ಒಮಿಕ್ರೋನ್: ಕಟ್ಟೆಚ್ಚರ ವಹಿಸಲು ಸಚಿವ ಪ್ರಭು ಚವ್ಹಾಣ್ ಸೂಚನೆ

ಬೀದರ, ನ.30: ವಿದೇಶದಲ್ಲಿ ರೂಪಾಂತರಿತ ಕೊರೋನಾ ವೈರಸ್ ಒಮಿಕ್ರೋನ್ ಪತ್ತೆಯಾಗಿರುವುದು ಮತ್ತು ಕೋವಿಡ್ 3ನೇ ಅಲೆಯ ಆತಂಕದ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿ ಭಾಗಗಳಲ್ಲಿ ಇನ್ನಷ್ಟು ಕಟ್ಟೆಚ್ಚರ ವಹಿಸುವಂತೆ ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕೇರಳದಲ್ಲಿ ಹೊಸ ರೂಪಾಂತರಿ ವೈರಸ್ ಪತ್ತೆಯಾಗಿರುವುದರಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಬಗ್ಗೆ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅದರಂತೆ ತೆಲಂಗಾಣಾ ಹಾಗೂ ಮಹಾರಾಷ್ಟ್ರ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿರುವ ಬೀದರ ಜಿಲ್ಲೆಯಲ್ಲಿ ಸೋಂಕು ಹರಡದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

ಕೆಲವು ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿಯಲ್ಲಿರುವ ಚೆಕ್‍ಪೋಸ್ಟ್‍ಗಳು ದಿನದ 24 ಗಂಟೆಯೂ ಈ ಹಿಂದಿನಂತೆ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು. ಹೊರ ರಾಜ್ಯಗಳಿಂದ ಬೀದರ ಜಿಲ್ಲೆಗೆ ಬರುವ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಬೇಕು. ಕೋವಿಡ್ ಪರೀಕ್ಷೆಯ ವರದಿಯನ್ನು ವೀಕ್ಷಿಸಿಯೇ ಜಿಲ್ಲೆಯ ಪ್ರವೇಶಕ್ಕೆ ಅವಕಾಶ ನೀಡಬೇಕು. ಸೋಂಕು ನಿಯಂತ್ರಣಕ್ಕೆ ಸರ್ಕಾರದ ಎಲ್ಲಾ ಮಾರ್ಗಸೂಚಿಗಳು ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನೋಡಿಕೊಳ್ಳಬೇಕು ಎಂದು ಸಚಿವರು ಸೂಚಿಸಿದ್ದಾರೆ.

ಈ ಹಿಂದೆ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಅನೇಕ ಇಲಾಖೆಗಳು ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿವೆ. ಸಂಭವನೀಯ ಕೋವಿಡ್ 3ನೇ ಅಲೆಯನ್ನು ಯಶಸ್ವಿಯಾಗಿ ತಡೆಯಲು ಹಿಂದಿನಂತೆ ಕೆಲಸ ನಿರ್ವಹಿಸಬೇಕು. ಕೋವಿಡ್ ಲಸಿಕಾಕರಣದ ಪ್ರಮಾಣ ಶೇ.100ರಷ್ಟು ಸಾಧಿಸಲು ಮುಂದಾಗಬೇಕು ಎಂದು ತಿಳಿದ್ದಾರೆ.

ಇನ್ನೂ ಲಸಿಕೆ ಪಡೆಯದವರು ಕೂಡಲೇ ಸ್ವಯಂ ಪ್ರೇರಿತವಾಗಿ ಲಸಿಕೆ ಪಡೆಯಬೇಕು. ಹಳ್ಳಿ ಪ್ರದೇಶಗಳಲ್ಲಿ ಲಸಿಕೆಯ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸಬೇಕು. ವೈದ್ಯಕೀಯ ಸಿಬ್ಬಂದಿ ಮನೆ-ಮನೆಗೆ ತೆರಳಿ ಲಸಿಕೆ ನೀಡಬೇಕು ಎಂದು ಸಚಿವರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.