ಒಳ ಮೀಸಲಾತಿ ಜಾರಿಯಿಂದ ಬಂಜಾರ ಸಮಾಜಕ್ಕೆ ಅನ್ಯಾಯ : ಗೋರಸೇನಾ ಸಂಘಟನೆಯಿಂದ ಪ್ರತಿಭಟನೆ

(ಸಂಜೆವಾಣಿ ವಾರ್ತೆ)
ಔರಾದ :ಮಾ.28: ಪರಿಶಿಷ್ಟ ಸಮುದಾಯಗಳಲ್ಲಿ ಒಳ ಮೀಸಲಾತಿ ನೀಡಿಕೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಸರ್ಕಾರದ ನಿರ್ಧಾರ ವಿರೋಧಿಸಿ ಕರ್ನಾಟಕ ಗೋರಸೇನಾ ಸಂಘಟನೆಯ ರಾಜ್ಯಾಧ್ಯಕ್ಷ ಬಾಳುಸಾಹೇಬ ರಾಠೋಡ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಗೋರ್ ಸೇನಾ ಸಂಘಟನೆ ಕಾರ್ಯಕರ್ತರು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು, ಈ ಸಂದರ್ಭದಲ್ಲಿ ಗೋರಸೇನಾ ಸಂಘಟನೆಯ ರಾಜ್ಯಾಧ್ಯಕ್ಷ ಬಾಳುಸಾಹೇಬ ರಾಠೋಡ ಅವರು ಮಾತನಾಡಿ ರಾಜ್ಯ ಸರ್ಕಾರ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವ ನಿರ್ಧಾರ ಕೈಗೊಂಡು ಬಂಜಾರ, ಭೋವಿ, ಕೋರಚಾ, ಕೋರಮ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದೆ, ಪರಿಶಿಷ್ಟ ಜಾತಿಗಳಲ್ಲಿ ಒಂದಾಗಿರುವ ಬಂಜಾರ ಜನಾಂಗ ದವರು ರಾಜ್ಯದಲ್ಲಿ ಅನಾದಿ ಕಾಲದಿಂದಲೂ ಕಾಡು-ಮೇಡುಗಳಲ್ಲಿ ವಾಸವಾಗಿ ಕಡುಬಡತನ ದಿಂದ ಜೀವನ ಸಾಗಿಸುತ್ತಿದ್ದಾರೆ. ಕಾಡು ಉತ್ಪನ್ನ್ನ ಮಾರಾಟ ಮಾಡಿ ಬದುಕುತ್ತಿದ್ದಾರೆ. ಆಯೋಗದ ವರದಿಯು ಈ ಜನಾಂಗದ ಅಳಿವಿಗೆ ತಯಾರಿ ನಡೆಸಿದೆ. ಅವೈಜ್ಞಾನಿಕವಾಗಿರುವ ಈ ವರದಿ ಜಾರಿಗೆ ತರಲು ಹೊರಟಿರುವುದು ಖಂಡನಾರ್ಹ.
ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸರ್ಕಾರ ಇಂದು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ. ನಮ್ಮದೇ ಸಮಾಜದ ಶಾಸಕ ಪ್ರಭು ಚವ್ಹಾಣ ಅವರು ಇದರ ಬಗ್ಗೆ ಚಕಾರ ಎತ್ತಲಿಲ್ಲ ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು, ಇವತ್ತು ನಮ್ಮ ಸಮಾಜದ ಶಾಸಕರು ಸಮಾಜ ಒಡೆದು ಆಳುವ ನೀತಿ ಜಾರಿಗೆ ತರಲು ಯತ್ನಿಸುವ ಕೆಲಸ ಮಾಡುತ್ತಿದ್ದಾರೆ. ಎಲ್ಲ ಸಮಾಜವನ್ನು ನಿರ್ನಾಮ ಮಾಡುವ ಹುನ್ನಾರ ಮಾಡುತ್ತಿರುವುದು ವಿಷಾದನೀಯ, ಒಳ ಮೀಸಲಾತಿ ಜಾರಿ ಖಂಡನೆ ಕೂಡಲೆ ಹಿಂಪಡೆಯಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಸಮಾಜ ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದೆ ಎಂದರು. ಈ ಸಂದರ್ಭದಲ್ಲಿ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಶಿಫಾರಸು ಹಿಂಪಡೆಯುವಂತೆ ತಹಶೀಲ್ದಾರ್ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಂಜಾರ ಸಮಾಜ ಮುಖಂಡ ಚರಣಸಿಂಗ ರಾಠೋಡ, ದಿನೇಶ್ ರಾಠೋಡ, ಉತ್ತಮ ಜಾಧವ, ರಾಜಕುಮಾರ ದೇಗಾವತ, ಗಣಪತಿ ರಾಠೋಡ, ಕಾಶಿನಾಥ ರಾಠೋಡ, ಮಾರುತಿ ಪವಾರ, ಅನಿಲ ರಾಠೋಡ ಸೇರಿದಂತೆ ಸಮಾಜ ಬಾಂಧವರು ಪಾಲ್ಗೊಂಡಿದ್ದರು.

ಒಳ ಮೀಸಲಾತಿ ವಿರೋಧಿಸಿ ಬಿಜೆಪಿಯಲ್ಲಿರುವ ಲಂಬಾಣಿ, ಸಮಾಜದ ಸಚಿವರು ಹಾಗೂ ಶಾಸಕರು ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಅವರಿಗೆ ಅಧಿಕಾರ ಶಾಶ್ವತ ಎಂದೆನಿಸಿದರೆ ಸಮಾಜ ಮುಂದಿನ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದೆ.

ಬಾಳುಸಾಹೇಬ ರಾಠೋಡ,
ರಾಜ್ಯಾಧ್ಯಕ್ಷರು, ಗೋರ ಸೇನಾ ಸಂಘಟನೆ