ಒಳ ಮೀಸಲಾತಿ ಅನುಷ್ಠಾನ ಒಂದು ಅಳಿಲು ಸೇವೆ: ಸಿಎಂ

ಹುಬ್ಬಳ್ಳಿ, ಏ7: ಯಾವುದೇ ಅಧಿಕಾರ ಶಾಶ್ವತವಲ್ಲ. ನಿಮ್ಮ ಹೃದಯದಲ್ಲಿ ಒಂದು ಸ್ಥಾನವನ್ನು ಪಡೆದುಕೊಂಡಿದ್ದೇನೆ. ಅದೇ ನನಗೆ ಶಾಶ್ವತ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ನಗರದ ನೆಹರೂ ಮೈದಾನದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಪರಿಶಿಷ್ಟ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸಿ ಮತ್ತು ಒಳ ಮೀಸಲಾತಿ ನೀಡಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ಕೋಟಿಗಟ್ಟಲೇ ಬಂಧುಗಳಿದ್ದು, ಈ ನಿಟ್ಟಿನಲ್ಲಿ ಒಳಮೀಸಲಾತಿ ಅನುಷ್ಠಾನ ಮಾಡಿರುವುದ ನಾನು ನಿಮಗೆ ಮಾಡಿರುವ ಒಂದು ಅಳಿಲು ಸೇವೆಯಾಗಿದೆ ಎಂದರು.
ಅಸಾಧ್ಯವನ್ನು ಸಾಧ್ಯ ಮಾಡಿ ತೋರಿಸಿಸಲಾಗಿದೆ. ಇದು ಸಾಮಾಜಿಕ, ಸಮಾನತೆ ಇರುವ, ಅಂಬೇಡ್ಕರ್, ಬಸವಣ್ಣ, ವಾಲ್ಮೀಕಿ ತತ್ವಾದರ್ಶಗಳನ್ನು ಇಟ್ಟುಕೊಂಡು ಮಾಡಿರುವ ಕಾನೂನು. , ದೇಶದಲ್ಲಿ ಇದು ಮಹತ್ತರ ಬದಲಾವಣೆಗೆ ನಾಂದಿಯಾಗಲಿದೆ. ದೇಶದ ಬದಲಾವಣೆ ಬೀಜ ಕರ್ನಾಟಕದಿಂದ ಬಿತ್ತನೆಯಾಗಲಿದೆ. ಬಂಜಾರ, ಭೋವಿ, ಕುಂಚಾ, ಕೊರಮ ಬಂಧುಗಳ ಮೀಸಲಾತಿಯನ್ನು ಸೂರ್ಯ, ಚಂದ್ರ ಇರುವವರೆಗೂ ತೆಗೆಯುವದಿಲ್ಲ ಎಂದರು.
ಕಾಂಗ್ರೆಸ್ ಪಕ್ಷ ವಂಚನೆ ಮಾಡುವ ಮೂಲಕ ಸಮಾಜವನ್ನು ಒಡೆದು ಆಳುವ ಕಾರ್ಯವನ್ನು ಮಾಡುತ್ತಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಿದ್ದಾಗ ಜಾತಿ ಒಡೆಯುವ ಕಾರ್ಯವನ್ನು ಮಾಡಿದ್ದಾರೆ. ಯಾರಿಗೂ ಯಾವುದೇ ಒಂದು ಅವಕಾಶಗಳನ್ನು ನೀಡದೇ ಒಡೆದು ಆಳುವ ನೀತಿಯನ್ನು ಅವರು ಅನುಸರಿಸುತ್ತಾರೆಂದು ಕಾಂಗ್ರೆಸ್ ವಿರುದ್ಧ ನೇರ ವಾಗ್ದಾಳಿ ನಡೆಸಿದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ 140 ಕ್ಕೂ ಹೆಚ್ಚು ಸ್ಥಾನದಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಯಾರಿಗೂ ಅನ್ಯಾಯವಾಗದಂತೆ ಮೀಸಲಾತಿ ಮುಂದುವರೆಸುತ್ತೇವೆ. ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಅವರ ಮತ ಬ್ಯಾಂಕ್ ರಾಜಕಾರಣ ಜನರಿಗೆ ಅರ್ಥವಾಗುತ್ತದೆ ಎಂದರು.ಸ್ಪೀಕರ್ ರಮೇಶಕುಮಾರ್ ಅವರ ಬಹಿರಂಗ ಹೇಳಿಕೆ ಕುರಿತು ಮಾತನಾಡಿದ ಅವರು ಐವತ್ತು ವರ್ಷದಲ್ಲಿ ಜನರನ್ನು ಲೂಟಿ ಮಾಡಿದ್ದೀರಿ. ಕಾಂಗ್ರೆಸಿಗರೇ ಲೂಟಿ ಮಾಡಿ ಯಾವ ಮುಖ ಇಟ್ಟುಕೊಂಡು ನೀವು ಮತ ಕೇಳುತ್ತಿರಿ ಎಂದು ಸಿಡಿಮಿಡಿಗೊಂಡರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ದೇಶದಲ್ಲಿ ದಲಿತರಿಗೆ, ದಲಿತ ಮುಖಂಡರಿಗೆ ಅನ್ಯಾಯ ಮಾಡುತ್ತಾ ಬಂದಿರುವ ಪಕ್ಷ ಕಾಂಗ್ರೆಸ್ ಎಂದು ದೂರಿದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾತನಾಡಿ, ನಾವು ಅಧಿಕಾರಕ್ಕೆ ಬರುವ ಮುನ್ನವೇ ಮೀಸಲಾತಿ ಬಗ್ಗೆ ಭರವಸೆ ನೀಡಿದ್ದೇವೆ. ಅದೇ ರೀತಿಯಲ್ಲಿ ನಾವು ಶೋಷಿತ ವರ್ಗದವರಿಗೆ ಸಮಾನತೆ ನೀಡುವ ಕಾರ್ಯವನ್ನು ಮಾಡುತ್ತಿದ್ದೇವೆ ಎಂದರು. ಅವರು ಒಳಮೀಸಲಾತಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ ಎಂದರು.
ಮೀಸಲಾತಿಯ ಜೇನುಗೂಡಿಗೆ ಸಿಎಂ ಬೊಮ್ಮಾಯಿಯವರ ಸರ್ಕಾರ ಕೈ ಹಾಕಿ ಎಲ್ಲರಿಗೂ ಸಿಹಿ ಹಂಚುವ ಕಾರ್ಯವನ್ನು ಮಾಡಿದ್ದಾರೆ. ಒಳ ಮೀಸಲಾತಿ, ಮೀಸಲಾತಿ ಹೆಚ್ಚಳವನ್ನು ವ್ಯವಸ್ಥಿತವಾಗಿ ಮಾಡುವ ಮೂಲಕ ನಾವೆಲ್ಲರೂ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕೈ ಜೋಡಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ನಾರಾಯಣಸ್ವಾಮಿ, ಸಚಿವ ಗೋವಿಂದ್ ಕಾರಜೋಳ, ಕೋಟಾ ಶ್ರೀನಿವಾಸ, ಶಾಸಕರಾದ ಗೋವಿಂದ್ ಕಾರಜೋಳ, ಸಿಎಂ ನಿಂಬಣ್ಣವರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.