ಒಲವೇ ಮಂದಾರ-2 ಚಲನಚಿತ್ರ ಸೆ. 22ರಂದು ಬಿಡುಗಡೆ

ಕಲಬುರಗಿ,ಸೆ.19: ಜಿಲ್ಲೆಯ ಸುತ್ತಮುತ್ತ ಚಿತ್ರೀಕರಣಗೊಂಡ ಒಲವೇ ಮಂದಾರ್- ಕನ್ನಡ ಚಲನಚಿತ್ರವು ಸೆಪ್ಟೆಂಬರ್ 22ರಂದು ಬಿಡುಗಡೆಯಾಗಲಿದೆ ಎಂದು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಲ್ಲಾಲಿಂಗ್ ಮುಕ್ತಿ, ಸತೀಶ್ ಹಾಗೂ ಜಿಲ್ಲೆಯವರಾದ ನಾಮದೇವ್ ರಾಠೋಡ್ ಅವರು ಚಲನಚಿತ್ರವನ್ನು ಅರ್ಥಪೂರ್ಣವಾಗಿ ನಿರ್ಮಿಸಿದ್ದಾರೆ. ಎಸ್.ಆರ್. ಪಾಟೀಲ್ ಅವರು ನಿರ್ದೇಶನ ಮಾಡಿದ್ದಾರೆ ಎಂದರು.
ಪ್ರೀತಿ, ಪ್ರೇಮ, ಸ್ನೇಹವನ್ನು ಒಳಗೊಂಡ ಸುಂದರವಾದ ಚಿತ್ರವಾಗಿದೆ. ಎಷ್ಟೋ ಕುಟುಂಬಗಳು ಪ್ರೀತಿ, ಪ್ರೇಮದಿಂದ ಹಾಳಾಗಿವೆ. ಎಷ್ಟೋ ಪ್ರಕರಣಗಳು ಆಗಿವೆ ಎಂದು ಹೇಳುತ್ತಾರೆ. ಆದಾಗ್ಯೂ, ಈ ಚಲನಚಿತ್ರದ ಮೂಲಕ ಯಾರು ಪ್ರೀತಿ, ಪ್ರೇಮ ಮಾಡುತ್ತಾರೋ ಅವರ ತಂದೆ, ತಾಯಿಗಳು ನೋಡುವ ದೃಷ್ಟಿಕೋನ ಬದಲಾಗಬೇಕು ಎಂಬ ಉದ್ದೇಶದಿಂದ ನಿರ್ಮಿಸಲಾಗಿದೆ. ಒಲವೇ ಮಂದಾರ-1 ಹಾಗೂ ಒಲವೇ ಮಂದಾರ-2 ಎರಡೂ ಬೇರೆ ಬೇರೆ ಚಲನಚಿತ್ರಗಳಾಗಿವೆ. ಅದಕ್ಕೂ, ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಅವರು ಹೇಳಿದರು.
ಬಹಳ ಅರ್ಥಪೂರ್ಣವಾಗಿರುವ ಚಲನಚಿತ್ರವನ್ನು ಆಸಕ್ತಿಯಿಂದ ನಿರ್ಮಾಣ ಮಾಡಿದ್ದಾರೆ. ಬಸವ ಕಂಬೈನ್ಸ್ ಬ್ಯಾನರ್‍ಡಿ ತಯಾರಾಗಿದೆ. ನಾಯಕ ನಟರಾಗಿ ಸನತ್, ನಾಯಕಿಯಾಗಿ ಅನುಪಾ ಪ್ರಜ್ಞಾ ಭಟ್ ಅವರು ಅಭಿನಯಿಸಿದ್ದಾರೆ. ಡಿಂಗ್ರಿ ನಾಗರಾಜ್, ಭವ್ಯ, ವಿಜಯಲಕ್ಷ್ಮೀ, ಬೆನಕ್, ನಾಗರಾಜ್ ಮಡೇನೂರು, ಮಂಜುಳಾರೆಡ್ಡಿ ಅವರೂ ಸಹ ನಟಿಸಿದ್ದಾರೆ. ಈ ಚಲನಚಿತ್ರವು ಶೇಕಡಾ 80ರಷ್ಟು ಜಿಲ್ಲೆಯಲ್ಲಿಯೇ ಚಿತ್ರೀಕರಣವಾಗಿದ್ದು ವಿಶೇಷವಾಗಿದೆ. ಈ ಭಾಗದಲ್ಲಿರುವವರೇ ಅಭಿನಯಿಸಿದ್ದಾರೆ. ಆದ್ದರಿಂದ ಬಹಳ ಆಸಕ್ತಿದಾಯಕ ಚಲನಚಿತ್ರವಾಗಿದೆ ಎಂದು ಅವರು ತಿಳಿಸಿದರು.
ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿ ಚಲನಚಿತ್ರ ನಿರ್ಮಾಣ ಮಾಡುವುದು ಒಂದು ಸವಾಲು. ಆದಾಗ್ಯೂ, ಚಲನಚಿತ್ರಗಳನ್ನು ಅತೀ ಹೆಚ್ಚು ವೀಕ್ಷಿಸುವವರು ಉತ್ತರ ಕರ್ನಾಟಕದವರು. ಆ ಹಿನ್ನೆಲೆಯಲ್ಲಿ ಈ ಭಾಗದಿಂದ ಚಲನಚಿತ್ರ ಮಾಡಲು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ್ ಮರಗೋಳ್, ಯಲ್ಲಾಲಿಂಗ್, ನಾಮದೇವ್ ರಾಠೋಡ್ ಅವರು ಮುಂದೆ ಬಂದು ಮಾಡಿದ್ದಾರೆ. ಇದು ನಮ್ಮದೇ ಚಲನಚಿತ್ರ, ನಮ್ಮ ಕುಟುಂಬದವರ ಚಲನಚಿತ್ರ ಎಂದು ಭಾವಿಸಿ ಚಿತ್ರವನ್ನು ನೋಡುವ ಮೂಲಕ ಹೆಚ್ಚು ಪ್ರೋತ್ಸಾಹ ಕೊಡಬೇಕು ಎಂದು ಅವರು ಕೋರಿದರು.
ಸುದ್ದಿಗೋಷ್ಠಿಯಲ್ಲಿ ನಾಯಕ ನಟ ಸನತ್, ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಮಹಾಂತೇಶ್ ಕೌಲಗಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ನಿತಿನ್ ಗುತ್ತೇದಾರ್, ರಮೇಶ್ ಮರಗೋಳ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವಾನಂದ್ ಪಾಟೀಲ್ ಮರಗುತ್ತಿ ಮುಂತಾದವರು ಉಪಸ್ಥಿತರಿದ್ದರು.