ಒಬಿಸಿ ಪಟ್ಟಿಗೆ ವೀರಶೈವ-ಲಿಂಗಾಯತ ಸೇರ್ಪಡೆಗೆ ಆಗ್ರಹಿಸಿ ರ್ಯಾಲಿ

ಬೀದರ್:ಆ.2: ವೀರಶೈವ- ಲಿಂಗಾಯತ ಸಮುದಾಯವನ್ನು ಕೇಂದ್ರ ಸರ್ಕಾರದ ಇತರ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ನಗರದಲ್ಲಿ ಸೋಮವಾರ ಮೆರವಣಿಗೆ ನಡೆಸಿದರು.
ನಗರದ ಬಸವೇಶ್ವರ ವೃತ್ತದಿಂದ ಮಹಾವೀರ ವೃತ್ತ, ಭಗತ್‍ಸಿಂಗ್ ವೃತ್ತ, ತಹಶೀಲ್ದಾರ್ ಕಚೇರಿ, ಶಿವಾಜಿ ವೃತ್ತದ ಮಾರ್ಗವಾಗಿ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಿದರು.
ವೀರಶೈವ- ಲಿಂಗಾಯತ ಸಮುದಾಯವನ್ನು ರಾಜ್ಯದಲ್ಲಿ 60 ವರ್ಷಗಳಿಂದ ಇತರ ಹಿಂದುಳಿದ ವರ್ಗಗಳ ಸಾಲಿನಲ್ಲಿ ಗುರುತಿಸಲಾಗಿದೆ. ಆದರೆ, ಕೇಂದ್ರ ಸರ್ಕಾರದ ಇತರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸದ ಕಾರಣ ಸಮುದಾಯದವರು ಶೈಕ್ಷಣಿಕ ಸಂಸ್ಥೆಗಳ ನೇಮಕಾತಿ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಸೌಲಭ್ಯಗಳಿಂದ ವಂಚಿತರಾಗುವಂತಾಗಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ವೈಜಿನಾಥ ಕಮಠಾಣೆ ಅಸಮಾಧಾನ ವ್ಯಕ್ತಪಡಿಸಿದರು.
ಎಲ್ಲ ರಾಜ್ಯಗಳಲ್ಲಿಯೂ ವೀರಶೈವ-ಲಿಂಗಾಯತ ಸಮುದಾಯ ಇತರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿದೆ. ಆದರೆ, ಕೇಂದ್ರದ ಒಬಿಸಿಪಟ್ಟಿಯಲ್ಲಿ ಸೇರಿಸದೇ ಇರುವುದು ದುರದೃಷ್ಟಕರ ಎಂದರು.
ವೀರಶೈವ-ಲಿಂಗಾಯತ ಸಮುದಾಯ ಬಹುತೇಕ ಕೃಷಿ ಹಾಗೂ ಕೃಷಿ ಆಧಾರಿತ ಕಸುಬುಗಳನ್ನು ಅವಲಂಬಿಸಿದೆ. ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದೆ. ಹೀಗಾಗಿ ಕೇಂದ್ರ ಸರ್ಕಾರದ ಇತರ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.ಜಿ.ಪಂ. ಮಾಜಿ ಉಪಾಧ್ಯಕ್ಷ ಕುಶಾಲ್ ಯಾಬಾ, ಮೆರವಣಿಗೆಯ ಜಿಲ್ಲಾ ಉಸ್ತುವಾರಿ ಶಿವನಾಥ ಪಾಟೀಲ, ಭಾಲ್ಕಿ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಮಡಿವಾಳಪ್ಪ ಮಂಗಲಗಿ, ಜೈರಾಜ್ ಖಂಡ್ರೆ, ಮಹಾಸಭಾ ಜಿಲ್ಲಾ ಘಟಕದ ಕಾರ್ಯದರ್ಶಿ ಸಂಗಶೆಟ್ಟಿ ಹಲಬುರ್ಗೆ, ಕಾನೂನು ಸಲಹೆಗಾರ ದಿಲೀಪ್ ಕಮಠಾಣೆ,ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಂಗಮೇಶ ಮೂಲಗೆ, ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಮಾನಶೆಟ್ಟಿ ಬೆಳಕೇರಿ,ಶಶಿಕಾಂತ ದುರ್ಗೆ, ಬಾಬುರಾವ್ ಪೋಚಂಪಳ್ಳಿ, ಜಗನ್ನಾಥ ಹಲಮಂಡಗೆ, ಮಲ್ಲಿಕಾರ್ಜುನ ಹಲಮಂಡಗೆ,ಪ್ರಮುಖರಾದ ಶಿವಕುಮಾರ ಭಾಲ್ಕೆ, ನಾಗನಾಥ ಹೇಮಶೆಟ್ಟಿ, ಬಸವರಾಜ ಮಲ್ಕಪ್ಪನೋರ್, ರಾಜಕುಮಾರ ಹಲಬರ್ಗೆ, ಅಶೋಕ ಬಾವಗೆ, ಸುಭಾಷ್ ಕಾರಾಮುಂಗೆ, ರಮೇಶ ಲೋಖಂಡೆ, ಸಂದೀಪ್ ಪ್ರಭಾ, ಸತೀಶ್ ಯಾಬಾ, ವೈಜಿನಾಥ ಬಿರಾದಾರ, ಚಿನ್ನಮ್ಮ ಬಾವುಗೆ ಮತ್ತಿತರರು ಭಾಗವಹಿಸಿದ್ದರು.