
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.19: ನಾನು ಗ್ರಾಮೀಣಕ್ಕೆ ಬಂದಿದ್ದರಿಂದ, ಅವರು ಮೊಳಕಾಲ್ಮುರಿಗೆ ಹೋದರು. ಈಗ ಅವರು ಬಳ್ಳಾರಿ ಗ್ರಾಮೀಣಕ್ಕೆ ಬಂದರೆ ನಾನು ದೂರ ಸರಿಯುವೆ ಎಂಬ ವದಂತಿ ಸರಿ ಅಲ್ಲ. ಅಂತಹ ಒಳ ಒಪ್ಪಂದ ಇಲ್ಲ. ಅವರು ಅಂದು ಯಾಕೆ ಮೋಳಕಾಲ್ಮುರಿಗೆ ಹೋದರೋ ಗೊತ್ತಿಲ್ಲ. ನಾನಂತೂ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದಲೇ ಈ ಬಾರಿ ಸ್ಪರ್ಧೆ ಮಾಡುವೆ ಎಂದು ಗ್ರಾಮೀಣ ಶಾಸಕ ಬಿ.ನಾಗೇಂದ್ರ ಹೇಳಿದ್ದಾರೆ
ಅವರು ಇಂದು ನಗರದಲ್ಲಿ ಬಳ್ಳಾರಿ ಪತ್ರಕರ್ತರ ಒಕ್ಕೂಟ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಸಮುದಾಯ ಇಬ್ಬರು ಒಂದು ಕಡೆ ಸ್ಪರ್ಧೆ ಮಾಡಬಾರದು ಎಂದು ಬಯಸಬಹುದು. ಆದರೆ ರಾಜಕೀಯವಾಗಿ ಅಣ್ಣ ತಮ್ಮಂದಿರೇ ಒಂದು ಕ್ಷೇತ್ರದಲ್ಲಿ ನಿಲ್ಲುವಾಗ ನಮ್ಮ ಸ್ಪರ್ಧೆಯಾಗುವುದರಲ್ಲಿ ಅನುಮಾನ ಬೇಡ ಎಂದರು.
2004 ರಿಂದಲೇ ರಾಜಕೀಯ ಪ್ರವೇಶಕ್ಕೆ ಸಿದ್ದನಾಗಿದ್ದೆ. ಆರಂಭದಲ್ಲಿ ಯೂತ್ ಕಾಂಗ್ರೆಸ್ ನಲ್ಲಿದ್ದೆ. ಆದರೆ ಹಲವು ಕಾರಣದಿಂದ ಬಿಜೆಪಿ ಸೇರಿದ್ದೆ. 2008 ರಲ್ಲಿ ಕ್ಷೇತ್ರ ವಿಂಗಡಣೆ ಆಯ್ತು. ಬಳ್ಳಾರಿ ಗ್ರಾಮೀಣದಿಂದ ಸ್ಪರ್ಧೆ ಮಾಡಲು ಬಯಸಿದ್ದೆ. ಆಗಲೂ ಶ್ರೀರಾಮುಲು ಈ ಕ್ಷೇತ್ರ ಬಯಸಿದ್ದರಿಂದ ಸ್ನೇಹಕ್ಕೆ ಬೆಲೆ ನೀಡಿ ಕೂಡ್ಲಿಗಿಗೆ ಹೋಗಿ ಶಾಸಕನಾಗಿ ಪ್ರಥಮವಾಗಿ ಆಯ್ಕೆಯಾದೆ. 2013 ರಲ್ಲಿ ಇದೇ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾದೆ. 2018 ರ ವೇಳೆಗೆ ರಾಹುಲ್ ಗಾಂಧಿ ಅವರ ಆಪೇಕ್ಷೆ ಮೇರೆಗೆ, ಸಿದ್ದರಾಮಯ್ಯ ಮತ್ತು ಡಿಕೆಶಿ ಅವರ ಮಾರ್ಗದರ್ಶನದಂತೆ ಕಾಂಗ್ರೆಸ್ ಸೇರಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಆಯ್ಕೆಯಾದೆ. ಸಮ್ಮಿಶ್ರ ಸರ್ಕಾರದಲ್ಲಿದ್ದ ನನ್ನನ್ನು ಬಿಜೆಪಿ ಆಹ್ವಾನಿಸಿತ್ತು. ಆದರೆ ಪಕ್ಷ ನಿಷ್ಟೆಯಿಂದ ಹೋಗಲಿಲ್ಲ.
