ಒಳಮೀಸಲಾತಿ ಜಾರಿ ವಿರೋಧಿಸಿ ಬಂಜಾರಾ ಸಮಾಜದಿಂದ ಬೃಹತ್ ಪ್ರತಿಭಟನೆ

ಕಲಬುರಗಿ,ಮಾ.31: ರಾಜ್ಯ ಸರ್ಕಾರವು ಪರಿಶಿಷ್ಟರ ಒಳ ಮೀಸಲಾತಿಯನ್ನು ಜಾರಿಗೆ ತಂದಿರುವುದನ್ನು ಖಂಡಿಸಿ ಬಂಜಾರಾ ಸಮುದಾಯದವರು ಶುಕ್ರವಾರ ನಗರದ ಬಂಜಾರಾ ಭವನದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡಿದರು.
ಒಳ ಮೀಸಲಾತಿಯನ್ನು ವಿರೋಧಿಸುವ ಬ್ಯಾನರ್‍ಗಳನ್ನು ಹಿಡಿದಿದ್ದ ಕಾರ್ಯಕರ್ತರು, ಬ್ಯಾನರ್‍ನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಂಸದ ಡಾ. ಉಮೇಶ್ ಜಾಧವ್, ಶಾಸಕ ಡಾ. ಅವಿನಾಶ್ ಜಾಧವ್, ಸಚಿವರಾದ ಪ್ರಭು ಚವ್ಹಾಣ್, ಮಾಧುಸ್ವಾಮಿ ಮತ್ತು ಸುಧಾಕರ್ ಅವರ ಭಾವಚಿತ್ರಗಳಿಗೆ ಸೀರೆಯುಡಿಸಿ, ಚಪ್ಪಲಿಗಳಿಂದ ಹೊಡೆದು ಆಕ್ರೋಶ ಹೊರಹಾಕಿದರು.
ಜಿಲ್ಲಾಧಿಕಾರಿಗಳ ಕಚೇರಿ ಬಳಿ ಬ್ಯಾನರ್‍ನ ಭಾವಚಿತ್ರಗಳಿಗೆ ಅತ್ಯಂತ ಅವನಕಾರಿ ರೀತಿಯಲ್ಲಿ ಆಕ್ರೋಶ ಹೊರಹಾಕಿದ ಪ್ರತಿಭಟನೆಕಾರರು, ಕೂಡಲೇ ಒಳ ಮೀಸಲಾತಿಯನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಹೋರಾಟ ಮುಂದುವರೆಸುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಜೇಮಸಿಂಗ್ ಮಹಾರಾಜರು, ಮುರಹರಿ ಮಹಾರಾಜರು, ಲತಾದೇವಿ ಮಾತಾ, ವಿನೋದ್ ಎಲ್. ಚವ್ಹಾಣ್, ಚಂದು ಜಾಧವ್, ಶ್ರೀಧರ್ ಚವ್ಹಾಣ್, ನಾರಾಯಣ್ ಪವಾರ್, ಕ್ಷತ್ರು ವಕೀಲರು, ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಹಾಗೂ ಮಹಾನಗರ ಪಾಲಿಕೆಯ ಸದಸ್ಯೆ ಶ್ರೀಮತಿ ಲತಾ ರವಿ ರಾಠೋಡ್ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.
ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿ, ಭಾರತದ ಸಂವಿಧಾನದಲ್ಲಿ ಅವಕಾಶ ಇಲ್ಲದಿದ್ದರೂ ಸುಪ್ರಿಂಕೋರ್ಟ್‍ನ ತೀರ್ಪಿಗೆ ವಿರುದ್ಧವಾದ ಪರಿಶಿಷ್ಟ ಜಾತಿಗಳನ್ನು ನಾಲ್ಕು ಗುಂಪುಗಳನ್ನಾಗಿ ವರ್ಗಿಕರಿಸಿ ಮೀಸಲಾತಿ ಹಂಚಿಕೆ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತಿರುವುದನ್ನು ತಡೆಹಿಡಿಯಬೇಕು ಎಂದು ಒತ್ತಾಯಿಸಿದರು.
