ಒಳಮೀಸಲಾತಿಗೆ ಮಾದಿಗ ಸಮನ್ವಯ ಸಮಿತಿ ಬೆಂಬಲ: ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟಕ್ಕೆ ಖಂಡನೆ

ಕಲಬುರಗಿ,ಮಾ.30: ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿಯನ್ನು ಜಾರಿಗೆ ತಂದ ಕ್ರಮವು ಸ್ವಾಗತಾರ್ಹವಾಗಿದೆ. ಆದಾಗ್ಯೂ, ಒಳ ಮೀಸಲಾತಿ ಜಾರಿಯನ್ನು ವಿರೋಧಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿವಾಸದ ಮೇಲೆ ಬಂಜಾರಾ ಮತ್ತು ಭೋವಿ ಸಮಾಜದ ಕೆಲವು ಮುಖಂಡರು ಕಲ್ಲು ತೂರಾಟ ಮಾಡಿದ್ದು ಖಂಡನಾರ್ಹ ಎಂದು ಜಿಲ್ಲಾ ಮಾದಿಗ ಸಮನ್ವಯ ಸಮಿತಿಯ ಅಧ್ಯಕ್ಷ ಪರಮೇಶ್ವರ್ ಖಾನಾಪೂರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಜಾರಾ ಮತ್ತು ಭೋವಿ ಸಮಾಜದ ಮುಖಂಡರಿಗೆ ಸರಿಯಾದ ರೀತಿಯಲ್ಲಿ ಒಳ ಮೀಸಲಾತಿ ಬಗ್ಗೆ ತಿಳಿದುಕೊಳ್ಳದೇ ನ್ಯಾಯಮೂರ್ತಿ ಎ.ಜೆ. ಸದಾಶಿವ್ ಆಯೋಗ ಜಾರಿಯಾಗಿದೆ ಎಂದು ಸಮಾಜದ ಯುವಕರಿಗೆ ಮತ್ತು ಹೋರಾಟಗಾರರಿಗೆ ಕೆಲವು ಮುಖಂಡರು ತಪ್ಪು ಸಂದೇಶ ನೀಡಿ ದಾರಿ ತಪ್ಪಿಸುವ ಹುನ್ನಾರ ಮಾಡುತ್ತಿದ್ದಾರೆ ಎಂದು ದೂರಿದರು.
ಸದಾಶಿವ್ ಆಯೋಗದ ವರದಿಯನ್ನು ಸರ್ಕಾರ ಜಾರಿ ಮಾಡಿಲ್ಲ. ಪರಿಶಿಷ್ಟ ಜಾತಿಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಿದ್ದಕ್ಕೆ ಸಂತೋಷಪಟ್ಟು ಅವರು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಬೇಕಾಗಿತ್ತು. ಒಳ ಮೀಸಲಾತಿ ಆಗುವುದಕ್ಕಿಂತ ಮುಂಚೆ ಬಂಜಾರಾ ಮತ್ತು ಭೋವಿ ಸಮಾಜ ಪರಿಶಿಷ್ಟ ಜಾತಿಯಿಂದ ತೆಗೆಯುತ್ತಿದ್ದಾರೆಂಬ ತಪ್ಪು ಕಲ್ಪನೆಯಿಂದ ಹೋರಾಟ ಮಾಡುತ್ತಿದ್ದಾರೆ. ಇವರೆರಡೂ ಸಂದೇಶಕ್ಕೆ ಆಸ್ಪದ ನೀಡದೇ ಪರಿಶಿಷ್ಟ ಜಾತಿಯಲ್ಲಿ ಬರುವ ಮಾದಿಗ (ಎಡಗೈ) ಸಂಬಂಧಿತ ಜಾತಿಗೆ ಶೇಕಡಾ 6ರಂತೆ ಮತ್ತು ಹೊಲೆಯ (ಬಲಗೈ) ಸಂಬಂಧಿತ ಜಾತಿಗೆ ಶೇಕಡಾ 5.5ರಂತೆ ಮತ್ತು ಬಂಜಾರಾ, ಭೋವಿ, ಕೊರಮ, ಕೊಚ್ಚ ಸಂಬಂಧಿತ ಜಾತಿಗೆ ಶೇಕಡಾ 4.5ರಂತೆ ಮತ್ತು ಅಲೆಮಾರಿ ಜನಾಂಗಕ್ಕೆ ಶೇಕಡಾ ರಂತೆ ಮೀಸಲಾತಿ ನೀಡಿ ಪರಿಶಿಷ್ಟ ಜಾತಿಯಲ್ಲಿ ಬರುವ ಎಲ್ಲ ಸಮುದಾಯಗಳಿಗೆ ಅನ್ಯಾಯ ಆಗದಂತೆ ರಾಜ್ಯ ಸರ್ಕಾರ ಉಪ ಸಮಿತಿಯನ್ನು ರಚಿಸಿ, ಆ ಸಮಿತಿಯಲ್ಲಿ ಬಂಜಾರಾ ಸಮಾಜದ ಸದಸ್ಯ ಪ್ರಭು ಚವ್ಹಾಣ್ ಅವರು ಇದ್ದಾರೆ. ಬಂಜಾರಾ ಮತ್ತು ಭೋವಿ ಸಮಾಜದ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಳ ಮೀಸಲಾತಿ ಜಾರಿ ಮಾಡಿದ್ದಾರೆ ಎಂದು ಅವರು ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದರು.