ನನ್ನ ಕ್ಷೇತ್ರದಲ್ಲಿ ಬಳ್ಳಾರಿ ಮಹಾ ನಗರ ಪಾಲಿಕೆಯ 11 ವಾರ್ಡುಗಳು ಬರುತ್ತಿವೆ. ಅವುಗಳಲ್ಲಿ 10 ರಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ಗಳನ್ನು ಗೆಲ್ಲಿಸಿದೆ.
ಇದರಿಂದಾಗಿ ನಮ್ಮ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯದಲ್ಲಿನ ಆಡಳಿತಾರೂಢ ಬಿಜೆಪಿ ಅಡ್ಡಿ ಮಾಡಿ ಸಾಕಷ್ಟು ಅನುದಾನ ನೀಡಲಿಲ್ಲ ಆದರೂ ನನ್ನದೇ ಪ್ರಯತ್ನ ದಿಂದ ಕಳೆದ ಐದು ವರ್ಷಗಳಲ್ಲಿ ಆರಂಭದ 14 ತಿಂಗಳಲ್ಲಿ ನಮ್ಮ ಸಮ್ಮಿಶ್ರ ಸರ್ಕಾರದಿಂದ ಸಾಕಷ್ಟು ಅನುದಾನ ತಂದಿತ್ತು. ಒಟ್ಟಾರೆ ವಿವಿಧ ಬಾಬತ್ತುಗಳಿಂದ 11 ಸಾವಿರ 10 ಕೋಟಿ ರೂ ವೆಚ್ಚದ ಕಾಮಗಾರಿ ಕೈಗೊಂಡಿದೆ. ಎಂದು ದಾಖಲೆಗಳನ್ನು ನೀಡಿದರು.
ಕುಮಾರಸ್ವಾಮಿ ಅವರು ಮುಖ್ಯ ಮಂತ್ರಿಗಳಾಗಿದ್ದಾಗ 72 ಕೋಟಿ ರೂ ವೆಚ್ಚದ ಕುಡಿಯುವ ನೀರು ಕಾಮಗಾರಿಗೆ ಮಂಜುರಾತಿ ನೀಡಿದರು. ಆದರೆ ನಂತರ ಬಂದ ಬಿಜೆಪಿ ಸರ್ಕಾರ ಹಣ ಮಂಜೂರು ಮಾಡಲಿಲ್ಲ ಎಂದರು.
ಅಧಿಕಾರದ ಬಳಕೆ ಹೇಗೆ ಆಗುತ್ತದೆಂಬುದಕ್ಕೆ ಒಂದು ಉದಾಹರಣೆ ಎಂದರೆ ಅಂದಾಜು ಐದು ಕೋಟಿ ರೂ ವೆಚ್ಚದಲ್ಲಿ ಸ್ವಾತಂತ್ರ ಸರ್ಕಲ್ ನ್ನು ಕೌಲ್ ಬಜಾರ್ ಮೊದಲ ಗೇಟ್ ಬಳಿ ಮಾಡಲು ಡಿಪಿಆರ್ ಸಿದ್ದ ಪಡಿಸಿ ನೀಡಿತ್ತು. ಈವರಗೆ ಹಣ ಬಿಡುಗಡೆ ಮಾಡಲಿಲ್ಲ.
ಆದರೆ ಈವರಗೆ ಪ್ರಸ್ತಾವನೆಯೇ ಇಲ್ಲದೇ ಇದ್ದ ಗಡಗಿ ಚೆನ್ನಪ್ಪ ವೃತ್ತದಲ್ಲಿ ಗೋಪುರ ನಿರ್ಮಾಣ ಮಾಡುತ್ತಿದ್ದಾರೆಂದರು.
ಆನಂದ್ ಸಿಂಗ್ ಅವರು ಅನುದಾನ ಬಿಡುಗಡೆಗೆ ಪ್ರಯತ್ನಿಸಿದರು. ಆದರೆ ಕೋವಿಡ್ ನಿಂದ ಆಗಲಿಲ್ಲ.
ಶ್ರೀರಾಮುಲು ಅವರು ಜಿಲ್ಲಾ ಉಸ್ತುವಾರಿ ಸಚಿವರಾದ ಮೇಲೆ ಹೆಚ್ಚಿನ ಅಸಹಾಕಾರ ಶುರುವಾಯ್ತು. ನಾನು ಸಣ್ಣ ಪುಟ್ಟ ಕಾಮಗಾರಿಗೂ ಸಹಕಾರ ಮಾಡಿದೆ. ಆದರೆ ಅವರು ಸಹಕಾರ ಮಾಡಲಿಲ್ಲ ಎಂದರು.