ಒಳ ಮೀಸಲಾತಿಯೇ ಅಸಂವಿಧಾನಿಕವಾಗಿರುವಾಗ ಗುಂಪು 3ರ ಹೆಸರಿನಲ್ಲಿ ಬಂಜಾರಾ, ಭೋವಿ, ಕೊರಚಾ, ಕೊರಮ ಸಮುದಾಯಗಳಿಗೆ ಶೇಕಡಾ 4.5ರಷ್ಟು ಮೀಸಲಾತಿ ಹಂಚಿಕೆ ಮಾಡಿರುವುದು ಕೂಡ ಅವೈಜ್ಞಾನಿಕವಾಗಿದೆ. ಇದು ಭಾರತದ ಸಂವಿಧಾನ ಹಾಗೂ ಸಮುದಾಯಗಳಿಗೆ ಮಾಡಿದ ಮಹಾ ದ್ರೋಹವಾಗಿದೆ. ನಮ್ಮ ಹಿಂದುಳಿದಿರುವಿಕೆಯನ್ನು ಮತ್ತು ಜನಸಂಖ್ಯೆಯನ್ನು ಪರಿಗಣಿಸದೇ ಶೇಕಡಾ 4.5ರ ಪ್ರಮಾಣದ ಮೀಸಲಾತಿ ಹಂಚಿಕೆಯನ್ನು ಬೆಂಬಲಿಸುವುದಿಲ್ಲ ಎಂದು ಅವರು ಆಕ್ರೋಶ ಹೊರಹಾಕಿದರು.
ಚಾರಿತ್ರಿಕ ಆಧಾರದ ಮೇಲೆ ಸಾಂವಿಧಾನಿಕ ಸ್ಥಾನಮಾನ ಪಡೆದುಕೊಂಡಿರುವ ಬಂಜಾರಾ, ಭೋವಿ, ಕೊರಚಾ, ಕೊರಮ ಸಮುದಾಯಗಳನ್ನು ಎಸ್‍ಸಿ ಪಟ್ಟಿಯಿಂದ ಹೊರಹಾಕುವುದು ಯಾರಿಂದಲೂ ಸಾಧ್ಯವಿಲ್ಲ. ಕೆಲವರು ನಮ್ಮ ಸಮುದಾಯಗಳಿಗೆ ದೊಡ್ಡ ಸಹಾಯ ಮಾಡಿದ್ದೇವೆ ಎಂದು ಬಿಂಬಿಸುತ್ತಿದ್ದಾರೆ. ಅಂತಹ ವ್ಯರ್ಥ ಪ್ರಯತ್ನಗಳ ಮೂಲಕ ಸಮಾಜದ ದಿಕ್ಕು ತಪ್ಪಿಸಲು ಸಾಧ್ಯವಿಲ್ಲ. ಕೂಡಲೇ ಸಮುದಾಯಗಳಲ್ಲಿ ಆತಂಕ ಹುಟ್ಟಿಸಿ ಅಪಮಾನ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ನಡೆದ ಪ್ರತಿಭಟನೆಕಾರರ ಮೇಲೆ ಹಾಕಿದ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ ಅವರು, ಬಂಧಿತ ಯುವಕರಾದ ರಾಘವೇಂದ್ರ ನಾಯಕ್, ಪುನೀತ್ ನಾಯಕ್, ಪ್ರೇಮಕುಮಾರ್ ಅವರನ್ನು ಬಿಡುಗಡೆ ಮಾಡಬೇಕು. ಪ್ರತಿಭಟನೆಕಾರರೊಂದಿಗೆ ಹೀನಾಯವಾಗಿ ನಡೆದುಕೊಂಡ ಪೋಲಿಸರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೂಡಲೇ ನಮ್ಮ ನ್ಯಾಯಯುತ ಬೇಡಿಕೆಗಳಿಗೆ ಎಲ್ಲ ರಾಜಕೀಯ ಪಕ್ಷಗಳು ಸ್ಪಂದಿಸಬೇಕು. ಇಲ್ಲದೇ ಹೋದಲ್ಲಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಅವರು ಎಚ್ಚರಿಸಿದರು.