ಒಪ್ಪಂದದಂತೆ ರಾಜೀನಾಮೆ ನೀಡಿ: ಎಸ್.ಎಲ್.ಮೋಹನ್ ಒತ್ತಾಯ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮಾ.21: ಒಪ್ಪಂದದ ನಿಯಮ ಪಾಲಿಸಿ ಬಿ.ಎಲ್.ದೇವರಾಜು ಅವರು ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ನೈತಿಕತೆಯನ್ನು ಪ್ರದರ್ಶಿಸುವಂತೆ ಟಿ.ಎ.ಪಿ.ಸಿ.ಎಂ.ಎಸ್ ನ 08 ಜನ ನಿರ್ದೇಶಕರು ಪತ್ರಿಕಾ ಗೋಷ್ಠಿ ನಡೆಸಿ ಒತ್ತಾಯಿಸಿದ್ದಾರೆ.
ಪಟ್ಟಣದ ಟಿ.ಎ.ಪಿ.ಸಿ.ಎಂ.ಎಸ್ ಆವರಣದಲ್ಲಿ ಟಿ.ಎ.ಪಿ.ಸಿ.ಎಂ.ಎಸ್ ನಿರ್ದೇಶಕ ಹಾಗೂ ರಾಜ್ಯ ಸಹಕಾರ ಮಾರಾಟ ಮಹಾ ಮಂಡಲಿಯ ನಿರ್ದೇಶಕ ಶೀಳನೆರೆ ಎಸ್.ಎಲ್.ಮೋಹನ್ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿದ ಭಿನ್ನಮತೀಯ ಟಿ.ಎ.ಪಿ.ಸಿ.ಎಂ.ಎಸ್ ನಿರ್ದೇಶಕರು ಅಧ್ಯಕ್ಷ ಬಿ.ಎಲ್.ದೇವರಾಜು ಅವರ ರಾಜೀನಾಮೆಗೆ ಒತ್ತಾಯಿಸಿದರು.
ನಿರ್ದೇಶಕ ಎಸ್.ಎಲ್.ಮೋಹನ್ ಮಾತನಾಡಿ 14 ಜನ ನಿರ್ದೇಶಕರಲ್ಲಿ ನಾನೂ ಸೇರಿದಂತೆ 08 ಜನ ನಿರ್ದೇಶಕರು ಹಾಲಿ ಅಧ್ಯಕ್ಷ ಬಿ.ಎಲ್.ದೇವರಾಜು ಅವರ ರಾಜೀನಾಮೆಗೆ ಕಳೆದ ಒಂದು ವರ್ಷದಿಂದಲೂ ಒತ್ತಾಯಿಸುತ್ತಿದ್ದೇವೆ. ಇಂದು ಕರೆಯಲಾಗಿದ್ದ ಸಭೆಗೆ ಅಧ್ಯಕ್ಷರೇ ಗೈರು ಹಾಜರಾಗಿದ್ದಾರೆ. ಕಳೆದ ಒಂದು ವರ್ಷದಿಂದಲೂ ಕೋರಂ ಕೊರತೆಯಿಂದ ಸಂಘದ ಆಡಳಿತ ವ್ಯವಸ್ಥಿತವಾಗಿ ನಡೆಯುತ್ತಿಲ್ಲ. ಆಡಳಿತ ಒಪ್ಪಂದದಂತೆ ಹಾಲಿ ಅಧ್ಯಕ್ಷ ಬಿ.ಎಲ್.ದೇವರಾಜು ಅವರಿಗೆ 30 ತಿಂಗಳ ಅವಧಿ ನೀಡಲಾಗಿತ್ತು. ಇದೀಗ 42 ತಿಂಗಳು ಕಳೆದಿದ್ದರೂ ಅವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ಮೇಲ್ಪಂಕ್ತಿ ಹಾಕುತ್ತಿಲ್ಲ. ನಿರ್ದೇಶಕರ ಅಸಹಕಾರದ ನಡುವೆಯೂ ಅಧ್ಯಕ್ಷರು ರಾಜಕೀಯ ಮಹತ್ವಾಕಾಂಕ್ಷೆಯಿಂದ ಅಧ್ಯಕ್ಷ ಸ್ಥಾನಕ್ಕೆ ಅಂಟಿಕೊಂಡು ಕುಳಿತಿದ್ದಾರೆ. ಬಿ.