ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.28:- ಕೋಟ್ಯಾಂತರ ರೂಪಾಯಿಗಳನ್ನು ಖರ್ಚುಮಾಡಿ ನಿರ್ಮಾಣ ಮಾಡಿರುವ ಒಳಾಂಗಣ ಕ್ರೀಡಾಂಗಣ ಪ್ರಾರಂಭವಾಗಿ ಇನ್ನೂ ಆರು ತಿಂಗಳೂ ಸಹ ಆಗಿಲ್ಲ ಆಗಲೇ ಸಾರ್ವಜನಿಕರಿಂದ ಸಾಕಷ್ಟು ದೂರುಗಳ ಬರುತ್ತಿದ್ದು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದು ಶಾಸಕ ಹೆಚ್.ಟಿ.ಮಂಜು ಯುವಜನ ಸಬಲೀಕರಣ ಇಲಾಖೆಯ ಉಪನಿರ್ದೇಶಕ ಓಂಪ್ರಕಾಶ್ ರವರಿಗೆ ಖಡಕ್ ಸೂಚನೆ ನೀಡಿದರು.
ಪಟ್ಟಣದ ಹೊಸಹೊಳಲು ರಸ್ತೆಯಲ್ಲಿ ನಾಲ್ಕೈದು ತಿಂಗಳ ಹಿಂದೆ ಆರಂಭವಾದ ಶ್ರೀ ಬಾಲಗಂಗಾಧರಸ್ವಾಮಿ ಒಳಾಂಗಣ ಕ್ರೀಡಾಂಗಣಕ್ಕೆ ಧಿಡೀರ್ ಭೇಟಿ ನೀಡಿ ಅಲ್ಲಿನ ಕ್ರೀಡಾಪಟುಗಳಿಂದ ಅವ್ಯವಸ್ಥೆಗಳನ್ನು ಆಲಿಸಿ ಮಾತನಾಡಿದ ಮಂಜು
ಶುಚಿತ್ವದ ಕೊರತೆ, ಸಾರ್ವಜನಿಕರ ಉಪಯೋಗಕ್ಕೆ ಬಳಕೆಯಾಗದ ಸಾರ್ವಜನಿಕ ಶೌಚಾಲಯ, ಸಮತ್ತಟ್ಟಿಲ್ಲದೆ ನಿರ್ಮಿಸಿರುವ ಫುಟ್‍ಬಾಲ್ ಕ್ರೀಡಾಂಗಣ, ಟಿನಿಸ್‍ಕೋರ್ಟ್, ವಿದ್ಯುತ್ ಸಮಸ್ಯೆ, ಕಸದ ಬುಟ್ಟಿಗಳು ಇಲ್ಲದಿರುವುದು, ವಾಕಿಂಗ್ ಪಾಥ್ ಅವ್ಯವಸ್ಥೆ, ಮುರಿದು ಹೋಗಿರುವ ವ್ಯಾಯಾಮ ಪರಿಕರಗಳು, ಸಕಾಲಕ್ಕೆ ಕ್ರೀಡಾಪಟುಗಳಿಗೆ ಓಪನ್ ಮಾಡದೆ ಕ್ರಿಡಾಳುಗಳ ಮೇಲೆ ದರ್ಪ ಪ್ರದರ್ಶಿಸುವ ನಿರ್ವಹಣಾ ಏಜನ್ಸಿಯ ಸಿಬ್ಬಂಧಿಗಳು ಮುಂತಾದ ಹತ್ತು ಹಲವು ಸಮಸ್ಯೆಗಳನ್ನು ಕ್ರೀಡಾಂಗಣ ಬಳಕೆ ಮಾಡುವ ಕ್ರೀಡಾಪಟುಗಳು ಶಾಸಕರ ಮುಂದೆ ತೆರದಿಟ್ಟರು. ನಿರ್ಮಾಣವಾಗಿ ಕೇವಲ ಒಂದೇ ತಿಂಗಳಿಗೆ ಇಲ್ಲಿನ ಹಲವಾರು ಸಾಮಗ್ರಿಗಳು ಕಿತ್ತುಹೋಗಿವೆ. ಕಿತ್ತುಹೋದ ಕ್ರೀಡಾ ಸಾಮಗ್ರಿಗಳನ್ನು ದುರಸ್ತಿಗೊಳಿಸುವ ಗೋಜಿಗೆ ಹೋಗದೇ ಬೇಕಾಬಿಟ್ಟಿ ನಿರ್ವಹಣೆ ಮಾಡುತ್ತಿದ್ದಾರೆ. ಇಲ್ಲಿನ ಸೌಲಭ್ಯಗಳ ಬಗ್ಗೆ ಬರೀ ಮಾತಿನಲ್ಲಿ ಹೊಟ್ಟೆತುಂಬಿಸುವ ಕೆಲಸವಾಗಿದ್ದು ಸಾರ್ವಜನಿಕರಿಂದ ಹಣ ವಸೂಲಿ ಮಾಡುವುದೇ ಮುಖ್ಯ ಗುರಿಯಾಗಿರುವ ಈ ಕ್ರೀಡಾಂಗಣಕ್ಕೆ ಸಾರ್ವಜನಿಕರಿಗೆ ಹೇಳಿಕೊಳ್ಳುವ ಯಾವುದೇ ರೀತಿಯ ಸೌಲಭ್ಯಗಳಿಲ್ಲ. ಯಾರದೋ ಜೇಬು ತುಂಬಿಸಲು ಇಲ್ಲಿಗೆ ಒಳಾಂಗಣ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ಇದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು. ಹೀಗೆ ಸಾರ್ವಜನಿಕರು ಶಾಸಕರಿಗೆ ಸಮಸ್ಯೆಗಳ ಸರಮಾಲೆಯನ್ನೇ ಹೇಳಿದರು.
ಶಾಸಕ ಹೆಚ್.ಟಿ.ಮಂಜು ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆಗಳು ಬರದಂತೆ ಎಚ್ಚರಿಕೆ ವಹಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಸಾರ್ವಜನಿಕರಿಗೆ ಅನುಕೂಲವಾಗದಿರುವ ಕ್ರೀಡಾಂಗಣ ನಮಗೆ ಏಕೆ ಬೇಕು ಎಂದು ಓಂಪ್ರಕಾಶ್ ರವರಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಮು, ಪಿಇಓ ಪ್ರಭುಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಸೀತಾರಾಮು, ಪುರಸಭಾ ಸದಸ್ಯ ಶಾಮಿಯಾನ ತಿಮ್ಮೇಗೌಡ, ಗಿರೀಶ್, ಮಾಜಿ ಸದಸ್ಯ ಕೆ.ಆರ್.ಹೇಮಂತ್‍ಕುಮಾರ್, ಮುಖಂಡ ವಿಶ್ವನಾಥ್ ಸೇರಿದಂತೆ ಹಲವರಿದ್ದರು.