
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.12: ರಾಜ್ಯ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿಗೆ ಒಳಮೀಸಲಾತಿ ಕಲ್ಪಿಸುವ ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸ್ಸುಮಾಡಿರುವುದು ಸಂವಿಧಾನ ವಿರೋಧಿಯಾಗಿದ್ದು, ಇದರ ವಿರುದ್ಧ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅನಂತ್‍ನಾಯ್ಕ ಹೇಳಿದ್ದಾರೆ.
ಅವರು ನಿನ್ನೆ ನಗರದ ಬಳ್ಳಾರಿ ಪತ್ರಕರ್ತರ ಒಕ್ಕೂಟದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಪರಿಶಿಷ್ಟ ಜಾತಿಗೆಒಳಮೀಸಲಾತಿ ಕಲ್ಪಿಸುವ ನ್ಯಾ. ಎ.ಜೆ.ಸದಾಶಿವಆಯೋಗದ ವರದಿಯನ್ನು ಜಾರಿಗೆ ತರಬಾರದು ಎಂದು ಕಳೆದ ಜ.10 ರಂದು ಬೆಂಗಳೂರಿನಲ್ಲಿ ಬೃಹತ್‍ಸಮಾವೇಶ, ಹೋರಾಟ ಹಮ್ಮಿಕೊಳ್ಳಲಾಗಿತ್ತು.
ಬಳಿಕ ಒಕ್ಕೂಟದ ನಿಯೋಗವೊಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ವರದಿಯಲ್ಲಿನ ಲೋಪಗಳ ಬಗ್ಗೆ ತಿಳಿಸಿ ಮನವರಿಕೆ ಮಾಡಿಕೊಡಲಾಗಿತ್ತು. ಆಗ ಪ್ರತಿಕ್ರಿಯಿಸಿದ ಬೊಮ್ಮಾಯಿ ಅವರು, ಯಾವುದೇ ಸಮುದಾಯಕ್ಕೆ ಅನ್ಯಾಯವಾಗಲ್ಲ ಎಂದು ಭರವಸೆ ನೀಡಿದ್ದರು. ಜೊತೆಗೆ ಕಾನೂನು ಸಚಿವ ಮಾಧುಸ್ವಾಮಿ ಅವರಿಗೂ ಈ ಕುರಿತು ಮನವರಿಕೆ ಮಾಡಿಕೊಂಡುವಂತೆ ನೀಡಿದ ಸಲಹೆ ಮೇರೆಗೆ ಅವರನ್ನೂ ಭೇಟಿಯಾಗಿತ್ತು.ಆದರೆ, ಅವರಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬರಲಿಲ್ಲ.
ಚುನಾವಣೆ ಸಮೀಪಿಸಿದ ಹಿನ್ನೆಲೆಯಲ್ಲಿ ಕೊನೆಯ ಸಚಿವ ಸಂಪುಟದಲ್ಲಿ ಉಪಸಮಿತಿ ನೀಡಿದ್ದ ವರದಿಯನ್ನು ಆಧರಿಸಿ,ಒಳ ಮೀಸಲಾತಿ ವರ್ಗೀಕರಣಗೊಳಿಸಲಾಗಿದೆ.
ಕಳೆದ 2004-05ರಲ್ಲಿ ನೆರೆಯ ಆಂಧ್ರಪ್ರದೇಶದಲ್ಲೂ ಮಾಲ-ಮಾದಿಗ ಸಮುದಾಯಗಳಿಗೆ ಒಳಮೀಸಲಾತಿ ನೀಡಲಾಗಿತ್ತು.ಆದರೆ, ಇದನ್ನು ಸುಪ್ರೀಂಕೋರ್ಟ್ ರದ್ದುಪಡಿಸಿ ಆದೇಶ ಹೊರಡಿಸಿದೆ. ಮೇಲಾಗಿ ಮೀಸಲಾತಿಯನ್ನು ವರ್ಗೀಕರಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇಲ್ಲ. ಇದು ಅಸಾಂವಿಧಾನಿಕ ಎಂದು ಆದೇಶದಲ್ಲಿ ತಿಳಿಸಿದೆ.
ದೇಶಕ್ಕೆ ಅನ್ವಯಿಸುವ ಈ ಆದೇಶವನ್ನು ಸಹ ರಾಜ್ಯ ಸರ್ಕಾರ ಈ ಆದೇಶವನ್ನು ಸಹ ಉಲ್ಲಂಘನೆ ಮಾಡಿದೆ. ಸಚಿವ ಸಂಪುಟದ ಉಪಸಮಿತಿ ನೇತೃತ್ವ ವಹಿಸಿದ್ದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು, ಅಪಮಾನ, ಅವಹೇಳನ ಮಾಡುವಂತಹ ಅಂಶಗಳನ್ನು ಸೇರಿಸಿ ವರದಿ ನೀಡಿದ್ದಾರೆ. ಲಂಬಾಣಿ,ಕೊರಚ, ಕೊರಮ, ಭೋವಿ ಸಮುದಾಯಗಳು ಸಾಮಾನ್ಯವಾಗಿ ಮುಂದುವರೆದ ಸಮುದಾಯಗಳು. ಸರ್ಕಾರದ ಎಲ್ಲ ಸೌಲಭ್ಯಗಳನ್ನು ಪಡೆದಿವೆ. ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಯಾವ ಯಾವ ಇಲಾಖೆಗಳಲ್ಲಿ ಎಷ್ಟು ಜನರು ಸರ್ಕಾರಿ ನೌಕರರಿದ್ದಾರೆ ಎಂಬ ಮಾಹಿತಿಯನ್ನು ಅವರು ನೀಡಬೇಕು. ಅದನ್ನು ತಿಳಿದುಕೊಳ್ಳಬೇಕೆಂಬ ಕುತೂಹಲ ನಮಗೂ ಇದೆ ಎಂದು ಹೇಳಿದರು.
ಸಂವಿಧಾನದಲ್ಲಿ ಅಸ್ಪೃಶ್ಯತೆ ಎಂಬ ಶಬ್ದವನ್ನು ರದ್ದು ಮಾಡಲಾಗಿದೆ. ಆದರೆ, ವರದಿಯಲ್ಲಿ ಅಸ್ಪೃಶ್ಯರು ಎಂದು ನಮೂದಿಸಲಾಗಿದ್ದು, ಕಾನೂನು ಸಚಿವ ಮಾಧುಸ್ವಾಮಿಯವರ ಮೇಲೆಯೇ ದೂರು ದಾಖಲಿಸಬೇಕಾಗಿದೆ. ಇದೊಂದು ಚುನಾವಣಾ ಗಿಮಿಕ್ ಆಗಿದ್ದು, ರಾಜ್ಯಾದ್ಯಂತ ಜನರಲ್ಲಿ ಜಾಗೃತಿ ಮೂಡಿಸಿ,ಹೋರಾಟ, ಚಳುವಳಿ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಒಕ್ಕೂಟದ ಅಧ್ಯಕ್ಷ ರವಿ ಮಾಕಳಿ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ರಾಜಾನಾಯ್ಕ್, ಆದರ್ಶಎಲ್ಲಪ್ಪ, ಶ್ರೀನಿವಾಸ್ ಮೂರ್ತಿ, ಪಾಲಿಕೆ ಸದಸ್ಯ ವಿ.ಕುಬೇರ, ರಾಮುನಾಯ್ಕ್, ಮಹೇಶ್, ವಿ.ರಾಮಾಂಜಿನೇಯಲು ಸೇರಿದಂತೆ ಹಲವರು ಇದ್ದರು.