ಎಲ್.ದೇವರಾಜು ಅವರಿಗೆ ಸಹಕಾರ ಸಂಸ್ಥೆಯ ಅಭಿವೃದ್ದಿಗಿಂತಲೂ ಅಧಿಕಾರವೇ ಮುಖ್ಯವಾಗಿದೆ. ರಾಜ್ಯದಲ್ಲಿ ಸರ್ಕಾರ ಬದಲಾಗುತ್ತಿದ್ದಂತೆಯೇ ಜಿಲ್ಲಾ ಸಹಕಾರ ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ಸಿ.ಪಿ.ಉಮೇಶ್ ರಾಜೀನಾಮೆ ನೀಡಿದರು. ಮನ್ ಮುಲ್ ಅಧ್ಯಕ್ಷರೂ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ಮೌಲ್ಯವನ್ನು ಎತ್ತಿ ಹಿಡಿದರು. ಪಟ್ಟಣದ ಪಿ.ಎಲ್.ಡಿ ಬ್ಯಾಂಕ್ ಆಡಳಿತ ಮಂಡಲಿಯವರೂ ಕೂಡ ಕಾಲ ಕಾಲಕ್ಕೆ ತಮ್ಮಲ್ಲಿ ಆದ ಒಪ್ಪಂದಕ್ಕೆ ಬದ್ದರಾಗಿ ರಾಜೀನಾಮೆ ನೀಡಿ ಹೊಸಬರಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಟಿ.ಎ.ಪಿ.ಎಂ.ಎಸ್ ಆಡಳಿತ ಮಂಡಲಿಯ ಎಲ್ಲಾ 14 ಜನ ನಿರ್ದೇಶಕರೂ ಯೋಗ್ಯರಿದ್ದೇವೆ ಸಂಸ್ಥೆ 1 ಕೋಟಿ 80 ಲಕ್ಷ ಸಾಲ ಮಾಡಿದ್ದರೂ ಸಾಲದ ಬಡ್ಡಿ ಕಟ್ಟಿಕೊಂಡು ಲಾಭದಾಯವಾಗಿ ಮುನ್ನಡೆಯುತ್ತಿದೆ. ಆದರೆ ಅಧ್ಯಕ್ಷರು ನಿರ್ದೇಶಕರುಗಳನ್ನು ವಿಶ್ವಾಸದಿಂದ ನಡೆಸಿಕೊಳ್ಳದ ಕಾರಣ ಅಭಿವೃದ್ದಿಗೆ ಹಿನ್ನಡೆಯಾಗಿದೆ. ಅಧ್ಯಕ್ಷರು ನಮ್ಮ ಜೊತೆ ಸಹಕರಿಸಿದ್ದರೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಮ್ಮ ರಾಜ್ಯ ಸಭಾ ಅನುದಾನದಿಂದ ನಮ್ಮ ಸಂಸ್ಥೆಗೆ 50 ಲಕ್ಷ ಅನುದಾನ ಕೊಡಲು ಸಿದ್ದರಿದ್ದರು. ಅದೇ ರೀತಿ ಸಂಸದೆ ಸುಮಲತಾ ಅವರು ಅನುದಾನ ನೀಡುವ ಭರವಸೆ ನೀಡಿದ್ದರು. ಅಧ್ಯಕ್ಷರು ಸ್ಪಂಧಿಸಿದ್ದರೆ ಟಿ.ಎ.ಪಿ.ಸಿ.ಎಂ.ಎಸ್ ಅಭಿವೃದ್ದಿ ಪಥದತ್ತ ದಾಪುಗಾಲು ಹಾಕುತ್ತಿತ್ತು. ಆದರೆ ಅಧ್ಯಕ್ಷರ ಹಠಮಾರಿತನ ಧೋರಣೆಯಿಂದ ಸಂಘ ಅದೋಗತಿಯ ಕಡೆಗೆ ಸಾಗುತ್ತಿದೆ ಎಂದು ಆರೋಪಿಸಿದರು.
