ಒಮೆನ್ ದೊರೆಗೆ ಗಾಂಧಿ ಶಾಂತಿ ಪುರಸ್ಕಾರ

ನವದೆಹಲಿ, ಮಾ.22- 2019ನೇ ಸಾಲಿನ ಗಾಂಧಿ ಶಾಂತಿ ಪುರಸ್ಕಾರ ಓಮನ್‍ನ ದೊರೆ ದಿವಂಗತ ಕಾಬೂಸ್ ಬಿನ್ ಸೈಯದ್ ಅಲ್ ಸೈಯದ್ ಅವರಿಗೆ ಪ್ರದಾನ ಮಾಡಲು ನಿರ್ಧರಿಸಲಾಗಿದೆ.

ಪ್ರಶಸ್ತಿಯು 1 ಕೋಟಿ ರೂಪಾಯಿ ನಗದು ಫಲಕ ಸೇರಿದಂತೆ ಇನ್ನಿತರ ಸಾಂಪ್ರದಾಯಿಕ ಕರಕುಶಲ ಪ್ರತಿಮೆಯನ್ನು ಹೊಂದಿದೆ.

ಮಹಾತ್ಮಾಗಾಂಧಿಯವರ 125ನೇ ವರ್ಷಾಚರಣೆ ಸಂದರ್ಭದಲ್ಲಿ 1995ರಿಂದ ಕೇಂದ್ರ ಸರ್ಕಾರ ವಾರ್ಷಿಕವಾಗಿ ಗಾಂಧಿ ಶಾಂತಿ ಪುರಸ್ಕಾರವನ್ನು ಪ್ರದಾನ ಮಾಡಲಾಗುತ್ತಿದೆ.

ಯಾವುದೇ ದೇಶ, ಭಾಷೆ, ಜಾತಿ, ಧರ್ಮ, ಪಂಥ, ಲಿಂಗ ಪರಿಗಣಿಸದೆ ಸೇವೆಯನ್ನು ಆಧಾರವಾಗಿಟ್ಟುಕೊಂಡು ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಗಾಂಧಿ ಶಾಂತಿ ಪುರಸ್ಕಾರ ಸಮಿತಿಯ ಜೂರಿಗಳಾದ ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಹಾಗೂ ಲೋಕಸಭೆಯಲ್ಲಿನ ದೊಡ್ಡ ಪಕ್ಷದ ನಾಯಕ, ಸಂಸ್ಕøತಿ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ 2019ನೇ ಸಾಲಿನ ಪ್ರಶಸ್ತಿಗೆ ದೊರೆ ಕಾಬೂಸ್ ಬಿನ್ ಸೈಯದ್ ಅಲ್ ಸೈಯದ್ ಅವರನ್ನು ಆಯ್ಕೆ ಮಾಡಲಾಗಿದೆ.

ಸಾಮಾಜಿಕ, ಆರ್ಥಿಕ, ರಾಜಕೀಯ ಪರಿವರ್ತನೆ, ಅಹಿಂಸೆ ಮತ್ತು ಗಾಂಧಿ ತತ್ವಗಳನ್ನು ಪಾಲಿಸಿಕೊಂಡು ಬಂದವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ದೊರೆ ಕಾಬೂಸ್ ಆಧುನೀಕರಣ ಮತ್ತು ಆಧ್ಯಾತ್ಮಿಕತೆಗೆ ಹೆಚ್ಚಿನ ಒತ್ತು ನೀಡಿದ್ದರು. ಜೊತೆಗೆ ಜಗತ್ತಿನಲ್ಲಿ ಶಾಂತಿ ಕಾಪಾಡಲು ಪ್ರಮುಖ ಪಾತ್ರ ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಪ್ರಶಸ್ತಿ ನೀಡಲಾಗಿದೆ.

ಪ್ರಶಸ್ತಿ ನೀಡುವ ದಿನಾಂಕ ಮತ್ತು ಸಮಯವನ್ನು ಶೀಘ್ರದಲ್ಲೇ ನಿಗದಿ ಪಡಿಸಲು ನಿರ್ಧರಿಸಲಾಗಿದೆ