ಒಮಿಕ್ರಾನ್;ನಾಳೆ ಮಾರ್ಗಸೂಚಿ

ಬೆಂಗಳೂರು,ಡಿ.೮- ರಾಜ್ಯದಲ್ಲಿ ಕೊರೊನಾ ಹೊಸ ರೂಪಾಂತರಿ ತಳಿ ಒಮಿಕ್ರಾನ್ ತಡೆಗೆ ನಾಳೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನ ತಮ್ಮ ಆರ್‌ಟಿ ನಗರದ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ರೂಪಾಂತರಿ ಒಮಿಕ್ರಾನ್ ತಡೆಗೆ ಹಾಗೂ ಕ್ಲಸ್ಟರ್‌ಗೆ ಹೊಸ ಮಾರ್ಗಸೂಚಿ ರೂಪಿಸಲಾಗುವುದು, ನಾಳೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಹೊಸ ಮಾರ್ಗಸೂಚಿ ಬಗ್ಗೆ ಚರ್ಚೆ ನಡೆಸಿ ಬಳಿಕ ಅಧಿಕಾರಿಗಳು ಮತ್ತು ತಜ್ಞರ ಜತೆಯೂ ಚರ್ಚಿಸಿ ರಾಜ್ಯಕ್ಕೆ ಪ್ರತ್ಯೇಕವಾದ ಹೊಸ ಮಾರ್ಗಸೂಚಿಗಳನ್ನು ಹೊರಡಿಸುವುದಾಗಿ ಅವರು ಹೇಳಿದರು.
ಶಾಲೆಗಳಿಗೆ ಸಂಬಂಧಿಸಿದಂತೆಯೂ ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸುವುದಾಗಿ ಅವರು ಹೇಳಿದ್ದಾರೆ.
ಕೆಲವು ಜಿಲ್ಲೆಗಳಲ್ಲಿ ಮಾತ್ರ ಒಮಿಕ್ರಾನ್ ಕಾಣಿಸಿಕೊಂಡಿದೆ. ಇನ್ನೂ ಕೆಲ ಜಿಲ್ಲೆಗಳಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಹೀಗಾಗಿ, ಮಾರ್ಗಸೂಚಿಗಳನ್ನು ತಂದರೆ ಇಡೀ ರಾಜ್ಯಕ್ಕೆ ತರಬೇಕಾಗುತ್ತಿದೆ. ಕೇಂದ್ರ ಸರ್ಕಾರವು ಕೆಲ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇವೆಲ್ಲವನ್ನೂ ಪರಾಮರ್ಶಿಸಿ ಮುಂದಿನ ದಿನಗಳಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಮಾರ್ಗಸೂಚಿ ಹೊರಡಿಸುತ್ತೇವೆ ಎಂದರು.
ಹೊಸ ಮಾರ್ಗಸೂಚಿಗಳ ಬಗ್ಗೆ ನಾಳೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಸಂಪುಟ ಸಭೆಯ ಬಳಿಕ ತಜ್ಞರು ಹಾಗೂ ಅಧಿಕಾರಿಗಳ ಜತೆ ಚರ್ಚಿಸಿ ಎಲ್ಲವನ್ನೂ ಅಂತಿಮಗೊಳಿಸುವುದಾಗಿ ಅವರು ಹೇಳಿದರು.
ಶಾಲಾ-ಕಾಲೇಜುಗಳ ವಿದ್ಯಾರ್ಥಿ ನಿಲಯಗಳಿಗೂ ಪ್ರತ್ಯೇಕ ಮಾರ್ಗಸೂಚಿಗಳನ್ನು ನಾಳೆ ಪ್ರಕಟಿಸುತ್ತೇವೆ. ಯಾರೂ ಆತಂಕ ಪಡುವ ಪರಿಸ್ಥಿತಿಯೂ ಇಲ್ಲ, ಅದರ ಅಗತ್ಯವೂ ಇಲ್ಲ ಎಂದರು. ಶಾಲೆಗಳಲ್ಲಿ ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿ ಸ್ವಚ್ಛತೆಗೆ ಗಮನ ನೀಡಿ, ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಿದ್ದೇನೆ.
