ಒಮ್ಮೆ ಅವಕಾಶ ನೀಡಿ , ಲೋಕಸಭೆಯಲ್ಲಿ ನಾನೂನಿಮ್ಮ ಧ್ವನಿಯಾಗುತ್ತೇನೆ : ಪ್ರಭಾ ಮಲ್ಲಿಕಾರ್ಜುನ್

ಸಂಜೆವಾಣಿ ವಾರ್ತೆ
ಚನ್ನಗಿರಿ.ಏ.೨೮ : ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ 4 ಬಾರಿ ಸತತವಾಗಿ ಒಬ್ಬರನ್ನೇ ಆಯ್ಕೆ ಮಾಡುತ್ತಾ ಬಂದಿದ್ದು, ನೀವು ಅವರನ್ನು ಗೆಲ್ಲಿಸಿದ್ದಕ್ಕೆ ಅವರಿಂದ ನಿಮಗೆ ಸಿಕ್ಕ ಕೊಡುಗೆ ಏನು ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್  ಪ್ರಶ್ನಿಸಿದರು. ಚನ್ನಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚನ್ನಗಿರಿ ತಾಲ್ಲೂಕಿನ ಅಗರಬನ್ನಿಹಟ್ಟಿ ಗ್ರಾಮದಿಂದ ಇಂದು ಪ್ರಚಾರ ಕಾರ್ಯ ಆರಂಭಿಸಿದ ಪ್ರಭಾ ಮಲ್ಲಿಕಾರ್ಜುನ್ ಅವರು ಮುದಿಗೆರೆ, ಹಿರೇಮಳಲಿ, ಚನ್ನೇಶಪುರ, ಜೋಳದಾಳ್, ಹರೋನಹಳ್ಳಿ, ಅಜ್ಜಿಹಳ್ಳಿ, ಹೊನ್ನೆಬಾಗಿ, ತಿಪ್ಪಗೊಂಡನಹಳ್ಳಿ, ರಾಜಗೊಂಡನಹಳ್ಳಿ, ಪಾಂಡೋಮಟ್ಟಿ, ಮರವಂಜಿ, ನೆಲ್ಲಿಹಂಕಲು, ತಾವರಕೆರೆ, ದುರ್ವಿಗೆರೆ, ಗುಪ್ಪೇನಹಳ್ಳಿ, ಮಲ್ಲಹಾಳ್, ಕಂಚಿಗಾನಾಳ್, ವಡ್ನಾಳ್, ಚನ್ನಗಿರಿ ಪುರಸಭಾ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿ ಮತದಾರರನ್ನುದ್ದೇಶಿಸಿ ಮಾತನಾಡಿದರು.ಕಳೆದ ಐದೂ ಬಾರಿಯೂ ಸಹ ಅವರೇ ಸಂಸದರಾಗಿದ್ದರೂ ಸಹ ಒಮ್ಮೆಯಾದರೂ ಸಹ ಅಡಿಕೆ ಬೆಳೆಗಾರರು ಸೇರಿದಂತೆ ಯಾವ ರೈತರ ಪರವಾಗಿಯೂ ಅವರು ಧ್ವನಿಯೆತ್ತಿಲ್ಲ. ಅಂತಹವರನ್ನು ಮತ್ತೆ ಆಯ್ಕೆ ಮಾಡುವ ಬದಲು ಲೋಕಸಭೆ ಒಳಗೂ-ಹೊರಗೂ ನಿಮ್ಮ ಧ್ವನಿಯಾಗಿ ಕೆಲಸ ಮಾಡುವ ನನ್ನನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.ಈ ಬಾರಿ ದೇಶದಲ್ಲಿ ಬದಲಾವಣೆ ಖಂಡಿತ ಆಗಲಿದ್ದು, ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಅಧಿಕಾರ ಹಿಡಿಯಲಿದ್ದೇವೆ. ನಮ್ಮ ಸರ್ಕಾರದಲ್ಲಿ ಅಡಿಕೆಗೆ ಸ್ಥಿರ ಬೆಲೆ ಕೊಡಿಸುವುದು, ಅಡಿಕೆ ಸಂಸ್ಕರಣಾ ಘಟಕ ಆರಂಭಿಸುವುದು ಸೇರಿದಂತೆ ಅಡಿಕೆಗೆ ಪೂರಕವಾದ ವಾತಾವರಣ ನಿರ್ಮಿಸುವುದರ ಜೊತೆಗೆ ರೈತರಿಗೆ ಕನಿಷ್ಠ ಬೆಂಬಲ ನೀಡುತ್ತೇವೆ ಎಂದರು.ಮಾಜಿ ಶಾಸಕರಾದ ವಡ್ನಾಳ್ ರಾಜಣ್ಣ ಮಾತನಾಡಿ 50 ವರ್ಷ ಕಾಂಗ್ರೆಸ್ ಆಡಳಿತ ಇದ್ದಾಗ ದೇಶದ ಸಾಲ 65 ಲಕ್ಷ ಕೋಟಿ ಈಗ ದೇಶದ ಸಾಲ 205 ಲಕ್ಷ ಕೋಟಿ ಆಗಿದ್ದು, ಹತ್ತು ವರ್ಷದಲ್ಲಿ 140 ಲಕ್ಷ ಕೋಟಿ ಸಾಲ ಮಾಡಿರುವ ಬಿಜೆಪಿ ಮತ್ತು ಮೋದಿ ಸರ್ಕಾರದ ಸಾಧನೆ ಎಂದು ವ್ಯಂಗ್ಯವಾಡಿದರು.ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರಾದ ಜಬಿವುಲ್ಲಾ, ಶ್ರೀನಿವಾಸ್, ಪಕ್ಷದ ಮುಖಂಡರಾದ ಹೊದಿಗೆರೆ ರಮೇಶ್, ವೀರೇಶ್ ನಾಯ್ಕ, ವಡ್ನಾಳ್ ಜಗದೀಶ್, ಅಮಾನುಲ್ಲಾ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.