ರಾಮುಲು ಅವರು ಜಿಲ್ಲಾ ಉಸ್ತುವಾರಿ ಸಚಿವರಾದ ಮೇಲೆ ಪ್ರತಿಷ್ಟೆಯಾಗಿ ತೆಗೆದುಕೊಂಡು ನನ್ನ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡಲಿಲ್ಲವೇನೋ ಎಂದರು.
ಈಗಲೂ ಶ್ರೀರಾಮುಲು ಅವರು ಆತ್ಮೀಯರೇ, ಆದರೆ ಪಕ್ಷ ಬೇರೆ ಆಗಿರುವುದರಿಂದ ನಮ್ಮ ಚುನಾವಣಾ ಹೋರಾಟ ಇದೆ.
55 ಸಾವಿರ ಮುಸ್ಲೀಂ 15 ಸಾವಿರ ಕ್ರಿಶ್ಚಿಯನ್:
ನಾವು ಅಧಿಕಾರಕ್ಕೆ ಬಂದರೆ ಮದರಸಾ ಬಂದು ಮಾಡುವೆ ಎನ್ನುವ ಬಿಜೆಪಿಯವರಿಗೆ ಕ್ಷೇತ್ರದಲ್ಲಿರುವ 55 ಸಾವಿರ ಮುಸ್ಲೀಂರು, 15 ಸಾವಿರ ಕ್ರಿಸ್ಚಿಯನ್ ಮಾತದಾರರು ಯಾವ ಮುಖ ಇಟ್ಟುಕೊಂಡು ಬಿಜೆಪಿಗೆ ಮತ ಹಾಕಯತ್ತಾರೆಂದು ಬಯಸುತ್ತಾರೆ. ಬಳ್ಳಾರಿಯಲ್ಲಿ ಕೋಮು ಸೌಹಾರ್ಧತೆಗೆ ಧಕ್ಕೆ ಬರದಂತೆ ಮತದಾರ ನಿರ್ಧಾರಮಾಡುತ್ತಾರೆ.
ಕೆಆರ್ ಪಿಪಿ ಅಭ್ಯರ್ಥಿ ಹಾಕದಿರಬಹುದು:
ನನ್ನ ರಾಜಕೀಯ ಗುರು ಮಾಜಿ ಸಚಿವ ಜನಾರ್ಧನರೆಡ್ಡಿ ಅವರದ್ದು. ನನ್ನ ರಾಜಕೀಯ ಬೆಳವಣಿಗೆಯಲ್ಲಿ ಅವರ ಪಾತ್ರ ಮಹತ್ವದ್ದಿದೆ. ಅವರ ಸ್ನೇಹ ಎಂದೂ ಬಯಸುವೆ. ಶ್ರೀರಾಮುಲು ಅವರನ್ನು ಸೋಲಿಸಬೇಕು ಎಂದು ಬಯಸಿದ್ದರೆ. ನನ್ನ ವಿರುದ್ದ ಅಭ್ಯರ್ಥಿಯನ್ನು ಹಾಕದೇ ಇರಬಹುದು.
ಹೈ ಕಮಾಂಡ್ ಹೇಳಿದವರು:
ಪಾಲಿಕೆಯ ಮೇಯರ್ ಚುನಾವಣೆ ಮುಂದೂಡಿದೆ. ನಡೆಸಲು ನಮ್ಮ ಅಭ್ಯಂತರ ಇಲ್ಲ. ಆರು ಜನ ಮೇಯರ್ ಆಗಲು ಅರ್ಹರು ಇದ್ದಾರೆ. ಅವರಲ್ಲಿ ಹೈ ಕಮಾಂಡ್ ಸೂಚಿಸಿದವರು ಮೇಯರ್ ಆಗುತ್ತಾರೆ.
ಮೀಸಲಾತಿ ಬರೀ ಸುಳ್ಳು:
ನಮ್ಮ ವಾಲ್ಮೀಕಿ ಸಮುದಾಯ ಬಿಜೆಪಿಗೆ ಸರಿಯಾದ ತಕ್ಕ ಪಾಠ ಕಲಿಸಲು, ಸ್ಬಾಮಿಗಳು, ಹಿರಿಯರು ತೀರ್ಮಾನಿಸಿದ್ದಾರೆ.
