ಒಳ ಚರಂಡಿ ವ್ಯವಸ್ಥೆಗೆ ಮಾಡಿಸುವಂತೆ ಸಿರಿಗೇರಿ 3ನೇವಾರ್ಡು ನಿವಾಸಿಗಳ ಆಗ್ರಹ


ಸಂಜೆವಾಣಿ ವಾರ್ತೆ
ಸಿರಿಗೇರಿ ಏ.13. ಗ್ರಾಮದ 3ನೇ ವಾರ್ಡಿನಲ್ಲಿ ಸುಮಾರು 10 ವರ್ಷಗಳಿಂದ ಚರಂಡಿ ಸಮಸ್ಯೆಯಿಂದ ನರಳುತ್ತಿದ್ದೇವೆ. ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲವೆಂದು, ತಮ್ಮ ವಾರ್ಡಿನಲ್ಲಿ ಒಳ ಚರಂಡಿ ವ್ಯವಸ್ಥೆ ಮಾಡಿಸುವವರೆಗೆ ಚುನಾವಣೆ ಭಹಿಷ್ಕರಿಸುವುದಾಗಿ ಗ್ರಾಮದ 3ನೇ ವಾರ್ಡಿನ ನೂರಾರು ಕುಟುಂಬಗಳ ಮಹಿಳೆಯರು, ಪುರುಷರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿರಿಗೇರಿಯ ಶ್ರೀ ಮಾರೆಮ್ಮದೇವಿ ದೇವಸ್ಥಾನದಿಂದ ಮೊದಲ್ಗೊಂಡು, 4ನೇವಾರ್ಡಿನ ಪೋಲಿಸ್ ಕ್ವಾಟ್ರಸ್ ವರೆಗೆ ಸುಮಾರು ಅರ್ಧ ಕಿಲೋಮೀಟರ್ ಉದ್ದಕ್ಕೂ ಇರುವ ನೂರಾರು ಮನೆಗಳ ನಿವಾಸಿಗಳಿಗೆ, ಅಕ್ಕಪಕ್ಕದ ಓಣಿಗಳ ನಿವಾಸಿಗಳಿಗೆ ನಿತ್ಯವೂ ಚರಂಡಿಯ ಹೊಲಸು ನೀರಿನಲ್ಲಿಯೇ ಸಾಗಿ ನಿತ್ಯದ ಕೆಲಸಗಳನ್ನು ಮಾಡಿಕೊಳ್ಳಬೇಕು. ಗ್ರಾಮದ ಊರುಕೆರೆಯಿಂದ, 1, 2ನೇ ವಾರ್ಡುಗಳಿಂದ, ಅಗಸೆಯ ಒಳಗಿನ 5, 6ನೇ ವಾರ್ಡುಗಳಿಂದ ತೆರೆದ ಚರಂಡಿಗಳಿಂದ ಈ 3ನೇವಾರ್ಡಿನ ರಸ್ತೆಯಲ್ಲಿ ಚಿಕ್ಕ ಕಾಲುವೆ ಗಾತ್ರದ ನೀರು ಹರಿಯುತ್ತಿದೆ. ಸೊಳ್ಳೆಗಳ ಕಾಟದಿಂದ ನಾನಾ ಸಾಂಕ್ರಾಮಿಕ ರೋಗಗಳು ಬಾದಿಸುತ್ತಿವೆ. ಮದುವೆ, ಧಾರ್ಮಿಕ ಕಾರ್ಯಗಳನ್ನು ಈ ಚರಂಡಿಯಲ್ಲಿಯೇ ಸಾಗಿ ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಈ ಸಮಸ್ಯೆಯ ಕುರಿತು 10ವರ್ಷಗಳಿಂದಲೂ ನಾನಾ ಅಧಿಕಾರಿಗಳಲ್ಲಿ, ಪ್ರಜಾಪ್ರತಿನಿಧಿಗಳಲ್ಲಿ, ಗ್ರಾಮಾಡಳಿತಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದರೂ ಕಿಂಚತ್ತೂ ಪ್ರಯೋಜನವಾಗಿಲ್ಲ. ಕ್ರಿಯಾ ಯೋಜನೆ ಅನುದಾನವನ್ನು ಮಂಜೂರು ಮಾಡದೇ ಅಧಿಕಾರಿ ವರ್ಗದವರು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ಕಾರಣ ಇದನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಸಮಸ್ಯೆ ಪರಿಹರಿಸದೇ ಇದ್ದಲ್ಲಿ 2023 ರ ವಿಧಾನಸಭಾ ಚುನಾವಣೆಯಲ್ಲಿ, ಮುಂಬರುವ ಯಾವುದೇ ಸಾರ್ವತ್ರಿಕ ಚುನಾವಣೆಗಳಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ಗ್ರಾಮದ 3ನೇ ವಾರ್ಡಿನ ನಿವಾಸಿಗಳು ಜಿಲ್ಲಾಧಿಕಾರಿಗಳು, ತಹಶೀಲ್ದಾರರು, ಗ್ರಾಮಾಡಳಿತಕ್ಕೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ.

One attachment • Scanned by Gmail