ಬಳಕೆಯಾಗದ ಹಣ: ರಾಜ್ಯ ಸಹಕಾರ ಮಾರಟ ಮಹಾಮಂಡಲಿಯ ನಿರ್ದೇಶಕನಾಗಿ ನಾನು ಟಿ.ಎ.ಪಿ.ಸಿ.ಎಂ.ಎಸ್ ಅಭಿವೃದ್ದಿಗೆ ಮಾರಾಟ ಮಹಾಮಂಡಲಿಯ ವತಿಯಿಂದ ಈಗಾಗಲೇ 15 ಲಕ್ಷ ರೂ ಸಹಾಯ ಧನ ಕೊಡಿಸಿದ್ದೇನೆ. ಅದರ ಸದ್ಬಳಕೆಯಾಗಿದ್ದರೆ ಮತ್ತಷ್ಟು ಹಣ ಕೊಡಿಸುತ್ತಿದ್ದೆ. ಇದೇ ರೀತಿ ಈ ಹಿಂದೆ ಕ್ಷೇತ್ರದ ಶಾಸಕರಾಗಿದ್ದ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಟಿ.ಎ.ಪಿ.ಎಂ.ಎಸ್ ಒಳ ಆವರಣದ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ 40 ಲಕ್ಷ ರೂ ಅನುದಾನ ಕೊಡಿಸಿದ್ದರು. ಅದೂ ಕೂಡ ಬಳಕೆಯಾಗದೆ ಸರ್ಕಾರಕ್ಕೆ ವಾಪಸ್ ಹೋಗಿದೆ. ಅಧ್ಯಕ್ಷರು ಅಭಿವೃದ್ದಿಯ ಕಡೆಗೆ ಆಸಕ್ತಿ ವಹಿಸಿದ್ದರೆ ರಾಜ್ಯದಲ್ಲಿ ಅವರದೇ ಆದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು ವಾಪಸ್ ಹೋಗಿರುವ 40 ಲಕ್ಷ ರೂ ಅನುದಾನವನ್ನು ಮರಳಿ ತಂದು ಅಭಿವೃದ್ದಿ ಮಾಡಬಹುದಿತ್ತು. ಬಿ.ಎಲ್.ದೇವರಾಜು ಕ್ಷೇತ್ರದ ಹಿರಿಯ ರಾಜಕಾರಣಿ. ಮೂರು ಬಾರಿ ಶಾಸನ ಸಭೆ ಚುನಾವಣೆಗೆ ಸ್ಪರ್ಧಿಸಿದ್ದವರು. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷರಾಗಿ ಮತ್ತು ಜಿಲ್ಲಾ ಪಂಚಾಯತಿ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ. ಅವರು ತಮ್ಮ ವ್ಯಕ್ತಿತ್ವಕ್ಕೆ ತಕ್ಕಂತೆ ಜವಾಬ್ದಾರಿಯಿಂದ ನಡೆದುಕೊಂಡು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರಾದರೂ ಅವರಿಗೆ ಬುದ್ದಿ ಹೇಳಿ ರಾಜೀನಾಮೆ ಕೊಡಿಸುವಂತೆ ಆಗ್ರಹಿಸಿದ ಎಸ್.ಎಲ್.ಮೋಹನ್ ಬಿ.ಎಲ್.ದೇವರಾಜು ಅವರ ನಡೆ ತಾಲೂಕು ಟಿ.ಎ.ಪಿ.ಸಿ.ಎಂ.ಎಸ್ ಕಟ್ಟಿ ಬೆಳೆಸಿದ ಹಿರಿಯ ಸಹಕಾರಿ ಧುರೀಣ ಎಸ್.ಎಂ.ಲಿಂಗಪ್ಪ ಅವರ ಅಶಯಕ್ಕೆ ವಿರುದ್ದವಾಗಿದೆ ಎಂದು ಟೀಕಿಸಿದರು. ಟಿ.ಎ.ಪಿ.ಎಂ.ಎಸ್ ಉಪಾಧ್ಯಕ್ಷ ಎಸ್.ಜಿ.ಮೋಹನ್, ನಿರ್ದೇಶಕರಾದ ಕೊರಟೀಕೆರೆ ದಿನೇಶ್, ಟಿ.ಬಲದೇವ್, ನಾಗರಾಜು, ಮಂಜುನಾಥ್, ಸುಕನ್ಯ ಹಾಗೂ ಮುಖಂಡ ರಾಮಕೃಷ್ಣೇಗೌಡ ಸುದ್ದಿಗೋಷ್ಠಿಯಲ್ಲಿದ್ದು ಮಾತನಾಡಿದರು.