ಪರಿಶಿಷ್ಟ ವರ್ಗಕ್ಕೆ ಮೀಸಲಾತಿ ಹೆಚ್ಚಿಸಿದೆ ಎಂದು ಅರ್ಧ ಸತ್ಯ ಹೇಳಿದ್ದಾರೆ. ಈ ಬಗ್ಗೆ ಆದೇಶ ಆಗಿದೆ. ಅನುಷ್ಟಾನಕ್ಕೆ ಬಂದಿಲ್ಲ. ಈ ಬಗ್ಗೆ ಮತದಾರರಿಗೆ ತಿಳಿಸಲಿದೆಂದರು.
ಸಚಿವನಾಗುವುದು ಖಚಿತ:
ಗ್ರಾಮೀಣ ಕ್ಷೇತ್ರದಿಂದ ನನ್ನ ಗೆಲುವು ಖಚಿತ ಅದೇರೀತಿ, ರಾಜ್ಯದಲ್ಲೂ ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತೆ. ನಾನು ಸಚಿವನಾಗುತ್ತೇನೆ ಎಂದು ಹೇಳಲು ಬಯಸುವೆ ಎಂದರು.
ಮೀಸಲು ಕ್ಷೇತ್ರದಲ್ಲಿ ನನ್ನ ಗೆಲುವಿನ ಬಗ್ಗೆ ವಿಶ್ವಾಸ ಇರುವುದಕ್ಕೆ ಕಾರಣ ಕ್ಷೇತ್ರದಲ್ಲಿ ಜಾತಿ ಜಾತಿ ಮಧ್ಯೆ ಜಗಳ ಇಲ್ಲ, ಕೋಮುಗಲಭೆ ಇಲ್ಲ, ಮತೀಯ ಜಗಳ ಇಲ್ಲ. ನನ್ನ ಸರಳ ನಡೆ ನುಡಿಯಿಂದ ಶಾಂತಿ ಕಾಪಾಡಿಕೊಂಡು ಬಂದಿರುವುದೆಂದರು.
ತೃಪ್ತಿ-ಅತೃಪ್ತಿ:
ನನ್ನ ಕಳೆದ ಐದು ವರ್ಷದ ಅವಧಿಯಲ್ಲಿ ಎಲ್ ಎಲ್ ಸಿ ಕಾಲುವೆಯ ಅಕ್ವಡೆಕ್ಟ್ ದುರಸ್ಥಿ ಕಾರ್ಯ
ಚೇಳ್ಳಗುರ್ಕಿ ಗ್ರಾಮದ ಬಳಿಯ ರಸ್ತೆಯನ್ನು ಚತುಷ್ಪತವನ್ನಾಗಿ ಸರಿಪಡಿಸಿದ್ದು. ಕೋವಿಡ್ ಸಂಕಷ್ಟ ಕಾಲದಲ್ಲಿ ಕ್ಷೇತ್ರದ ಪ್ರತಿಕುಟುಂಬಕ್ಕೆ ಆಹಾರ ಕಿಟ್ ವಿತರಿಸಿದ್ದು ಸೇರಿದಂತೆ ಅನೇಕ ಕಾಮಗಾರಿಗಳು ತೃಪ್ತಿ ತಂದಿರುವ ಕೆಲಸ ಆಗಿದೆ. ಆದರೆ ಸೂಪರ್ ಸ್ಪೆಷಲ್ ಆಸ್ಪತ್ರೆಯ ಬಾಕಿ ಕಾಮಗಾರಿ ಮುಗಿಸದೇ ಇದ್ದುದು ಅಸಂತೃಪ್ತಿ ಇದೆ.
ಕ್ಷೇತ್ರಕ್ಕೆ
200 ಕೋಟಿ ರೂ ವೆಚ್ಚ ಮಾಡಿದರೂ ಶ್ರೀರಾಮುಲು ಗೆಲುವು ಅಸಾಧ್ಯ, ಅವರು ಸೇರು ಎಂದರೆ ಸವಾ ಸೇರು ಎನ್ನಲು ತಯಾರಿದ್ದೇವೆ. ಅದು ಹಣದ ರೂಪದಲ್ಲಿ ಅಲ್ಲ ಕೆಲಸದಿಂದ ಎಂದರು. ಬಿಜೆಪಿ ಅಧಿಕಾರಕ್ಕೆ ಬಂದರೆ ಕೋಮು ಗಲಭೆಯ ಭಯ ಬೀತಿ ಇದೆ ಅದಕ್ಕಾಗಿ ಜನ ಬಿಜೆಪಿಯನ್ನು ಬೆಂಬಲಿಸಲ್ಲ ಎಂದರು.