ಒಮಿಕ್ರಾನ್ ಸೋಂಕಿತ ವೈದ್ಯರ ಮನೆ ಸೀಲ್‌ಡೌನ್

ಬೆಂಗಳೂರು, ಡಿ.೩- ರಾಜಧಾನಿ ಬೆಂಗಳೂರಿನಲ್ಲಿ ಓಮಿಕ್ರಾನ್ ಸೋಂಕು ದೃಢಪಟ್ಟ ವ್ಯಕ್ತಿಯ ಮನೆ ಹಾಗೂ ರಸ್ತೆಯನ್ನು ಸೀಲ್ ಡೌನ್ ಮಾಡಿರುವ ಬಿಬಿಎಂಪಿ ಅಧಿಕಾರಿಗಳು, ಅಕ್ಕ ಪಕ್ಕದ ೩೦ಕ್ಕೂ ಅಧಿಕ ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ.
ನಗರದ ಆರ್‌ಬಿಐ ಲೇಔಟ್ ನಿವಾಸಿ ಆಗಿರುವ ವೈದ್ಯನ ಮನೆ ಒಳಗೊಂಡಂತೆ ೧೦೦ ಮೀಟರ್ ರಸ್ತೆ ಸೀಲ್ ಡೌನ್ ಮಾಡಿರುವ ಬಿಬಿಎಂಪಿ, ಬ್ಯಾರಿಕೇಡ್, ರೆಡ್ ಟೇಪ್ ಹಾಕಿ ನಿಗಾವಹಿಸಿದೆ.
ಇನ್ನೂ, ಸೋಂಕಿತ ವೈದ್ಯರ ಮನೆಗೆ ನಿರ್ಬಂಧಿತ ಪ್ರದೇಶ ಎಂದು ಬ್ಯಾನರ್ ಹಾಕಿದ್ದು, ಯಾರು ಪ್ರವೇಶ ಮಾಡದಂತೆ ನೋಡಿಕೊಳ್ಳಲು ಭದ್ರತಾ ಸಿಬ್ಬಂದಿ ಅನ್ನು ನಿಯೋಜಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ಆರೋಗ್ಯಾಧಿಕಾರಿ, ಒಮಿಕ್ರಾನ್ ಸೋಂಕಿತ ವೈದ್ಯರ ಮನೆಯಲ್ಲಿ ಒಟ್ಟು ೧೦ ಮಂದಿ ವಾಸವಿದ್ದಾರೆ. ಸದ್ಯ ೮ ಮಂದಿಯ ವರದಿ ಕೋವಿಡ್ ನೆಗೆಟಿವ್ ಆಗಿದೆ. ಹೀಗಾಗಿ ೮ ಮಂದಿಯನ್ನು ಹೋಮ್ ಐಸೋಲೇಷನ್‌ನಲ್ಲಿ ಇರಿಸಲಾಗಿದೆ ಎಂದರು.
ಇನ್ನೂ, ವೈದ್ಯರ ಮನೆಯನ್ನ ಕಂಟೈನ್ಮೆಂಟ್ ಜೋನ್ ಎಂದು ಘೋಷಿಸಿ ಸೀಲ್ ಮಾಡಲಾಗಿದ್ದು, ಸಾರ್ವಜನಿಕರು ಮಾಸ್ಕ್, ಸಾಮಾಜಿಕ ಅಂತರ ಕಾಪಾಡುವತ್ತ ಗಮನ ಹರಿಸಬೇಕು ಎಂದು ಮನವಿ ಮಾಡಿದರು.