ಒಮಿಕ್ರಾನ್ ಆತಂಕ ಬೇಡ ; ಸುಧಾಕರ್


ಬೆಂಗಳೂರು, ಡಿ. ೬- ರಾಜ್ಯದಲ್ಲಿ ಒಮಿಕ್ರಾನ್‌ನ ೨ ಪ್ರಕರಣಗಳು ಮಾತ್ರ ಪತ್ತೆಯಾಗಿವೆ. ಇನ್ನೂ ೫ ಜನರ ವರದಿ ಬರಬೇಕಿದೆ ಎಂದಿರುವ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಒಮಿಕ್ರಾನ್ ವೈರಸ್‌ನ ಹರಡುವಿಕೆ ಹೆಚ್ಚಿದೆ ಆದರೆ ಪರಿಣಾಮದ ತೀವ್ರತೆ ಕಡಿಮೆ ಇದೆ. ಜನ ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಸಾಂಕ್ರಾಮಿಕ ರೋಗ ಬಂದಾಗ ಮೊದಲ ಅಲೆ ಮತ್ತು ಎರಡನೇ ಅಲೆ ತೀವ್ರವಾಗಿರುತ್ತದೆ. ನಂತರ ಬರುವ ೩ ಮತ್ತು ೪ನೇ ಅಲೆಗಳ ತೀವ್ರತೆ ಕಡಿಮೆ ಇರುತ್ತದೆ. ಹೀಗಾಗಿ ಯಾರೂ ಆತಂಕಪಡುವ ಅಗತ್ಯವಿಲ್ಲ. ಮುನ್ನೆಚ್ಚರಿಕೆ ವಹಿಸಿದರೆ ೩ನೇ ಅಲೆಯನ್ನು ತಡೆಯಬಹುದು ಎಂದರು.
ಜನವರಿಯಲ್ಲಿ ೩ನೇ ಅಲೆ ಬರಬಹುದು ಎಂಬ ತಜ್ಞರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಮೊದಲನೇ ಅಲೆ ಮತ್ತು ೨ನೇ ಅಲೆಯ ಡೆಲ್ಟಾವನ್ನು ಸಮರ್ಥವಾಗಿ ಎದುರಿಸಿದ್ದೇವೆ. ೩ನೇ ಅಲೆಯನ್ನು ತಡೆಯಲು ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ. ಯಾವುದೇ ಭಯ ಬೇಡ. ಜನ ಸಹ ಮಾಸ್ಕ್ ಧರಿಸಿ, ಲಸಿಕೆ ಹಾಕಿಸಿಕೊಂಡರೆ ಎಲ್ಲವನ್ನು ತಡೆಗಟ್ಟಬಹುದು ಎಂದರು.
ರಾಜ್ಯದಲ್ಲಿ ಒಮಿಕ್ರಾನ್ ವೈರಸ್ ಇಬ್ಬರಲ್ಲಿ ಮಾತ್ರ ಪತ್ತೆಯಾಗಿದೆ. ಇನ್ನೂ ೫ ಜನರ ಜಿನೋಮಿಕ್ ವರದಿ ಬಂದಿಲ್ಲ ಎಂದರು.
ಎಲ್ಲರೂ ೨ ಡೋಸ್ ಲಸಿಕೆ ಹಾಕಿಸಿಕೊಂಡರೆ ಒಳ್ಳೆಯದು. ಈಗ ಬೇರೆ ರಾಜ್ಯದಲ್ಲೂ ಒಮಿಕ್ರಾನ್ ಪತ್ತೆಯಾಗುತ್ತಿದೆ. ಒಮಿಕ್ರಾನ್ ವೈರಸ್‌ನ ಹರಡುವಿಕೆ ಹೆಚ್ಚಿದೆ. ಆದರೆ ಪರಿಣಾಮ ಕಡಿಮೆ ಇದೆ ಎಂದರು.
ಒಮಿಕ್ರಾನ್ ವೈರಸ್‌ನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರದಿಂದ ಯಾವುದೇ ಮಾರ್ಗಸೂಚಿಗಳು ಬಂದಿಲ್ಲ. ಕೇಂದ್ರ ಸರ್ಕಾರ ಒಮಿಕ್ರಾನ್ ವೈರಸ್ ಬಗ್ಗೆ ಅಧ್ಯಯನ ಮಾಡುತ್ತಿದೆ. ಅಧ್ಯಯನ ವರದಿ ಬಂದ ನಂತರ ಕೇಂದ್ರ ಕ್ರಮ ಕೈಗೊಳ್ಳತ್ತದೆ ಎಂದರು.
ವಿದೇಶಗಳಲ್ಲಿ ಒಮಿಕ್ರಾನ್ ವೈರಸ್ ಹಾವಳಿ ಹೆಚ್ಚಿರುವುದು ಕೇಂದ್ರದ ಗಮನದಲ್ಲಿದೆ. ಅಂತಾರಾಷ್ಟ್ರೀಯ ವಿಮಾನ ಹಾರಾಟವನ್ನು ಸ್ಥಗಿತಗೊಳಿಸುವ ಬಗ್ಗೆಯೂ ಕೇಂದ್ರ ಸರ್ಕಾರವೇ ನಿರ್ಧಾರ ಕೈಗೊಳ್ಳುತ್ತದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಒಮಿಕ್ರಾನ್ ಸಂಪರ್ಕಿತರಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಸಂಪರ್ಕಿತರು ೨ ಡೋಸ್ ಲಸಿಕೆ ತೆಗೆದುಕೊಂಡಿರುವುದರಿಂದ ಪರಿಣಾಮಗಳು ಕಡಿಮೆಯಾಗಿವೆ. ಹಾಗಾಗಿ ಎಲ್ಲರೂ ಲಸಿಕೆ ಪಡೆಯುವುದು ಸೂಕ್ತ ಎಂದು ಅವರು ಹೇಳಿದರು.