ಒಳ್ಳೆಯ ಕೆಲಸವಾಗಲು ಎಲ್ಲರೂ ಕೈಜೋಡಿಸಬೇಕು:ಸಚಿವ ದರ್ಶನಾಪೂರ

ಕಲಬುರಗಿ:ಜೂ.18: ತಾವು ಸಚಿವರಾಗಲು ಚುನಾವಣೆಯಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ನನಗೆ ಪ್ರೋತ್ಸಾಹಿಸಿದ್ದೀರಿ. ಯಾವುದೇ ಒಂದು ಒಳ್ಳೆಯ ಕೆಲಸ ಆಗಬೇಕಾದರೆ ಎಲ್ಲರೂ ಕೈಜೋಡಿಸಿದಾಗ ಮಾತ್ರ ಸಾಧ್ಯ. ತಾವೆಲ್ಲರೂ ಸಮಾಜದ ಅಭಿಮಾನಿಗಳು ತನು, ಮನ, ಧನದಿಂದ ತಮ್ಮ ಶಕ್ತಿಗೆ ಅನುಸಾರವಾಗಿ ಸ್ವಯಂ ಪ್ರೇರಿತರಾಗಿ ಕಾರ್ಯ ಪ್ರವೃತ್ತರಾಗಿ ನಾನು ಈ ಸ್ಥಾನಕ್ಕೆ ಬರಲು ಕಾರಣರಾಗಿದ್ದೀರಿ. ಮಹಾಸಾದ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ತಾಯಿ ಅವರ ಹಾಗೂ ಹಿರಿಯರ ಆಶಿರ್ವಾದ ನನ್ನ ಮೇಲೆ ಇದೆ. ಸಮಾಜದಲ್ಲಿನ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸಾಧ್ಯವಾದಷ್ಟು ಸಹಾಯ ಮಾಡಬೇಕಾಗಿದೆ. ಸಮಾಜದ ಆಗು ಹೋಗುಗಳ ಬಗ್ಗೆ ಚಿಂತನೆ ನಡೆಸಿ ಸಮಾಜದ ಒಳಿತಿಗಾಗಿ ಎಲ್ಲರೂ ಒಟ್ಟಾಗಿ ಕೈಜೋಡಿಸಿ ಕೆಲಸ ಮಾಡೋಣ ಎಂದು ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ನುಡಿದರು.
:ನಗರದ ರಡ್ಡಿ ಸಮಾಜ ಕಲಬುರಗಿ ಹಾಗೂ ಮಹಾಸಾದ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಪತ್ತಿನ ಸಹಕಾರ ಸಂಘ (ರಿ) ಇವರ ಸಂಯುಕ್ತಾಶ್ರಯದಲ್ಲಿ ಮಹಾಸಾದ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ನವರ ಜಯಂತಿ ಹಾಗೂ ಸಚಿವರು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಹಾಗೂ ಯಾದಗಿರಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಶ್ರೀ ಶರಣಬಸಪ್ಪಗೌಡ ದರ್ಶನಾಪುರ ರವರಿಗೆ “ಅಭಿನಂದನಾ ಸಮಾರಂಭ” ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ಮಹಾಸಾದ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ನವರ ಭಾವಚಿತ್ರಕ್ಕೆ ಭಕ್ತಿಪೂರ್ವಕವಾಗಿ ಮಾಲಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ನಂತರ ಸನ್ಮಾನ ಸ್ವೀಕರಿಸಿ ಅಭಿನಂದನಾ ಸಮಾರಂಭದಲ್ಲಿ ವಿವಿಧ ಸಂಘ, ಸಂಸ್ಥೆಗಳಿಂದ ಅಭಿನಂದನೆಗಳನ್ನು ಸ್ವೀಕರಿಸಿ ಮಾತನಾಡುತ್ತ, ಕಲ್ಯಾಣ ಕರ್ನಾಟಕದ ಗ್ರಾಮೀಣ ಬಡ ಪ್ರತಿಭಾವಂತ ವಿದ್ಯಾರ್ಥಿನಿಯರಿಗಾಗಿ ವಿದ್ಯಾರ್ಥಿ ನಿಲಯ ನಿರ್ಮಿಸಿ ಅವರ ಶೈಕ್ಷಣಿಕ ಪ್ರಗತಿಗಾಗಿ ಎಲ್ಲರೂ ಶ್ರಮಿಸಬೇಕು. ಅದಕ್ಕಾಗಿ ರಡ್ಡಿ ಸಮಾಜದ ಸಹೋದರಿಯರು ಗುಲಬರ್ಗಾ ಮತ್ತು ಸೇಡಂನಲ್ಲಿ ವಿದ್ಯಾರ್ಥಿನಿಯರ ವಸತಿ ನಿಲಯಕ್ಕಾಗಿ ಸೈಟ್ ಖರೀದಿಸಿದ್ದಾರೆ. ಕೆಲವೇ ದಿನಗಳಲ್ಲಿ ಕಟ್ಟಡ ಕಾರ್ಯ ಆರಂಭ ಮಾಡಲು ಎಲ್ಲರೂ ಸಹಾಯ ಸಹಕಾರ ನೀಡಬೇಕು ಎಂದರು.