ಪೋಷಕರು ಮತ್ತು ಶಿಕ್ಷಕರಿಗೆ ೨ ಡೋಸ್ ಲಸಿಕೆ ಆಗಿರಬೇಕು ಎಂದು ಅವರು ಹೇಳಿದರು.
ಇಂದು ಅಧಿಕಾರಿಗಳ ಜತೆ ಅನೌಪಚಾರಿಕವಾಗಿ ಸಭೆ ನಡೆಸಿ ನವೆಂಬರ್ ತಿಂಗಳ ಕೋವಿಡ್ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆಯಲು ನಾಳೆ ಸಚಿವ ಸಂಪುಟ ಸಭೆಯಲ್ಲಿ ಈ ಮಾಹಿತಿಗಳನ್ನಿಟ್ಟು ಚರ್ಚಿಸಿ ಮಾರ್ಗಸೂಚಿಗಳ ಬಗ್ಗೆ ತೀರ್ಮಾನ ಮಾಡುತ್ತೇನೆ. ಇಂದಿನ ಸಭೆಯಲ್ಲಿ ವಸತಿ ಶಾಲೆಗಳ ಕೋವಿಡ್ ಪರಿಸ್ಥಿತಿಯ ಬಗ್ಗೆ ವಿವರಗಳನ್ನು ಪಡೆಯುವುದಾಗಿ ಅವರು ಹೇಳಿದರು.
ಬೂಸ್ಟರ್ ಡೋಸ್ ಕೇಂದ್ರ ತೀರ್ಮಾನ
ಕೊರೊನಾ ರೂಪಾಂತರಿ ಒಮಿಕ್ರಾನ್ ತಡೆಯಲು ಬೂಸ್ಟರ್ ಡೋಸ್ ನೀಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರ ಈ ಬಗ್ಗೆ ಪರಿಶೀಲನೆ ನಡೆಸಿದೆ. ತಜ್ಞರ ಜತೆ ಚರ್ಚೆ ಮಾಡಿ ಬೂಸ್ಟರ್ ಡೋಸ್ ನೀಡುವ ಬಗ್ಗೆ ತಿಳಿಸುವುದಾಗಿ ಕೇಂದ್ರದ ಆರೋಗ್ಯ ಸಚಿವ ಮನ್ಸುಕ್ ಮಾಂಡವಿಯಾ ಹೇಳಿದ್ದಾರೆ. ಹಾಗಾಗಿ, ಕೇಂದ್ರದ ತೀರ್ಮಾನಕ್ಕಾಗಿ ನಾವೂ ಕೂಡ ಕಾಯುತ್ತಿದ್ದೇವೆ ಎಂದರು.

ಹೊಸ ವರ್ಷಾಚರಣೆ ತೀರ್ಮಾನ ಇಲ್ಲ
ಕ್ರಿಸ್‌ಮಸ್ ಹೊಸ ವರ್ಷಾಚರಣೆ ನಿಬಂಧ, ನೈಟ್ ಕರ್ಫ್ಯೂ, ಸೆಮಿ ಲಾಕ್‌ಡೌನ್ ಯಾವುದರ ಬಗ್ಗೆಯೂ ಸದ್ಯ ಯಾವುದೇ ತೀರ್ಮಾನಗಳನ್ನು ಸರ್ಕಾರ ಕೈಗೊಂಡಿಲ್ಲ. ಮುಂದೆ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹೊಸ ವರ್ಷ ಹಾಗೂ ಕ್ರಿಸ್‌ಮಸ್ ಆಚರಣೆ ಸರ್ಕಾರದ ಗಮನದಲ್ಲಿದೆ. ಇದಕ್ಕೆ ನಿರ್ಬಂಧ ಹೇರುವ ಬಗ್ಗೆ ಯಾವುದೇ ತೀರ್ಮಾನಗಳು ಆಗಿಲ್ಲ. ಮುಂದಿನ ದಿನಗಳಲ್ಲಿ ಸೂಕ್ತ ತೀರ್ಮಾನ ಮಾಡುತ್ತೇವೆ ಎಂದರು.
ನೈಟ್ ಕರ್ಫ್ಯೂ, ಸೆಮಿ ಲಾಕ್‌ಡೌನ್ ಜಾರಿ ಬಗ್ಗೆಯೂ ಯಾವುದೇ ಚಿಂತನೆ ಮಾಡಿಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.