ಒಮಿಕ್ರಾನ್ ಆತಂಕ : ಶಾಲಾ, ಕಾಲೇಜು – ಸ್ಯಾನಿಟೈಜೇಷನ್ ಪ್ರಕ್ರಿಯೆ

ರಾಯಚೂರು.ಡಿ.೦೪- ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶಾಲಾ, ಕಾಲೇಜುಗಳಲ್ಲಿ ಕೊರೊನಾ ತೀವ್ರಗೊಂಡಿದ್ದರಿಂದ ಜಿಲ್ಲಾಧಿಕಾರಿಗಳ ಆದೇಶ ಮೇರೆಗೆ ನಗರಸಭೆ ನಗರದ ಶಾಲಾ, ಕಾಲೇಜುಗಳ ಸ್ಯಾನಿಟೈಜೇಷನ್ ತೀವ್ರಗೊಳಿಸಲಾಗಿದೆ.
ನಗರಸಭೆಯಿಂದ ಇಂದು ಬಹುತೇಕ ಶಾಲಾ, ಕಾಲೇಜುಗಳಿಗೆ ಸ್ಯಾನಿಟೈಜ್ ಪ್ರಕ್ರಿಯೆ ನಿರ್ವಹಿಸಲಾಯಿತು. ರಾಜ್ಯದ ವಿವಿಧೆಡೆ ಅನೇಕ ಶಾಲಾ, ಕಾಲೇಜುಗಳಲ್ಲಿ ಮಕ್ಕಳಿಗೆ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನಗರದಲ್ಲಿ ಸ್ಯಾನಿಟೈಜ್ ಪ್ರಕ್ರಿಯೆ ಕೈಗೊಳ್ಳಲಾಯಿತು. ನಗರಸಭೆಯ ಸಿಬ್ಬಂದಿ ಸ್ಯಾನಿಟೈಜ್ ಮೂಲಕ ಶಾಲೆಗಳ ಎಲ್ಲಾ ಆವರಣಗಳಲ್ಲಿ ರಾಸಾಯನ ಸಿಂಪಡಿಸುವ ಕಾರ್ಯ ನಡೆಸಲಾಯಿತು. ಒಮಿಕ್ರಾನ್ ಭೀತಿ ಜಾಗತೀಕ ಮಟ್ಟದಲ್ಲಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಸೋಂಕು ಹರಡದಂತೆ ಮತ್ತು ವಿಶೇಷವಾಗಿ ಒಂದೆಡೆ ಸೇರುವ ವಿದ್ಯಾರ್ಥಿಗಳನ್ನು ಕೊರೊನಾ ಮುಕ್ತಗೊಳಿಸಲು ಎಲ್ಲಾ ಶಾಲಾ, ಕಾಲೇಜುಗಳನ್ನು ಕೇಂದ್ರೀಕೃತವಾಗಿ ಸ್ಯಾನಿಟೈಜ್ ಮಾಡಲಾಯಿತು.
ಜಿಲ್ಲೆಯಲ್ಲಿ ಇಲ್ಲಿವರೆಗೂ ಯಾವುದೇ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ. ಶಾಲಾ, ಕಾಲೇಜುಗಳಲ್ಲೂ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. ಆದರೆ, ಗಡಿ ಜಿಲ್ಲೆಯಾಗಿದ್ದರಿಂದ ಒಮಿಕ್ರಾನ್ ಮತ್ತು ಕೊರೊನಾದ ಸೋಂಕು ಹರಡುವ ಸಾಧ್ಯತೆಗಳಿರುವುದರಿಂದ ಶಾಲಾ, ಕಾಲೇಜುಗಳು ಈ ಸೋಂಕು ಹರಡುವಿಕೆಗೆ ಕೇಂದ್ರವಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಸ್ಯಾನಿಟೈಜೇಷನ್‌ಗೆ ವಿಶೇಷ ಆದ್ಯತೆ ನೀಡಲಾಯಿತು. ನಗರಸಭೆ ಆಯುಕ್ತರಾದ ಕೆ.ಮುನಿಸ್ವಾಮಿ ಅವರ ನಿಗಾದಲ್ಲಿ ಶಾಲಾ, ಕಾಲೇಜುಗಳ ಪ್ರಕ್ರಿಯೆ ನಿರ್ವಹಿಸಲಾಯಿತು.
ಯಾವವ ಶಾಲಾ, ಕಾಲೇಜುಗಳಲ್ಲಿ ಸ್ಯಾನಿಟೈಜ್ ಪ್ರಕ್ರಿಯೆ ಪೂರ್ಣಗೊಂಡಿದೆ ಎನ್ನುವ ಮಾಹಿತಿಯನ್ನು ಫೋಟೋ ಸಹಿತವಾಗಿ ವಾಟ್ಸಾಪ್‌ಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಒಮಿಕ್ರಾನ್ ಸೋಂಕಿನ ಭೀತಿಯ ನಂತರ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದೆ. ಶಾಲಾ, ಕಾಲೇಜು ಸ್ಯಾನಿಟೈಜೇಷನ್ ಕೇವಲ ನಗರಕ್ಕೆ ಸೀಮಿತವಾಗಿದೆಯೇ ಅಥವಾ ಎಲ್ಲೆಡೆ ಇದನ್ನು ವಿಸ್ತರಿಸಲಾಗಿದೆಯೇ ಎನ್ನುವುದು ಈಗ ಗಮನಾರ್ಹ ಸಂಗತಿಯಾಗಿದೆ.