕಿನ ನಿರ್ಧಾರದಿಂದ ಪರಿಶಿಷ್ಟರಲ್ಲಿ ಸಾಕಷ್ಟು ಗೊಂದಲ, ವೈಷಮ್ಯ ಉಂಟಾಗಿದೆ. ಸರ್ಕಾರ ಈ ಕೂಡಲೇ ಒಳ ಮೀಸಲಾತಿ ತೀರ್ಮಾನ ಹಿಂಪಡೆಯಬೇಕು. ಇಲ್ಲದಿದ್ದರೆ ಶಾಂತಿಯುತವಾಗಿ ನಡೆಯುವ ನಮ್ಮ ಹೋರಾಟ ಉಗ್ರ ಸ್ವರೂಪ ಪಡೆಯುತ್ತದೆ ಎಂದು ಹೇಳಿದರು.
ಮೀಸಲಾತಿ ಸಂರಕ್ಷಣಾ ಒಕ್ಕೂಟದ ಮುಖಂಡ ಡಾ. ಎಲ್.ಪಿ.ನಾಯ್ಕ ಕಠಾರಿ ಮಾತನಾಡಿ, ಪರಿಶಿಷ್ಟರಲ್ಲಿ ನಾಲ್ಕು ವಿಭಾಗ ಮಾಡಿ ಮೀಸಲಾತಿ ಹಂಚಿಕೆ ಮಾಡಿರುವುದು ಸಂವಿಧಾನ ವಿರೋಧಿ ನೀತಿಯಾಗಿದೆ. ಹಿಂದುಳಿದ ವರ್ಗಗಳ ಮೀಸಲಾತಿ ಕಸಿದು ಸರ್ಕಾರ ಅನ್ಯಾಯ ಮಾಡಿದೆ. ಸಂವಿಧಾನಬದ್ದ ನಮ್ಮ ಹಕ್ಕು ಕೇಳುತ್ತಿದ್ದು ಯಾವೊಬ್ಬ ರಾಜಕಾರಣಿಯ ಆಸ್ತಿ ಕೇಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಕ್ಕೂಟದ ಮುಖಂಡರಾದ ಶಾಂತನಾಯ್ಕ, ಆರ್.ರೆಡ್ಡಿನಾಯ್ಕ, ಎಲ್.ಚಂದ್ರನಾಯ್ಕ, ಯು.ಕೊಟ್ರೇಶನಾಯ್ಕ, ಜಯನಾಯ್ಕ, ಶ್ರೀಧರನಾಯ್ಕ, ಡಿ.ಚಂದ್ರಶೇಖರನಾಯ್ಕ, ಶ್ರೀನಿವಾಸ ಭೋವಿ, ಮಹಾಬಲೇಶ್ವರ, ಮಾರಪ್ಪ, ಸುರೇಶ ದಾಸರಹಳ್ಳಿ ತಾಂಡ, ಎಲ್.ಕೆ.ವಿಜಯಕುಮಾರ್, ಜವಾಹರಲಾಲ್, ಸೇವ್ಯಾನಾಯ್ಕ, ಶೇಖರನಾಯ್ಕ, ನೀಲನಾಯ್ಕ, ಮೀರಾಬಾಯಿ, ಲಕ್ಷ್ಮಿಬಾಯಿ, ನೀಲಾಬಾಯಿ ಇತರರು ಇದ್ದರು.