ಒಳಮೀಸಲಾತಿ ವಿರೋಧಿಸಿ ಪ್ರತಿಭಟನೆ

ರಾಮದುರ್ಗ,ಏ12 : ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೆ ತಂದಿರುವದನ್ನು ವಿರೋಧಿಸಿ ರಾಮದುರ್ಗ ತಾಲೂಕಾ ಬಂಜಾರ ಸೇವಾ ಸಂಘದ ನೇತೃತ್ವದಲ್ಲಿ ವಿವಿಧ ಸಮಾಜದ ಮುಖಂಡರು ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ನಗರದ ಎಪಿಎಂಸಿಯಿಂದ ಪ್ರತಿಭಟನಾ ಮೇರವಣಿಗೆ ನಡೆಸಿ ಮಿನಿ ವಿಧಾನಸೌಧಕ್ಕೆ ತೆರಳಿ ಪ್ರತಿಭಟನಾ ಸಭೆ ನಡೆಸಿ ತಹಶೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬಂಜಾರ ಸಮಾಜದ ಗುರುಗಳಾದ ಬಾಗಲಕೋಟೆಯ ಶಿರೂರದ ಕುಮಾರ ಮಹಾರಾಜರು ಮಾತನಾಡಿ ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿಯನ್ನು ಯಾವದೇ ರಾಜಕೀಯ ಪಕ್ಷ ಮತ್ತು ಸಮಾಜದ ಮುಖಂಡರೊಂದಿಗೆ ಬಹಿರಂಗ ಚರ್ಚೆ ಮಾಡದೆ ಒಳಮೀಸಲಾತಿ ಜಾರಿಗೆ ತಂದು ಬಂಜಾರ ಸಮುದಾಯ ಸೇರಿದಂತೆ ಕೊರಮ, ಕೊರಚ, ಭೋವಿ, ವಡ್ಡರ ಸೇರಿದಂತೆ 99 ಪರಿಶಿಷ್ಠ ಜಾತಿಯ ಜನರನ್ನು ಅವರ ಶೈಕ್ಷಣಿಕ ಮತ್ತು ಹಿಂದುಳಿಯುವಿಕೆಯನ್ನು ಗಮನಿಸದೇ ಒಳಮೀಸಲಾತಿ ಜಾರಿಗೆ ತಂದಿರುವದನ್ನು ವಿರೋಧಿಸಬೇಕಾಗಿದೆ ಎಂದು ಹೇಳಿದರು.
2023ರ ಜಾತಿ ಗಣತಿ ಮಾಡದೇ 2011 ಜನಗಣತಿ ಆಧಾರದ ಮೇಲೆ ಅಸಂವಿಧಾನಿಕವಾಗಿ ಪರಿಶಿಷ್ಠ ಜಾತಿಗಳನ್ನು 5 ಗುಂಪುಗಳಾಗಿ ಮಾಡಿದ್ದಾರೆ. ಎ.ಜೆ. ಸದಾಶಿವ ವರದಿಯನ್ನು ನಾವೆಲ್ಲರೂ ತೀವ್ರವಾಗಿ ವಿರೋಧಿಸುತ್ತೇವೆ ಎಂದು ಹೇಳಿದರಲ್ಲದೆ ಬಿಜೆಪಿ ಸರ್ಕಾರಕ್ಕೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಬಂಜಾರ ಸಮುದಾಯದಸರಕೋಟದ ಬೀಲಪ್ಪ ಮಹಾರಾಜರು, ಚನ್ನಾಪೂರ ತಾಂಡಾದ ಖಿರಪ್ಪ ಮಹಾರಾಜರು, ತಾಲೂಕಾ ಬಂಜಾರ ಸಮುದಾಯದ ಅಧ್ಯಕ್ಷ ಪರಶುರಾಮ ಪಮ್ಮಾರ, ವಿಜಯಕುಮಾರ ರಾಠೋಡ, ಜಿಪಂ ಮಾಜಿ ಸದಸ್ಯ ಶಂಕರ ಲಮಾಣಿ, ಜೀವಪ್ಪ ಲಮಾಣಿ, ಆನಂದ ಲಮಾಣಿ, ಭೀಮಶಿ ಬಂಡಿವಡ್ಡರ, ರಮೇಶ ಬಂಡಿವಡ್ಡರ, ರವಿ ಭಜಂತ್ರಿ, ಯಲ್ಲಪ್ಪ ಇಟಗಿ ಸೇರಿದಂತೆ ವಿವಿಧ ಸಮುದಾಯದ ಮುಖಂಡರು ಭಾಗವಹಿಸಿದ್ದರು.