ಸರ್ಕಾರವು ಒಳ್ಳೆಯ ನಿರ್ಧಾರ ತೆಗೆದುಕೊಂಡು ಪರಿಶಿಷ್ಟ ಜಾತಿಯಲ್ಲಿ ಬರುವ ಎಲ್ಲ ಜಾತಿ ಜನಾಂಗದವರು ಸಹೋದರರಂತೆ ಸಹಬಾಳ್ವೆ ನಡೆಸಲು ಒಳಮೀಸಲಾತಿ ಜಾರಿ ಮಾಡಿದ್ದಕ್ಕೆ ಎಲ್ಲರೂ ಅಭಿನಂದಿಸಬೇಕು. ಮುಂದಿನ ದಿನಗಳಲ್ಲಿ ಯಾವುದೇ ಕಿಡಿಗೇಡಿಗಳ ಮಾತಿಗೆ ಕಿವಿಗೊಡದೇ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಆಶಯದಂತೆ ಎಲ್ಲರೂ ಒಂದಾಗಿ ಇರೋಣ ಎಂದು ಅವರು ಮನವಿ ಮಾಡಿದರು.
ಮಹಾನಗರ ಪಾಲಿಕೆಯ ಮಾಜಿ ಸದಸ್ಯ ರಾಜು ವಾಡೇಕರ್ ಅವರು ಮಾತನಾಡಿ, ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪರಿಶಿಷ್ಟರ ಒಳ ಮೀಸಲಾತಿಯನ್ನು ರಾಜ್ಯ ಬಿಜೆಪಿ ಸರ್ಕಾರವು ಜಾರಿಗೆ ತಂದಿದೆ. ಎಲ್ಲ ಒಳ ಪಂಗಡಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಮಾಜಿಕ ನ್ಯಾಯವನ್ನು ಒದಗಿಸಲಾಗಿದೆ. ಇಂತಹ ಕ್ರಮವನ್ನು ಯಾರೂ ಸಹ ವಿರೋಧಿಸಬಾರದು ಎಂದು ಕೋರಿದರು.
ಸಮಾಜದ ಮುಖಂಡ ದಶರಥ್ ಕಲಗುರ್ತಿ ಅವರು ಮಾತನಾಡಿ, ಹಾಗೆ ನೋಡಿದರೆ ಬಂಜಾರಾ, ಭೋವಿ, ಕೊರಮ, ಕೊರಚ ಸಮುದಾಯಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಹೊರಹಾಕಬೇಕಾಗಿತ್ತು. ಅದನ್ನು ಮಾಡದೇ ಬಿಜೆಪಿ ಸರ್ಕಾರವು ಸಂವಿಧಾನದ ಚೌಕಟ್ಟಿನಲ್ಲಿ ಎಲ್ಲ ಪರಿಶಿಷ್ಟ ಸಮುದಾಯಗಳಿಗೆ ನ್ಯಾಯ ನೀಡಿದೆ. ಇನ್ನು ಮುಂದೆ ಇಂತಹ ಯೋಗ್ಯ ಒಳಮೀಸಲಾತಿಯನ್ನು ಯಾರಾದರೂ ವಿರೋಧಿಸಿದರೆ ಅಂತಹ ಸಂದರ್ಭಗಳಲ್ಲಿ ಬಂಜಾರಾ, ಭೋವಿ, ವಡ್ಡರ್, ಕೊರಚ, ಕೊರಮ ಸಮುದಾಯಗಳನ್ನು ಪರಿಶಿಷ್ಟ ಜಾತಿಯಿಂದ ಹೊರಹಾಕುವಂತೆ ಚಳುವಳಿ ಆರಂಭಿಸಲಾಗುವುದು ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಸುಶೀಲ್ ಕಾಂಬ್ಳೆ ಅವರು ಉಪಸ್ಥಿತರಿದ್ದರು.