ಒಳಮೀಸಲಾತಿ ಭಿಕ್ಷೆಯಲ್ಲ ನಮ್ಮ ಹಕ್ಕು 

ದಾವಣಗೆರೆ.ಜೂ.೩೦: ರಾಜ್ಯದಲ್ಲಿ ಸೋತಿರುವ ಬಿಜೆಪಿಯ ಶಾಸಕರು ಮತ್ತು ಮಾಜಿ ಸಚಿವರು ಒಳಮೀಸಲಾತಿ ಕೊಟ್ಟಿರುವುದರಿಂದ ನಮ್ಮ ಪಕ್ಷ ಸೋಲು ಕಂಡಿದೆ ಎಂದು ಹೇಳಿಕೆಯನ್ನು ನೀಡುವ ಮುಖಾಂತರ ಮಾದಿಗ ಸಮಾಜವನ್ನು ಅವಮಾನಿಸುತ್ತಿದ್ದು, ಇದರ ಬಗ್ಗೆ ಚರ್ಚೆಗೆ ಬನ್ನಿ ಎಂದು ಕರ್ನಾಟಕ ರಾಜ್ಯ ಸ್ವಾಭಿಮಾನಿ ಮಾದಿಗ ವೇದಿಕೆ ಮುಖಂಡ ಡಿ. ಹನುಮಂತಪ್ಪ ಆಹ್ವಾನ ನೀಡಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,   ಬಿಜೆಪಿ ತನ್ನ ದುರಾಡಳಿತದಿಂದ ಅಧಿಕಾರವನ್ನು ಕಳೆದುಕೊಂಡು ತನ್ನ ದುರಾಡಳಿತವನ್ನುಸಮರ್ಥಿಸಿಕೊಳ್ಳಲು `ರಾಜ್ಯದಲ್ಲಿ ಒಳಮೀಸಲಾತಿಯಿಂದ ನಮ್ಮ ಪಕ್ಷ ಹೀನಾಯವಾಗಿ ಸೋಲು ಕಂಡಿದೆ ಎಂದು ಸಭೆಗಳಲ್ಲಿ,ಮಾಧ್ಯಮದವರ ಮುಂದೆ ಹೇಳಿಕೊಳ್ಳುತ್ತಾ ಬರುತ್ತಿರುವುದು ಖಂಡನೀಯ ಎಂದರು.ಒಳಮಿಸಲಾತಿಗಾಗಿ ನ್ಯಾ. ಸದಾಶಿವ ಆಯೋಗದ ವರದಿ ಜಾರಿಗಾಗಿಹೋರಾಟ ನಡೆಸುತ್ತಿರುವ ಮಾದಿಗ ಸಮಾಜವನ್ನು ಮತ್ತು ಅದರ ಹೋರಾಟಗಾರರನ್ನು ಹೀಯಾಳಿಸಿ ಅವಮಾನ ಮಾಡಿದ ಶಾಸಕರ ಮೇಲೆ ಎಫ್ಐಆರ್ ಮಾಡಿದ್ದೇವೆ. ಆದರೂ ಬುದ್ಧಿ ಕಲಿಯದ ಬಿಜೆಪಿ ಹೊಳಲ್ಕೆರೆ ಶಾಸಕ ಚಂದ್ರಪ್ಪ ಮತ್ತು ಹೊನ್ನಾಳಿಯ ಮಾಜಿ ಸಚಿವ ರೇಣುಕಾಚಾರ್ಯ ಮತ್ತೆ ಒಳಮಿಸಲಾತಿಯಿಂದ ನಮ್ಮ ಪಕ್ಷ ಹೀನಾಯವಾಗಿಸೋಲಬೇಕಾಯಿತು ಎಂದು ಮಾಧ್ಯಮದ ಮುಂದೆ ಹೇಳುತ್ತಿರುವುದು ಖಂಡನೀಯ ಎಂದರು.