ಒಳಉಡುಪಿನಲ್ಲಿ ಭಾರೀ ಮೌಲ್ಯದ ಅಕ್ರಮ ಚಿನ್ನ ಸಾಗಾಟ: ದಂಪತಿ ಸೆರೆ

ಮಂಗಳೂರು, ಮಾ.೨೯- ಬಜ್ಪೆ ಕೆಂಜಾರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ದಂಪತಿಯನ್ನು ಪತ್ತೆ ಹಚ್ಚಿದ ಕಸ್ಟಮ್ಸ್ ಅಧಿಕಾರಿಗಳು ಅವರಿಂದ ೩೯.೪೮ ಲಕ್ಷ ರೂ. ಮೌಲ್ಯದ ೮೫೧ ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಕಾಸರಗೋಡಿನ ಚೆರೂರ್ ಮೂಲದವರಾದ ಫೌಸಿಯಾ ಮಿಸ್ಸಿರಿಯಾ(೩೩) ಮತ್ತವರ ಪತಿ ಮೊಯ್ದಿನ್ ಕುಂಞಿ ಚೆರೂರ್ (೪೪) ತನ್ನ ನಾಲ್ಕು ಮಕ್ಕಳೊಂದಿಗೆ ದುಬೈನಿಂದ ಬರುತ್ತಿರುವ ಏರ್ ಇಂಡಿಯಾ ವಿಮಾನದಿಂದ ಇಳಿದಿದ್ದರು. ತಪಾಸಣೆಯ ಸಂದರ್ಭ ಮಹಿಳೆಯು ವಿಶೇಷವಾಗಿ ವಿನ್ಯಾಸಗೊಳಿಸಿದ ಒಳ ಉಡುಪಿನಲ್ಲಿ ಮರೆಮಾಚುವ ಮೂಲಕ ಚಿನ್ನವನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸಿದ್ದರು ಎನ್ನಲಾಗಿದೆ. ಕಸ್ಟಮ್ಸ್ ಡೆಪ್ಯುಟಿ ಕಮಿಷನರ್ ಕಿರಣ್ ರಂಗಾಲಿ, ಅಧೀಕ್ಷಕರಾದ ಮನೋಕಾತ್ಯಾಯಿನಿ, ಶ್ರೀಕಾಂತ್, ನಾಗೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.