ನಗರದಲ್ಲಿ ವೀರಶೈವ ಸಮಾಜದ ಮಹಿಳಾ ವಸತಿ ನಿಲಯ ಆರಂಭ ಆಗಿದೆ. ಮುಂದಿನ ವರ್ಷ ಬಾಲಕ-ಬಾಲಕಿಯರ ವಸತಿ ನಿಲಯ ಆರಂಭವಾಗುವುದಕ್ಕೆ ಶ್ರಮಿಸುವದಾಗಿ ತಿಳಿಸಿದರು. ತಾವು ಸಮಾಜದ ಘನತೆ, ಗೌರವವನ್ನು ಎತ್ತಿ ಹಿಡಿದು ಜನರ ಅಭಿವೃದ್ದಿಗಾಗಿ ಹಗಲಿರುಳು ಶ್ರಮಿಸುವದಾಗಿ ತಿಳಿಸಿದರು. ತಮ್ಮನ್ನು ಅಭಿನಂದಿಸಿದಕ್ಕೆ ತಮ್ಮ ಗೌರವಕ್ಕೆ ನಾನು ಚಿರಋಣಿ ಎಂದರು.
ಕಾರ್ಯಕ್ರಮದಲ್ಲಿ ಪ್ರೊ. ಚನ್ನಾರಡ್ಡಿ ಪಾಟೀಲ ಜಿಲ್ಲಾಧ್ಯಕ್ಷರು ರಡ್ಡಿ ಸಮಾಜ ಕಲಬುರಗಿ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ, ಒಂದು ಕುಟುಂಬ ಸಂಸ್ಕøತಿಯ ಭದ್ರ-ಬುನಾದಿ ಹೇಗಿರಬೇಕೆಂದು ನಡೆದು ತೋರಿಸಿದ ಮಹಾಸಾದ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ತಾಯಿ ಅವರು ಬರೀ ರಡ್ಡಿ ಸಮಾಜ ಅಲ್ಲದೆ ವಿವಿಧ ಸಮಾಜಕ್ಕೆ ಮಾದರಿಯಾಗಿದ್ದಾರೆ. ತಾಯಿಯವರ ಹೆಸರಿನಲ್ಲಿ ವಿದ್ಯಾರ್ಥಿನಿಯರಿಗೆ ಉಚಿತ ಹಾಸ್ಟೆಲ್ ನಿರ್ಮಿಸಲು ಸಚಿವರಾದ ಶ್ರೀ ಶರಣಬಸಪ್ಪಗೌಡ ದರ್ಶನಾಪುರ ಅವರು ಶ್ರಮಿಸುತ್ತಿದ್ದಾರೆ ಹಾಗೂ ಎಲ್ಲಾ ಸಮಾಜದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ನಿರ್ಧರಿಸಿದ್ದಾರೆ ಎಂದರು.
ಮುಂದುವರೆದು ಮಾತನಾಡುತ್ತ, ಮಾನ್ಯ ಸಚಿವರು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಹಾಗೂ ಯಾದಗಿರಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಶ್ರೀ ಶರಣಬಸಪ್ಪಗೌಡ ದರ್ಶನಾಪುರ ಅವರು ಹೃದಯ ವೈಶಾಲ್ಯತೆಯುಳ್ಳ ಜನಮೆಚ್ಚಿದ ನಾಯಕ. ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತ ಪ್ರತಿ ಹಳ್ಳಿಯ ಜನರ ಸಂಪರ್ಕದಲ್ಲಿದ್ದು ಅವರಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸುತ್ತ, ಸರ್ವರಿಗೂ ಸಮಪಾಲು-ಸಮಬಾಳು ಎಂದರಿತು ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುತ್ತಿರುವ ಮೌಲ್ಯಾಧಾರಿತ ರಾಜಕೀಯ ಮುತ್ಸದಿಯಾಗಿದ್ದಾರೆ ಎಂದರು. ಇವರಲ್ಲಿನ ಮಾನವೀಯತೆ, ಬಡವರ ಬಗೆಗಿನ ಕಳಕಳಿ, ಪ್ರೀತಿ ಅನುಕಂಪ, ಕಾಳಜಿ ಅಪಾರವಾದುದು. ಅವರ ತಂದೆಯವರಾದ ಲಿಂ. ಬಾಪುಗೌಡ ದರ್ಶನಾಪುರ ಅವರ ನಂತರ ಕ್ಷೇತ್ರದ ಅಭಿವೃದ್ದಿಗೈದು ಉತ್ತಮ ಆಡಳಿತ ನೀಡುತ್ತ ಜನರ ಹಿತರಕ್ಷಣೆಗಾಗಿ ಶ್ರಮಿಸಿ ತಮ್ಮದೇ ಆದ ಗೌರವದ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಮಿತಭಾಷಿ ಆದ ಇವರು ಕಾಯಕವೇ ಕೈಲಾಸ ಎಂಬ ಶರಣರ ನುಡಿಯಂತೆ ದಿನನಿತ್ಯ ತಮ್ಮ ಕ್ಷೇತ್ರದ ಬಡ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತ ಜನನಾಯಕನಾಗಿ ಬೆಳದಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿನಿಯರಿಗೆ ವೀರಶೈವ ಲಿಂಗಾಯತ ವತಿಯಿಂದ ಹಾಸ್ಟಲ್ ಕಟ್ಟುವ ಮೂಲಕ ಕೆಲಸಕ್ಕೆ ಪ್ರೇರೇಪಿಸಿ ಸ್ವತಃ ದಾಸೋಹ ಗೈದು ಈ ಭಾಗದ ಜನರ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸಿದ್ದಾರೆ. ಅಖಿಲ ಕರ್ನಾಟಕ ಹೇಮರಡ್ಡಿ ಮಲ್ಲಮ್ಮ ಮಹಿಳಾ ಸಂಘದ ವತಿಯಿಂದ ಕೂಡ ನಿರ್ಮಾಣವಾಗುತ್ತಿರುವ ಹಾಸ್ಟಲ್‍ಗೆ ಬೇಕಾದ ಸಹಾಯ ಸಹಕಾರ ನೀಡಿದ್ದಾರೆ. ಅವರು ಶಾಸಕರಾಗಿ, ಸಚಿವರಾಗಿ ಸೇವೆ ಸಲ್ಲಿಸುತ್ತಿರುವದು ಅವರ ಪ್ರತಿಭೆಗೆ ಕಾರ್ಯ ಪ್ರವೃತ್ತಿಗೆ ಕೊಟ್ಟ ಗೌರವವಾಗಿದೆ. ಇಂತಹ ಮಹಾನ್ ವ್ಯಕ್ತಿಗೆ ಸನ್ಮಾನ ಮಾಡುವ ಮೂಲಕ ನಮ್ಮ ಸಮಾಜಕ್ಕೆ ನಮಗೆ ನಾವೇ ಸನ್ಮಾನ ಮಾಡಿಕೊಂಡಂತೆ ಎಂದು ಗೌರವಪೂರ್ವಕವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರಿ ಬಿ.ರಾಮರಡ್ಡಿ ನಿವೃತ್ತ ಪ್ರಾಚಾರ್ಯರು ಅವರು ಬರೆದ ಅರ್ಥಪೂರ್ಣ ಅಭಿನಂದನಾ ನುಡಿಗಳನ್ನು ಸಾಹಿತಿಗಳಾದ ಶ್ರೀ ಮಹಿಪಾಲರಡ್ಡಿ ಮುನ್ನೂರ ಅವರು ವಾಚಿಸಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಭಾರತಿ ಶರಣಬಸಪ್ಪಗೌಡ ದರ್ಶನಾಪುರ, ಶ್ರೀ ಶಾಂತರಡ್ಡಿ ವಿ. ರಾಜ್ಯ ಉಪಾಧ್ಯಕ್ಷರು ರಡ್ಡಿ ಸಮಾಜ, ಶ್ರೀ ಚನ್ನಾರಡ್ಡಿ ಆರ್. ಪಾಟೀಲ ಅಧ್ಯಕ್ಷರು ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಪತ್ತಿನ ಸಹಕಾರ ಸಂಘ (ರಿ), ಶ್ರೀ ಭಾಗನಗೌಡ ಸಂಕನೂರ ತೊಗರಿಮಂಡಳಿಯ ಅಧ್ಯಕ್ಷರು, ಶ್ರೀ ಚಂದ್ರಶೇಖರರಡ್ಡಿ ದೇಶಮುಖ ಮಾಜಿ ಉಪಸಭಾಪತಿ, ಮಾಜಿ ಶಾಸಕರು, ಶ್ರೀಮತಿ ಗುರಮ್ಮ ಸಿದ್ದಾರಡ್ಡಿ, ರಡ್ಡಿ ಸಮಾಜದ ಮುಖಂಡರು, ಸದಸ್ಯರು ಉಪಸ್ಥಿತರಿದ್ದರು. ಪ್ರೊ. ಎಸ್.ಎಲ್.ಪಾಟೀಲ ಸ್ವಾಗತಿಸಿದರು. ಸರ್ವಜ್ಞ ಚಿಣ್ಣರ ಲೋಕದ ವಿದ್ಯಾರ್ಥಿನಿಯರಾದ ಕು. ಶರಣಮ್ಮ, ಕು. ಭವಾನಿ ವಚನ ಗಾಯನದ ಮೂಲಕ ಪ್ರಾರ್ಥಿಸಿದರು. ಶ್ರೀ ಸಿದ್ರಾಮ್ ಚಿಮ್ಮಯಿದಲಾಯಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀಮತಿ ವಿಜಯಲಕ್ಷ್ಮೀ ಪಾಟೀಲ ವಂದಿಸಿದರು. ಶ್ರೀಮತಿ ಶರಣಮ್ಮ ಬಿ. ಪಾಟೀಲ ವಕೀಲರು ನಿರೂಪಿಸಿದರು.