ಒಪೆಕ್ ಆಸ್ಪತ್ರೆಗೆ ಸಹಾಯಕ ಆಯುಕ್ತರಿಂದ ಹೊಸ ಸ್ಪರ್ಶ

೪೪ ಸಿಸಿ ಕ್ಯಾಮರಾ,ಹೂವಿನ ಕುಂಡ ಇಟ್ಟು ಶೃಂಗಾರ
ರಾಯಚೂರು.ಜೂ.೨-ಸರ್ಕಾರಿ ಆಸ್ಪತ್ರೆಗಳು ಎಂದರೆ ರೋಗಿಗಳು ಹೋಗಲು ಹಿಂದೇಟು ಹಾಕುವ ಈ ಸಂದರ್ಭದಲ್ಲಿ ಓಪೆಕ್ ನೆರವಿನಲ್ಲಿ ಜಿಲ್ಲೆಯ ರಾಜೀವ್ ಗಾಂಧಿ ಸ್ಮಾರಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಹೈಟೆಕ್ ಸ್ಪರ್ಶ ಕೊಡಲಾಗಿದೆ.
ಕೊರೊನಾ ರೋಗಿಗಳ ವಿಶೇಷ ಆಸ್ಪತ್ರೆಯಲ್ಲಿ ದಾಖಲಾಗುವ ಕೊರೊನಾ ಸೋಂಕಿತರಿಗೆ ಸರಿಯಾಗಿ ಚಿಕಿತ್ಸೆ ದೊರೆಯುತ್ತಿಲ್ಲ,ಸಿಬ್ಬಂದಿ ಅಸಭ್ಯವಾಗಿ ವರ್ತಿಸುತ್ತಾರೆ ಹಾಗೂ ಸ್ವಚ್ಛತೆ ಎಂಬುದು ಇಲ್ಲವೇ ಇಲ್ಲ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಆಸ್ಪತ್ರೆ ಉಸ್ತುವಾರಿಯಾಗಿ ನೇಮಕಗೊಂಡಿರುವ ಸಹಾಯಕ ಆಯುಕ್ತ ಸಂತೋಷ ಕಾಮಗೌಡ ಆಸ್ಪತ್ರೆ ಆಕರ್ಷಣೆಗೊಳಿಸಿದ್ದಾರೆ.
ಆಸ್ಪತ್ರೆಯ ಆವರಣ,ವಾರ್ಡ್ ನ ಎಲ್ಲೆಂದರಲ್ಲಿ ಕಸ ಬಿದ್ದಿರುವುದು ಸ್ವಚ್ಛತೆ ಇಲ್ಲದ ಶೌಚಾಲಯಗಳು ಹೀಗೆ ಅವ್ಯವಸ್ಥೆಯ ಆಗರ ಎನ್ನುವಂತಿದ್ದ ಆಸ್ಪತ್ರೆಯಲ್ಲಿ ಸುಧಾರಣೆ ತರುವ ಮೂಲಕ ಒಪೆಕ್ ಆಸ್ಪತ್ರೆಗೆ ಸ್ವಚ್ಚ ಮಾಡಿ ಶೃಂಗಾರಗೊಳಿಸಿದ್ದಾರೆ.ಆಸ್ಪತ್ರೆಯಲ್ಲಿ ಹೂವಿನ ಕುಂಡ ಗಳು ಇಡುವುದರ ಜೊತೆಗೆ ರೋಗಿಗಳೊಂದಿಗೆ ಆಸ್ಪತ್ರೆಯ ಸಿಬ್ಬಂದಿಯ ಅನುಚಿತವಾಗಿ ವರ್ತನೆ ಮಾಡದಂತೆ ನಿಗಾವಹಿಸಿ ವಾರ್ಡ್‌ನಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳ ಮೇಲೆ ನಿಗಾ ಇಡಲು ೪೫ ಸಿಸಿ ಕ್ಯಾಮೆರಾಗಳನ್ನು ಕೂಡಿಸಿ ಅದನ್ನು ಜಿಲ್ಲಾಧಿಕಾರಿಗಳ ನಿಯಂತ್ರಣ ಕೋಣೆಯಲ್ಲಿ ಮತ್ತು ತಮ್ಮ ಮೊಬೈಲ್‌ನಲ್ಲೂ ಸಹನೋಡುವ ವ್ಯವಸ್ಥೆ ಮಾಡಿದ್ದಾರೆ. ಇದರಿಂದ ವೈದ್ಯರ ಮತ್ತು ಸಿಬ್ಬಂದಿಯ ಕಾರ್ಯಕ್ಷಮತೆ ಮೇಲೆ ನಿಗಾ ಇಟ್ಟಂತೆ ಆಗುವುದಲ್ಲದೇ ವಾರ್ಡ್‌ನಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಮತ್ತು ಸ್ವಚ್ಛತೆ ಇಲ್ಲದಂತಹ ಘಟನೆಗಳು ಜರುಗಿದರೆ ಸಿಸಿ ಕ್ಯಾಮೆರಾದಲ್ಲಿ ವೀಕ್ಷಿಸಿ ತಕ್ಷಣವೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಸ್ಪತ್ರೆಯ ಉಸ್ತುವಾರಿಯವರು ತಿಳಿಸಿದ್ದಾರೆ.
ಹೀಗಾಗಿ ಒಪೆಕ್ ಮತ್ತು ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಹಿಂದೇಟು ಹಾಕುತ್ತಿರುವುದನ್ನು ದೂರ ಮಾಡಲು ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಂಡು ಆಸ್ಪತ್ರೆಗೆ ಕಾರ್ಪೊರೇಟ್ ವ್ಯವಸ್ಥೆಯ ಸೊಬಗು ನೀಡಲಾಗಿದೆ ಎಂದು ಹೇಳಿದರು.