ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.25: ಒಬ್ಬರ ರಕ್ತದಾನದಿಂದ ಮೂರು ಜನರ ಅಮೂಲ್ಯ ಜೀವ ಉಳಿಸಬಹುದಾಗಿದ್ದು ಸ್ವಯಂ ಪ್ರೇರಿತ ರಕ್ತದಾನವು ಶ್ರೇಷ್ಠ ಕಾರ್ಯವಾಗಿದೆ ಎಂದು ಬಾಪೂಜಿ ಆಸ್ಪತ್ರೆಯ ಮೆಡಿಕಲ್ ನಿರ್ದೇಶಕ ಡಾ. ಡಿ ಎಸ್ ಕುಮಾರ್ ಹೇಳಿದರು. ಬಾಪೂಜಿ ಅಕಾಡೆಮಿ ಆಫ್ ಮ್ಯಾನೇಜ್ಮೆಂಟ್ ರಿಸರ್ಚ್ ಹಾಗೂ ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಶನ್ ವತಿಯಿಂದ ಎಸ್ ಎಸ್ ಕೇರ್ ಟ್ರಸ್ಟ್, ಜೆ ಜೆ ಎಂ ಮೆಡಿಕಲ್ ಕಾಲೇಜು, ರಾಷ್ಟ್ರೀಯ ಸೇವಾಯೋಜನೆ,ಭಾರತೀಯ ಯುವರಾಜ್ ಕ್ರಾಸ್ ಸಹಯೋಗದಲ್ಲಿ ಎಸ್ ಎಸ್ ಮಲ್ಲಿಕಾರ್ಜುನ್ ರ 55ನೇ ಹುಟ್ಟು ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ ದಾವಣಗೆರೆ ನಗರದಲ್ಲಿ ಪ್ರತಿನಿತ್ಯ ಕನಿಷ್ಠ 30 ಯೂನಿಟ್ ಗಳಷ್ಟು ರಕ್ತ ಬೇಕಾಗುತ್ತಿದ್ದು ಈ ರೀತಿಯ ಶಿಬಿರಗಳು ನಡೆದಾಗ ಕೊರತೆಯಾಗುವುದಿಲ್ಲ, ಪ್ರತಿ ಯೂನಿಟ್ ರಕ್ತ ಸಂಗ್ರಹಣೆಗೂ ಕನಿಷ್ಠ 800 ರೂಪಾಯಿ ವೆಚ್ಚವಾಗುತ್ತದೆ ಎಂದರು. ಸಚಿವ ಎಸ್ ಎಸ್ ಮಲ್ಲಿಕಾರ್ಜುನರ ಹುಟ್ಟು ಹಬ್ಬದ ಅಂಗವಾಗಿ 5,555 ಯೂನಿಟ್ ಗಳಷ್ಟು ರಕ್ತ ಸಂಗ್ರಹಣೆ ಗುರಿ ಇದ್ದು ಗುರಿ ಇದ್ದು ಈಗಾಗಲೇ 2,000 ಯೂನಿಟ್ ಗಳಷ್ಟು ಸಂಗ್ರಹವಾಗಿದೆ ಎಂದರು. ಜೆ ಜೆ ಎಂ ಮೆಡಿಕಲ್ ಕಾಲೇಜಿನ ಡಾ. ಶುಕ್ಲಾ ಎಸ್. ಶೆಟ್ಟಿ ಮಾತನಾಡಿ ರಕ್ತದಾನ ಮಾಡಿದವರಿಗೆ ಪ್ರಮಾಣ ಪತ್ರ ನೀಡಲಾಗುತ್ತಿದ್ದು ಮುಂದೆ ದಾನಿಗಳಿಗಾಗಲಿ ಅವರ ಕುಟುಂಬದ ಸದಸ್ಯರಿಗಾಗಲಿ ರಕ್ತದ ಅವಶ್ಯಕತೆ ಬಂದಾಗ ದಾನ ಮಾಡಿದಷ್ಟೇ ಪ್ರಮಾಣದ ರಕ್ತವು ಉಚಿತವಾಗಿ ಲಭ್ಯವಾಗುತ್ತದೆ ಎಂದರು. ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಶನ್ ನ ಪ್ರಾಂಶುಪಾಲ ಡಾ. ಬಿ ವೀರಪ್ಪ, ಬಾಪೂಜಿ ಅಕಾಡೆಮಿ ಆಫ್ ಮ್ಯಾನೇಜ್ಮೆಂಟ್ ಮತ್ತು ರಿಸರ್ಚ್ ನ ನಿರ್ದೇಶಕ ಡಾ.ಸ್ವಾಮಿ ತ್ರಿಭುವನಾನಂದ, ಪ್ರಾಚಾರ್ಯ ಡಾ.ನವೀನ್ ನಾಗರಾಜ್, ವಿಭಾಗ ಮುಖ್ಯಸ್ಥ ಡಾ.ಸುಜಿತ್ ಕುಮಾರ್, ಡಾ.ಶ್ರುತಿ ಮಾಕನೂರು, ಜೆ ಜೆ ಎಂ ಮೆಡಿಕಲ್ ಕಾಲೇಜಿನ ಡಾ. ವರದೇಂದ್ರ ಕುಲಕರ್ಣಿ, ಡಾ. ನಿಕೇತನ್ ಬಿ. ಮುಂತಾದವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾಲೇಜು ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು.