ಒಲಿಂಪಿಕ್ಸ್ ಕ್ರೀಡಾ ಗ್ರಾಮದಲ್ಲಿ ಕೊರೊನಾ ಪತ್ತೆ!

ಟೋಕಿಯೋ, ಜು.೧೭- ಪ್ರತಿಷ್ಟಿತ ಟೋಕಿಯೋ ಒಲಿಂಪಿಕ್ಸ್‌ಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿರುವಾಗ ಸದ್ಯ ಭಾರೀ ಸಿಡಿಲಿನಾಘಾತ ಟೂರ್ನಿಗೆ ಬಂದೆರಗಿದೆ. ಒಲಿಂಪಿಕ್ಸ್ ಕ್ರೀಡಾ ಗ್ರಾಮದಲ್ಲಿ (ಒಲಿಂಪಿಕ್ಸ್ ವಿಲೇಜ್) ನೆಲೆಸಿದ್ದ ವ್ಯಕ್ತಿಯೊಬ್ಬ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಆಯೋಜಕರಲ್ಲಿ ಆತಂಕ ಮೂಡಿಸಿದೆ.
ಆದರೆ ಸದ್ಯ ಸೋಂಕಿಗೆ ಈಡಾಗಿರುವ ವ್ಯಕ್ತಿ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಅಥ್ಲೀಟ್ ಅಲ್ಲ ಎನ್ನಲಾಗಿದೆ. ಆದರೆ ಈತ ಕ್ರೀಡೆಗೆ ಸಂಬಂಧಪಟ್ಟ ವ್ಯಕ್ತಿ ಎಂಬ ಮಾಹಿತಿ ಮಾತ್ರ ಸಂಘಟಕರು ನೀಡಿದ್ದಾರೆ. ಈತ ಅನಿವಾಸಿ ಜಪಾನ್ ನಾಗರಿಕನಾಗಿದ್ದು, ಸದ್ಯ ಈತನಿಗೆ ೧೪ ದಿನಗಳ ಕ್ವಾರಂಟೈನ್ ನೀಡಲಾಗಿದೆ. ಟೋಕಿಯೋ ಗ್ರಾಮದಲ್ಲಿ ಸುಮಾರು ೧೧ ಸಾವಿರ ಅಥ್ಲೀಟ್ಸ್‌ಗಳ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಅದೂ ಅಲ್ಲದೆ ಸಾವಿರಕ್ಕೂ ಅಧಿಕ ಇತರೆ ಅಧಿಕಾರಿಗಳಿಗೆ ಉಳಿದುಕೊಳ್ಳುವ ಬೃಹತ್ ವ್ಯವಸ್ಥೆ ಮಾಡಲಾಗಿದೆ. ಸದ್ಯ ಒಲಿಂಪಿಕ್ಸ್ ಗ್ರಾಮಲ್ಲಿ ನಿವಾಸಿಯೊಬ್ಬನಿಗೆ ಕೋವಿಡ್ ತಗುಲಿದ್ದರೂ ಅದು ಗಂಭೀರ ಸ್ಥಿತಿಯಲ್ಲಿಲ್ಲ ಎಂದು ಟೂರ್ನಿಯ ಆಯೋಜಕರು ತಿಳಿಸಿದ್ದಾರೆ.